ಮುಲ್ಲನಪುರ, ಚಂಡೀಗಡ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಮೊದಲ ಕ್ವಾಲಿಫೈಯ‌ರ್ ಪಂದ್ಯದಲ್ಲಿ ಆರ್‌ಸಿಬಿಗೆ ಪಂಜಾಬ್ ಕಿಂಗ್ಸ್ ತಂಡ ಕೇವಲ 102 ರನ್‌ಗಳ ಸಾಧಾರಣ ಗುರಿ ನೀಡಿತು. ಇದನ್ನು ದಟ್ಟವಾಗಿ ಎದುರಿಸಿದ ಆರ್ ಸಿಬಿ ಭರ್ಜರಿ ಜಯ ಸಾಧಿಸಿ ಒಂಬತ್ತು ವರ್ಷಗಳ ನಂತರ ಐಪಿಎಲ್ ಫೈನಲ್ ಪ್ರವೇಶಿಸಿದೆ.

ಆರ್‌ಸಿಬಿಯ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಪಂಜಾಬ್ ತಂಡ 14.1 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟ್ ಆಗಿದೆ.

ಪ್ರಭ್ ಸಿಮ್ರನ್ ಸಿಂಗ್(18), ಮಾರ್ಕಸ್ ಸ್ಟೋಯಿನಸ್(26), ಅಮಾನತುಲ್ಲಾ(18) ಬಿಟ್ಟರೆ ಬೇರಾವ ಬ್ಯಾಟ‌ರ್ ಎರಡಂಕಿ ದಾಟಲಿಲ್ಲ.

ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಆರ್‌ಸಿಬಿಯ ಎಲ್ಲ ಟಾಪ್ ಬೌಲರ್‌ಗಳು ಪಂಜಾಬ್ ತಂಡಕ್ಕೆ ಸಿಂಹಸ್ವಪ್ನವಾದರು. ಜೋಶ್ ಹ್ಯಾಜಲ್‌ವುಡ್(21/3), ಸುಯಶ್ ಶರ್ಮಾ(17/3), ಯಶ್ ದಯಾಳ್(26/2) ಮತ್ತು ಭುವನೇಶ್ವ‌ರ್ ಕುಮಾರ್(17/1) ಶ್ರೇಷ್ಠ ಬೌಲಿಂಗ್ ಮೂಲಕ ಪಂಜಾಬ್ ತಂಡವನ್ನು 100ರ ಗಡಿಯಲ್ಲೇ ಕಟ್ಟಿಹಾಕಿದರು.

ಐಪಿಎಲ್‌ ಪಂದ್ಯಾವಳಿಯ ಗುರುವಾರ ನಡೆದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಅವರದ್ದೇ ನೆಲದಲ್ಲಿ ಸೋಲುಣಿಸಿ ಅತ್ಯಮೋಘ ಜಯ ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ.
2009, 2011, 2016 ರ ನಂತರ ಆರ್‌ಸಿಬಿ ನಾಲ್ಕನೇ ಬಾರಿ ಫೈನಲ್‌ಗೆ ತಲುಪಿದೆ. 9 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿರುವುದರಿಂದ ಆರ್ ಸಿಬಿ ಅಭಿಮಾನಿಗಳು ಭಾರಿ ಉತ್ಸುಕರಾಗಿದ್ದು ಕಪ್ ಗೆಲ್ಲಲೇ ಬೇಕು ಎಂದು ಎದುರು ನೋಡುತ್ತಿದ್ದಾರೆ. 2011 ರಲ್ಲಿ ಪ್ಲೇ ಆಫ್ ವ್ಯವಸ್ಥೆ ಪ್ರಾರಂಭವಾದಾಗಿನಿಂದ, ಕ್ವಾಲಿಫೈಯರ್ 1 ಗೆದ್ದ ತಂಡವು ಹಿಂದಿನ 14 ಆವೃತ್ತಿಗಳಲ್ಲಿ 11 ರಲ್ಲಿ ಪ್ರಶಸ್ತಿಯನ್ನು ಗೆದ್ದ ದಾಖಲೆ ಇದೆ.
ಟಾಸ್ ಗೆದ್ದ ಆರ್ ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬಿಗಿ ದಾಳಿಗೆ ನಲುಗಿದ ಪಂಜಾಬ್‌ ಕಿಂಗ್ಸ್‌ 101 ರನ್ ಗಳ ಸಣ್ಣ ಮೊತ್ತಕ್ಕೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಆರ್ ಸಿಬಿ 10 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿ 8 ವಿಕೆಟ್ ಗಳ ಅಮೋಘ ಜಯಭೇರಿ ಬಾರಿಸಿತು.
ಅತ್ಯಮೋಘ ಆಟವಾಡಿದ ಫಿಲಿಪ್ ಸಾಲ್ಟ್ ಸಾಲ್ಟ್ 56 ರನ್(27ಎಸೆತ) ಗಳಿಸಿ ಅಜೇಯರಾಗಿ ಉಳಿದರು. ವಿರಾಟ್ ಕೊಹ್ಲಿ ಅವರು 12 ರನ್ ಗಳಿಸಿದ್ದ ವೇಳೆ ಜೇಮಿಸನ್ ಎಸೆದ ಚೆಂಡನ್ನು ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ ಕೈಗಿತ್ತು ನಿರಾಶರಾದರು. ಮಾಯಾಂಕ್ ಅಗರವಾಲ್ ಮುಶೀರ್ ಖಾನ್ ಎಸೆದ ಚೆಂಡನ್ನು ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಕೈಗಿತ್ತು ಪೆವಿಲಿಯನ್ ಗೆ ಮರಳಿದರು. ಅವರು13 ಎಸೆತಗಳಲ್ಲಿ 19 ರನ್ ಕೊಡುಗೆ ನೀಡಿದರು. ನಾಯಕ ರಜತ್ ಪಾಟಿದಾರ್ 8 ಎಸೆತಗಳಲ್ಲಿ 15 ರನ್ ಗಳಿಸಿದರು.

ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿತು. ಅದರಂತೆ ಆರ್ ಸಿಬಿ ಈ ಸಲ ಗೆಲುವು ಪಡೆದು ಪ್ರಶಸ್ತಿ ಮೇಲೆ ತನ್ನ ಹಕ್ಕು ಪ್ರತಿಪಾದಿಸಿದೆ.