
ಇತ್ತೀಚೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸಿಕ್ಕಿದ್ದರು. ಜೊತೆಯಲ್ಲಿ ಚಹ ಕುಡಿದೆವು. ಅದೂ ಇದೂ ಮಾತನಾಡುತ್ತಾ ನಾನು ಉಪ್ಪಿನಂಗಡಿಯ ಮಂಜ ಬೈದ್ಯನ ಕತೆ ಅವರಿಗೆ ಹೇಳಿದೆ.
ಕಲ್ಯಾಣಪ್ಪನ ಕಾಟುಕಾಯಿಯಲ್ಲಿ ಸೇರಿಕೊಂಡು ಹೋರಾಡಿದ್ದ ಮಂಜ ಬೈದ್ಯನನ್ನು ಕೊನೆಯಲ್ಲಿ ಬ್ರಿಟಿಷರು ಬಿಕರ್ನಕಟ್ಚೆಯಲ್ಲಿ ಬಹಿರಂಗವಾಗಿ ಗಲ್ಲಿಗೆ ಹಾಕಿದ್ದರು. 188 ವರ್ಷಗಳಾಗಿವೆ. ಆತನ ನೆನಪೇ ನಮಗಿಲ್ಲ ಎಂಬ ಹಾಗಾಗಿದೆ. ಮಂಜ ಬೈದ್ಯನ ನೆನಪು ಶಾಶ್ವತವಾಗಿರಲು ನೀವು ಏನಾದರೂ ಮಾಡಬೇಕು, ನೋಡಿ ಅಂತ ಹೇಳಿದ್ದೆ.ಇಂದು ಮೇ 27. ಉಪ್ಪಿನಂಗಡಿ ಮಂಜ ಬೈದ್ಯ ಹುತಾತ್ಮನಾದ ದಿನ. ಅಶೋಕ್ ಕುಮಾರ್ ರೈ ಉಪ್ಪಿನಂಗಡಿಯಲ್ಲಿ ಮುಖ್ಯ ವೃತ್ತಕ್ಕೆ ಮಂಜ ಬೈದ್ಯನ ಹೆಸರಿಡುವುದಾಗಿಯೂ, ಗೆಜ್ಜೆಗಿರಿಯಲ್ಲಿ ಆತನ ಪ್ರತಿಮೆ ಸ್ಥಾಪಿಸುವುದಾಗಿಯೂ ಘೋಷಿಸಿದ್ದಾರೆ.
ಖುಷಿಯಾಯ್ತು. ನಮ್ಮೂರಿನ ಕ್ರಾಂತಿವೀರನ ನೆನಪು ಚಿರಸ್ಥಾಯಿಯಾಗಿದೆ.1837 ರಲ್ಲಿ ನಡೆದ ಕಲ್ಯಾಣಪ್ಪನ ಕಾಟುಕಾಯಿ ಎಂಬ ದಕ್ಷಿಣ ಕನ್ನಡದ ರೈತ ಬಂಡಾಯದ ಉಪ ದಂಡನಾಯಕ ಮಂಜಬೈದ್ಯ.
ಬ್ರಿಟಿಷರು ಹೇರಿದ ಅಧಿಕ ಕಂದಾಯ,ಕಂದಾಯವನ್ನು ಹಣದ ರೂಪದಲ್ಲೇ ಕೊಡಬೇಕೆಂಬ ಆದೇಶ, ಬೆಳೆ ತೆರಿಗೆ ಕಾರಣಕ್ಕೆ ನಡೆದ ಬಂಡಾಯದಲ್ಲಿ ಉಪ್ಪಿನಂಗಡಿಯ ಖಜಾನೆ ಗುಮಾಸ್ತ ಮಂಜ ಬೈದ್ಯ ಬ್ರಿಟಿಷ್ ಸರಕಾರಕ್ಕೆ ತಿರುಗಿಬಿದ್ದು ಹೋರಾಟ ಮಾಡಿದ್ದ.
ಕಲ್ಯಾಣಪ್ಪನ ಕಾಟುಕಾಯಿ 1837 ಎಪ್ರಿಲ್ 5 ರಂದು ಮಂಗಳೂರು ತಲುಪಿ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ಬ್ರಿಟಿಷ್ ಧ್ವಜ ಇಳಿಸಿ,ಕ್ರಾಂತಿಕಾರಿ ಧ್ವಜ ಹಾರಿಸಿ, ಹದಿಮೂರು ದಿನಗಳ ಕಾಲ ಆಡಳಿತ ನಡೆಸಿದ್ದರು. ಮುಂದೆ ಈ “ಕೆನರಾ ದಂಗೆ”ಯನ್ನು ಬ್ರಿಟಿಷ್ ಸೇನೆ ಹತ್ತಿಕ್ಕಿತು. ಬಂಧಿಸಲ್ಪಟ್ಟ ಹೋರಾಟಗಾರರಲ್ಲಿ ಉಪ್ಪಿನಂಗಡಿ ಮಂಜ ಬೈದ್ಯನೂ ಇದ್ದ. ಬ್ರಿಟಿಷ್ ಆಡಳಿತ ಕೋರ್ಟ್ ಮಾರ್ಷಲ್ ನಡೆಸಿ, ಉಪ್ಪಿನಂಗಡಿ ಮಂಜ ಬೈದ್ಯ, ಅಪ್ಪಯ್ಯ ಗೌಡ, ಕಲ್ಯಾಣಸ್ವಾಮಿ ಪುಟ್ಟಬಸಪ್ಪ, ನಂದಾವರ ಲಕ್ಷ್ಮಪ್ಪ ಬಂಗರಸರಿಗೆ ಗಲ್ಲು ಶಿಕ್ಷೆ ವಿಧಿಸಿತು.
1837 ಮೇ 27 ರಂದು ಮಂಗಳೂರಿನಲ್ಲಿ ಉಪ್ಪಿನಂಗಡಿ ಮಂಜ ಬೈದ್ಯನನ್ನು ಬಹಿರಂಗವಾಗಿ ಗಲ್ಲಿಗೇರಿಸಲಾಯಿತು. ಆ ಶವ ಗಲ್ಲುಗಂಬದಲ್ಲೇ ಕೊಳೆತು ಬೀಳುವಂತೆ ನೋಡಿಕೊಳ್ಳಲಾಯಿತು.
ಇದು ಚರಿತ್ರೆ.ಒಬ್ಬ ಶಾಸಕ ತನ್ನ ಕ್ಷೇತ್ರದ ಚರಿತ್ರೆಯ ನೆನಪುಗಾರನಿದ್ದಾಗ ಮಾತ್ರಾ ಇದು ಸಾಧ್ಯವಾಗುತ್ತದೆ.
Congratulations ಅಶೋಕ್ ಕುಮಾರ್ ರೈ. Well done*ಗೋಪಾಲಕೃಷ್ಣ ಕುಂಟಿನಿ