ಕುಮಟಾ : ಕುಮಟಾ ತಾಲೂಕಿನ ಹೊಲನಗದ್ದೆ ಕಡ್ಲೆಯ ಅರಬ್ಬೀ ಸಮುದ್ರ ತೀರದಲ್ಲಿ ಅಪರೂಪದ ಬಿಳಿ ತೊರ್ಕೆ ಮೀನು ಬಲೆಯಲ್ಲಿ ಸಿಕ್ಕಿಬಿದ್ದಿದೆ. ಅಪರೂಪಕ್ಕೆ ಸಿಗುವ ಈ ಮೀನು ಅತ್ಯಂತ ಬಲಶಾಲಿಯಾಗಿರುತ್ತದೆ. ಬಲೆಗೆ ಬಿದ್ದ ಮೀನಿನ ತೂಕ ಅಂದಾಜು 30-35 ಕೆಜಿ ಇರಬಹುದು ಎಂದು ಮೀನುಗಾರರು ತಿಳಿಸಿದ್ದಾರೆ. ಇದು ಸಾಮಾನ್ಯ ಮೀನು ಬಲೆಯನ್ನು ಇದು ತುಂಡರಿಸಿ ಹೋಗುತ್ತದೆ. ಹೀಗಾಗಿ ಇದು ಬಲೆಯಲ್ಲಿ ಸಿಕ್ಕಿ ಬೀಳುವುದು ಕಡಿಮೆ.

ಸಮುದ್ರ ತೀರದಿಂದ ಸುಮಾರು 5 ರಿಂದ 10 ನಾಟಿಕಲ್ ಮೈಲಿ ಒಳಗಡೆಯೇ ವಾಸಿಸುವ ಈ ಬಿಳೆ ತೊರ್ಕೆ ಮೀನು ಸಿಗುವುದು. ಈ ಬಿಳಿ ತೊರ್ಕೆ (stingray) ಮೀನು ಹೆಚ್ಚಾಗಿ ಸಮುದ್ರ ತೀರದ ಸನಿಹವೇ ಕಂಡುಬರುತ್ತವೆ. ಆದರೆ ಕಪ್ಪು ಬಣ್ಣದ ತೊರ್ಕೆ ಮೀನು ಆಳ ಸಮುದ್ರದಲ್ಲಿ ವಾಸಿಸುತ್ತಿದ್ದು ಪರ್ಶಿಯನ್ ಬೋಟುಗಳ ಮೀನುಗಾರಿಕೆಯಲ್ಲಿ ಬಲೆಗೆ ಸಿಕ್ಕಿ ಬೀಳುತ್ತದೆ. ಬಿಳಿ ತೊರ್ಕೆ ಮೀನಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಕೆಜಿಗೆ 200 ರೂಪಾಯಿ ವರೆಗೆ ಬೆಲೆ ಇದೆಯಂತೆ. ಬಿಳಿ ತೊರ್ಕೆ ಮೀನು ಕಳೆದ ನಾಲ್ಕೈದು ವರ್ಷದಲ್ಲಿ ಕಡ್ಲೆ ತೀರದಲ್ಲಿ ಬಲೆಗೆ ಸಿಕ್ಕಿಬಿದ್ದಿದ್ದು ಇದೆ ಮೊದಲು ಎಂದು ಮಂಜುನಾಥ ಅಂಬಿಗ ಹೇಳುತ್ತಾರೆ.

ತೊರ್ಕೆ (stingray) ಮೀನು ಸಮುದ್ರ ಮೀನುಗಳ ಒಂದು ಗುಂಪು, ಕಾರ್ಟಿಲ್ಯಾಜಿನಸ್ ಮೀನುಗಳ ಒಂದು ವಿಧ. ಅವುಗಳನ್ನು ಮೈಲಿಯೊಬಾಟಿಫಾರ್ಮ್ಸ್ ಕ್ರಮದ ಮೈಲಿಯೊಬಾಟೊಯಿಡೆಯ ಉಪವರ್ಗದಲ್ಲಿ ವರ್ಗೀಕರಿಸಲಾಗಿದೆ ಮತ್ತು ಎಂಟು ಕುಟುಂಬಗಳನ್ನು ಒಳಗೊಂಡಿದೆ. ಪ್ರಪಂಚದಾದ್ಯಂತ ಉಷ್ಣವಲಯ ಮತ್ತು ಉಪೋಷ್ಣವಲಯದ ಕರಾವಳಿಗೆ ಹೊಂದಿಕೊಂಡ ಸಮುದ್ರ ನೀರಿನಲ್ಲಿ ಇವುಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಇವು ಬೇರೆ ಬೇರೆ ಕಾರಣಗಳಿಂದ ಅಳಿವಿನಂಚಿನಲ್ಲಿದೆ ಎಂದು ಹೇಳಲಾಗುತ್ತಿದೆ.

ಈ ಮೀನಿನ ಬಾಲ ತಾಗಿದಲ್ಲಿ ಕಾಲಿನಿಂದ ತಲೆಯ ತನಕ ನೋವಾಂಟುಗುತ್ತದೆ. ಕೆಲವೊಮ್ಮೆ ಅದರ ಬಾಲ ಚುಚ್ಚಿದರೆ ಮೀನುಗಾರ ಎಚ್ಚರ ತಪ್ಪಿ ಬೀಳುವ ಸಂಭವವೂ ಇರುತ್ತದೆ ಎಂದು ಮೀನುಗಾರರು ಹೇಳುತ್ತಾರೆ. ತೊರ್ಕೆ ಮೀನಿನ ಬಾಲದ ತುಂಬಾ ಮುಳ್ಳಿದ್ದು ಅದು ತಾಗಿದಲ್ಲಿ ಅಸಾಧ್ಯ ನೋವು ಹಾಗೂ ತುರಿಕೆಯು ಉಂಟಾಗುತ್ತದೆ. ಈ ಕಾರಣಕ್ಕಾಗಿಯೇ ಈ ಮೀನಿಗೆ ಸ್ಥಳೀಯವಾಗಿ ತೊರ್ಕೆ ಮೀನು ಎಂದು ಕರೆಯುತ್ತಾರೆ ಎಂದು ಗಣಪತಿ ಅಂಬಿಗ ಹೇಳುತ್ತಾರೆ. ಟೈರ್ ನೂಲಿನಿಂದ ನೇಯ್ದ ಮಡ್ಲಿ ಬಲೆಯಲ್ಲಿ ಮಾತ್ರ ಈ ಮೀನು ಸಿಗುವ ಸಂಭವ ಇರುತ್ತದೆ ಎಂದು ಅವರು ಹೇಳುತ್ತಾರೆ.

ಇವು ಸಾಮಾನ್ಯವಾಗಿ ಆಕ್ರಮಣಕಾರಿಯಾಗಿರುವುದಿಲ್ಲ. ಆದರೆ ಪ್ರಚೋದನೆಗೆ ಒಳಗಾದಾಗ ಮನುಷ್ಯರ ಮೇಲೆ ದಾಳಿ ಮಾಡುತ್ತವೆ, ತೊರ್ಕೆ ಮೀನುಗಳು ಒಂದು, ಎರಡು ಅಥವಾ ಮೂರು ಬ್ಲೇಡ್‌ಗಳನ್ನು ಹೊಂದಬಹುದು. ಬೆನ್ನುಮೂಳೆಯ ಬ್ಲೇಡ್ ಅಥವಾ ಬ್ಲೇಡ್‌ಗಗಳು ತಾಗಿದರೆ ನೋವು, ಊತ, ಸ್ನಾಯು ಸೆಳೆತ ಮತ್ತು ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳಿಂದ ಸೋಂಕಿಗೆ ಕಾರಣವಾಗಬಹುದು. ಆದರೆ ಅದು ತನ್ನ ಬಾಲದಿಂದ ದೇಹದ ಸೂಕ್ಷ್ಮಭಾಗಗಳಿಗೆ ಚುಚ್ಚದ ಹೊರತು ಇದು ಜೀವಕ್ಕೆ ಅಷ್ಟೊಂದು ಅಪಾಯಕಾರಿಯಲ್ಲ.