ಕೋಲಾರ:
ಪಡಿತರ ಚೀಟಿದಾರರಿಗೆ ಪಡಿತರ ಚೀಟಿ ಜೊತೆಗೆ ಶೀಘ್ರವೇ ಅನ್ನಭಾಗ್ಯದ ಸ್ಮಾರ್ಟ್‌ ಕಾರ್ಡ್‌ ಕೊಡಲಾಗುವುದು. ಬಿಪಿಎಲ್‌ ಹಾಗೂ ಎಪಿಎಲ್‌ ಚೀಟಿದಾರರಿಗೆ ವಿತರಿಸಲಾಗುವುದು. ಇದು ಬಹು ಉಪಯೋಗಿ ಕಾರ್ಡ್‌ ಆಗಲಿದೆ’ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಅನ್ನಭಾಗ್ಯ ಯೋಜನೆಯಡಿ 1.13 ಕೋಟಿ ಕಾರ್ಡ್‌ದಾರರಿಗೆ ಅಂದರೆ ಸುಮಾರು 4 ಕೋಟಿ ಜನರಿಗೆ ಹಣ ಸಂದಾಯ ಮಾಡಿದ್ದೇವೆ. 2.66 ಲಕ್ಷ ಕಾರ್ಡ್‌ದಾರರು ಪೋಸ್ಟಲ್‌ ಇಲಾಖೆಯಲ್ಲಿ ಖಾತೆ ತೆರೆದಿದ್ದು, ಅವರಿಗೂ ಹಣ ಸಂದಾಯವಾಗುತ್ತಿದೆ. ಶೇ 90ರಷ್ಟು ಅಧಿಕ ಕಾರ್ಡ್‌ದಾರರಿಗೆ ಈಗಾಗಲೇ ಹಣ ತಲುಪಿದೆ. ಏಳು ಲಕ್ಷ ಕಾರ್ಡ್‌ದಾರರು ಬ್ಯಾಂಕ್‌ ಖಾತೆ ತೆರೆಯದಿರುವುದು ಸೇರಿದಂತೆ ವಿವಿಧ ಸಮಸ್ಯೆ ಇದೆ. ಅಂಥವರಿಗೆ ಹಣ ತಲುಪಿಲ್ಲ. ಅವರಿಗೂ ಹಣ ಸಂದಾಯ ಮಾಡಲು ಇಲಾಖೆ ಅಧಿಕಾರಿಗಳೇ ಖುದ್ದಾಗಿ ಕಾರ್ಡ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಶೇ 100 ಸಾಧನೆ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.