ನವದೆಹಲಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅಗತ್ಯ ವಸ್ತುಗಳನ್ನು ಪಡೆಯುವ ಉದ್ದೇಶಕ್ಕೆ ಪಡಿತರ ಚೀಟಿಯನ್ನು ನೀಡಲಾಗುತ್ತದೆ. ಅದನ್ನು ವಿಳಾಸ ಅಥವಾ ನಿವಾಸದ ಪುರಾವೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ದೆಹಲಿಯ ಕಟ್‌ಪುತಲಿ ಕಾಲನಿಯ ನಿವಾಸಿಗಳು ಪುನರ್ವಸತಿ ಯೋಜನೆಯಡಿ ಪರ್ಯಾಯ ವಸತಿ ಕೋರಿ ಸಲ್ಲಿಸಿದ ಅರ್ಜಿಗಳನ್ನು ವಿಚಾರಣೆ ನಡೆಸುವಾಗ ನ್ಯಾಯಮೂರ್ತಿ ಚಂದ್ರಧಾರಿ ಸಿಂಗ್ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿವಿಧ ಕಲ್ಯಾಣ ಯೋಜನೆಯ ಲಾಭ ಪಡೆಯಲು ಮತ್ತು ಅನಿಯಂತ್ರಿತ, ಕಾನೂನುಬಾಹಿರ ಚಟುವಟಿಕೆ ತಡೆಯಲು ಪಡಿತರ ಚೀಟಿ ಕಡ್ಡಾಯ ದಾಖಲೆಯಾಗಿ ಅಗತ್ಯವಿದೆ. ಪಡಿತರ ಚೀಟಿ ವಿತರಿಸುವ ಉದ್ದೇಶವು ನ್ಯಾಯಬೆಲೆ ಅಂಗಡಿಗಳ ಮೂಲಕ ಜನರು ಅಗತ್ಯ ಆಹಾರ ಪದಾರ್ಥಗಳನ್ನು ಖರೀದಿ ಮಾಡಲು ಅನುಕೂಲ ಮಾಡಿಕೊಡುವುದಾಗಿದೆ. ಇದು ಯಾವುದೇ ನಿವಾಸದ ಗುರುತಿನ ಪುರಾವೆಯಾಗುವುದಿಲ್ಲ. ಪಡಿತರ ಚೀಟಿದಾರರು ಕಾರ್ಡ್‌ನಲ್ಲಿ ನಮೂದಿಸಿರುವ ವಿಳಾಸದಲ್ಲಿಯೇ ಇದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಾಧಿಕಾರವು ಯಾವುದೇ ಧೃಡೀಕರಣ ವ್ಯವಸ್ಥೆಯನ್ನು ಹೊಂದಿಲ್ಲ. ಈ ದೇಶದ ನಾಗರಿಕರಿಗೆ ಸಮಂಜಸವಾದ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳುವುದು ಮಾತ್ರ ಪಡಿತರ ಚೀಟಿಯ ಗುರಿಯಾಗಿದೆ ಎಂದು ಕೋರ್ಟ್ ಹೇಳಿದೆ.

ಕಾನೂನಲ್ಲಿ ಏನಿದೆ?: ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು 2015ರಲ್ಲಿ ಹೊರಡಿಸಿದ ಗೆಜೆಟ್ ಅಧಿಸೂಚನೆ ಪ್ರಕಾರವಾಗಿಯೂ ಪಡಿತರ ಚೀಟಿಯನ್ನು ಗುರುತಿನ ದಾಖಲೆ ಅಥವಾ ನಿವಾಸದ ಪುರಾವೆಯಾಗಿ ಬಳಸಲು ಅನುಮತಿ ಇಲ್ಲ. ಪುನರ್ವಸತಿ ಮತ್ತು ಸ್ಥಳಾಂತರ ನೀತಿ ಪ್ರಕಾರ ಇತರ ಸಂಬಂಧಿತ ದಾಖಲೆಗಳನ್ನು ಸಲ್ಲಿಸಿದರೆ ನಿಯಮದ ಪ್ರಕಾರ ಅರ್ಜಿದಾರರಿಗೆ ಪರ್ಯಾಯ ವಸತಿ ನೀಡಲು ನ್ಯಾಯಾಲಯ ನಿರ್ದೇಶನ ನೀಡಿದೆ.

ಪ್ರಕರಣ ಏನು?: ಕಾಲನಿಯ ಹಲವು ನಿವಾಸಿಗಳಿಗೆ ಪ್ರತ್ಯೇಕ ಪಡಿತರ ಚೀಟಿಯನ್ನು ಕಡ್ಡಾಯಗೊಳಿಸಿ, ನಂತರ ಇಡೀ ಕಾಲನಿಯನ್ನು ನೆಲಸಮ ಮಾಡಲಾಗಿತ್ತು. ಅರ್ಹತಾ ಮಾನದಂಡವನ್ನು 2015ರಲ್ಲಿ ಇದ್ದಕ್ಕಿದ್ದಂತೆ ಬದಲಾಯಿಸುವ ಮೂಲಕ ಅಧಿಕಾರಿಗಳು ನಿಯಮ ಉಲ್ಲಂಘಿಸಿದ್ದಾರೆ. ತಮಗೆ ವಂಚನೆ ಆಗಿದೆ. ರೇಷನ್‌ ಕಾರ್ಡ್‌ನಲ್ಲಿ ತಮ್ಮ ವಿಳಾಸ ಇದ್ದು, ಈ ಜಾಗವನ್ನು ತಮಗೆ ಬಿಟ್ಟುಕೊಡಬೇಕು ಎಂದು ಸಂತ್ರಸ್ತರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.