ಬೆಳಗಾವಿ : ಕ್ರೀಡಾ ಭಾರತಿ ಹೆಬ್ರಿ ತಾಲೂಕು ಘಟಕ ಇವರ ವತಿಯಿಂದ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ರಥಸಪ್ತಮಿ 108 ಸೂರ್ಯ ನಮಸ್ಕಾರ ಯಜ್ಞ ನಡೆಯಿತು. ಅಮೃತ ಭಾರತಿ ಟ್ರಸ್ಟ ನ ಸದಸ್ಯ ಬಾಲಕೃಷ್ಣ ಮಲ್ಯ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಗ ಪ್ರಾತ್ಯಕ್ಷಿಕೆ ಯನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ , ಕ್ರೀಡಾ ಭಾರತಿಯ ಅಧ್ಯಕ್ಷ ಸೀತಾನದಿ ವಿಠಲ ಶೆಟ್ಟಿ ಮಾತನಾಡಿ ರಥಸಪ್ತಮಿ ಸೂರ್ಯನಿಗೆ ಪವಿತ್ರವಾದ ದಿನ. ಈ ದಿನ ಸೂರ್ಯನನ್ನು ಪೂಜಿಸುವುದರಿಂದ ಜನರಿಗೆ ಶಾಶ್ವತ ಫಲಗಳು ಲಭಿಸುತ್ತದೆ ಎಂದು ಹೇಳಲಾಗಿದೆ . ಈ ದಿನವನ್ನು ಸೂರ್ಯನ ಜನ್ಮದಿನವೆಂದು ಪರಿಗಣಿಸಲಾಗುತ್ತದೆ . ಈ ದಿನವನ್ನು ಸೂರ್ಯ ಜಯಂತಿ ಎಂತಲೂ ಕರೆಯಲಾಗುತ್ತದೆ. ಭೀಷ್ಮಾಚಾರ್ಯರು ತಮ್ಮ ದೇಹವನ್ನು ತೊರೆದು ಮೋಕ್ಷವನ್ನು ಪಡೆಯಲು ಈ ದಿನವನ್ನೇ ಆರಿಸಿಕೊಂಡರು ಎಂದು ನಂಬಲಾಗಿದೆ. ಕ್ರೀಡಾ ಭಾರತಿ ಈ ದಿನದಂದು 108 ಸೂರ್ಯ ನಮಸ್ಕಾರ ಯಜ್ಞವನ್ನು ಹಮ್ಮಿಕೊಂಡಿರುತ್ತದೆ ಎಂದರು. ಅಮೃತ ಭಾರತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ವನ್ನು ಮಾಡಿ ಸೂರ್ಯದೇವನಲ್ಲಿ ಪ್ರಾರ್ಥನೆಯನ್ನು ಮಾಡಿಕೊಂಡರು. ಕ್ರೀಡಾ ಭಾರತಿ ಕಾರ್ಯದರ್ಶಿ, ವಿಜಯ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು ವಸತಿ ನಿಲಯ ಪಾಲಕ ಶಿವಕುಮಾರ್ ಸಹಕರಿಸಿದರು.