ಬೆಳಗಾವಿ : ಲಿಂಗತ್ವ ಅಲ್ಪಸಂಖ್ಯಾತರು ಶಿಕ್ಷಣ ಮತ್ತು ಶಿಸ್ತನ್ನು ಕಲಿತುಕೊಂಡು ಎಲ್ಲ ಕ್ಷೇತ್ರದಲ್ಲಿಯೂ ಮೂಂಚೂಣಿಯಲ್ಲಿರಬೇಕು ಎಂದು ಧಾರ್ಮಿಕ ದತ್ತಿ ಇಲಾಖೆಯ ನಿಕಟ ಪೂರ್ವ ಉಪಾಯುಕ್ತ ರವಿ ಕೋಟಾರಗಸ್ತಿ ಅಭಿಪ್ರಾಯಪಟ್ಟರು.
ಸಂವಾದ ಫೆಲೋಶಿಪ್ ಮತ್ತು ಹ್ಯೂಮಾನಿಟಿ ಫೌಂಡೇಶನನ ಸಂಯುಕ್ತಾಶ್ರಯದಲ್ಲಿ ಬೆಳಗಾವಿಯ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಬದುಕು ಮತ್ತು ಬವಣೆ ಕುರಿತು ಸಂವಿಧಾನ ಸಾಥಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಧಾರ್ಮಿಕ ದತ್ತಿ ಇಲಾಖೆಯ ನಿಕಟ ಪೂರ್ವ ಉಪಾಯುಕ್ತ ರವಿ ಕೋಟಾರಗಸ್ತಿ ಅವರು ಉದ್ಘಾಟಿಸಿದರು. ಉಪನ್ಯಾಸಕರಾಗಿ ಆರ್.ಪಿ.ಡಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಎಚ್.ಬಿ. ಕೋಲಕಾರ ಉಪಸ್ಥಿತರಿದ್ಧರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿದ್ಯಾವತಿ ಭಜಂತ್ರಿ, ಪತ್ರಕರ್ತ ಮಹೇಶ ಬಿಜಾಪುರ್, ರಂಗಕರ್ಮಿ ಬಾಬಾಸಾಹೇಬ್ ಕಾಂಬಳೆ, ರಾಜೇಶ ಶ್ರೀನಿವಾಸ, ಉಮರಖಾನ್ ಚಪ್ಪರಬಂದ್, ತಾನಾಜೀ ಸಾವಂತ್ ಇನ್ನುಳಿದ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಧಾರ್ಮಿಕ ದತ್ತಿ ಇಲಾಖೆಯ ನಿಕಟ ಪೂರ್ವ ಉಪಾಯುಕ್ತ ರವಿ ಕೋಟಾರಗಸ್ತಿ ಅವರು ಲಿಂಗತ್ವ ಅಲ್ಪಸಂಖ್ಯಾತರು ಶಿಕ್ಷಣ ಮತ್ತು ಶಿಸ್ತನ್ನು ಕಲಿತುಕೊಂಡು ಎಲ್ಲ ಕ್ಷೇತ್ರದಲ್ಲಿಯೂ ಮೂಂಚೂಣಿಯಲ್ಲಿರಬೇಕು. ಈಗಾಗಲೇ ದೇಶದಲ್ಲಿ ಹಲವಾರು ಲಿಂಗತ್ವ ಅಲ್ಪಸಂಖ್ಯಾತರು ವಿವಿಧ ಉನ್ನತ ಹುದ್ಧೆಗಳಲ್ಲಿದ್ದಾರೆ. ಅವರಿಗೆ ಎದುರಾದ ಕಷ್ಟ, ಸಂಘರ್ಷ ಸೌಲಭ್ಯಗಳನ್ನು ಪಡೆದುಕೊಳ್ಳಲು ಬೇಕಾದ ಕಾನೂನಿನ ಮಾಹಿತಿಯನ್ನು ನೀಡಲು ಸಂವಿಧಾನ ಸಾಥಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಪ್ರಶಂಸನೀಯವಾಗಿದೆ ಎಂದರು.
ಕಾರ್ಯಕ್ರಮದ ಸಂಯೋಜಕಿ ವೈಶಾಲಿ ಅವರು ಲಿಂಗತ್ವ ಅಲ್ಪಸಂಖ್ಯಾತರ ಬದುಕು ಮತ್ತು ಬವಣೆ, ಸಂವಿಧಾನದ ಮೌಲ್ಯಗಳಡಿಯಲ್ಲಿ ಯಾವುದರಿಂದ ವಂಚಿತರಾಗಿದ್ದಾರೆ. ಅಸ್ವಿಕೃತಿ ಮನೋಭಾವ, ಕೌಟುಂಬಿಕ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ, ಸೇವಾ ಸೌಲಭ್ಯಗಳಿಗೆ ಕಾನೂನುರೀತಿಯ
ಮಾಹಿತಿಯನ್ನು ನೀಡಲು ಈ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಗಣ್ಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಉಪಸ್ಥಿತರಿದ್ಧರು.