ಆರ್ಡಿ: ಆರ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ಮಕ್ಕಳ ಸಾಂಸ್ಕೃತಿಕ ವೈಭವ ಸಂಭ್ರಮಾಚರಣೆ ಜ.4 ನೇ ಶನಿವಾರ ಬೆಳಗ್ಗೆ ಗಂ 9.30 ರಿಂದ ನಡೆಯಲಿದೆ.

ಬೈಂದೂರು-ವಿರಾಜಪೇಟೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು
ಆರ್ಡಿಯ ಇಲ್ಲಿನ ಸುತ್ತ ಮುತ್ತಲಿನ ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗುವಂತೆ
ತಾ.3.11.1925 ರಲ್ಲಿ ಆರ್ಡಿ ನೂಜಟ್ಟು ದಿ.ಗಣಪಯ್ಯ ಹೆಗ್ಡೆ ಹಾಗೂ ಅವರ ಸಹೋದರ ನೂಜಟ್ಟು ದಿ.ವೆಂಕಪ್ಪ ಹೆಗ್ಡೆ ಇವರು ಸ್ಥಳೀಯರ ಸಹಕಾರದೊಂದಿಗೆ ಕಟ್ಟಿಸಿ ಕೊಟ್ಟ ಕಟ್ಟಡದಲ್ಲಿ
ಶಾಲೆ ಆರಂಭವಾಯಿತು.

ಮುಂದಿನ ಶೈಕ್ಷಣಿಕ ವರ್ಷದ 2025-26 ನೇ ಸಾಲಿನಲ್ಲಿ ಶಾಲೆ ಶತಮಾನೋತ್ಸವ
ಸಂಭ್ರಮಾಚರಣೆಗೆ ಸಾಕ್ಷಿಯಾಗಲಿದೆ.
ಕುಂದಾಪುರ ತಾಲೂಕಿನಲ್ಲಿದ್ದ ಈ ಶಾಲೆಯು ಈಗ ಹೆಬ್ರಿ ತಾಲೂಕಿಗೆ ಸೇರಿದೆ.ಶಾಲೆಯು 4.47 ಎಕ್ರೆ ವಿಶಾಲವಾದ ಸ್ಥಳವನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಧ್ಯ
ಭಾಗದಲ್ಲಿ ಸುಸಜ್ಜಿತವಾದ ಶಾಲಾ ಕಟ್ಟಡ,
ಶಿಕ್ಷಕರ ಕೊಠಡಿ, ಕಂಪ್ಯೂಟರ್ ಕೊಠಡಿ, ಸಭಾಂಗಣ,ಬಯಲು ರಂಗಮಂದಿರವಿದೆ. ಶಾಲೆಯ ಮುಂಭಾಗದಲ್ಲಿ ಕ್ರೀಡಾ ಮೈದಾನವನ್ನು ಹೊಂದಿದೆ. ಹಿಂಭಾಗದಲ್ಲಿ ಕ್ರೀಡಾ ಮೈದಾನಕ್ಕೆ ಅನೂಕುಲವಾದ ವಿಶಾಲವಾದ ಸ್ಥಳವನ್ನು ಹೊಂದಿದೆ.
ಶಾಲೆಯಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮಗಳಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ. ಕಂಪ್ಯೂಟರ್ ಶಿಕ್ಷಣಕ್ಕೆ
ಅವಕಾಶವಿದೆ. ಗ್ರಾಮೀಣ ಭಾಗಗಳ ಸರ್ಕಾರಿ ಶಾಲೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ದಾಖಾಲಾತಿ
ಇಳಿಮುಖಗೊಳ್ಳುತ್ತಿದ್ದರೂ ಇಲ್ಲಿನ ಶಾಲೆಯಲ್ಲಿ ಮಕ್ಕಳ ದಾಖಲಾತಿಯಲ್ಲಿ ಪ್ರತಿ ವರ್ಷ ಏರಿಕೆಯಾಗುತ್ತಿದೆ. ಪ್ರಸ್ತುತ 161 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಕ ವೃಂದವರು ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಗಳಾಗದಂತೆ ತರಗತಿಗಳಲ್ಲಿ ಪಾಠ ಹಾಗೂ
ವಿಶೇಷ ತರಗತಿಗಳನ್ನು ನಡೆಸಿ ಉತ್ತಮ ಶಿಕ್ಷಣಕ್ಕೆ ಅವಕಾಶಗಳನ್ನು ನೀಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಪಠ್ಯ ಪಠ್ಯೇತರ,
ಹಾಗೂ ಕ್ರೀಡೆಗಳಲ್ಲಿ ರಾಜ್ಯ ಹಾಗೂ
ರಾಷ್ಟ್ರ ಮಟ್ಟಗಳಲ್ಲಿ ಸ್ಪರ್ಧಿಸಿ ಉತ್ತಮ ಸಾಧನೆಯೊಂದಿಗೆ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಸಾವಿರಾರೂ ಮಂದಿ ಹಳೇ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಅತ್ಯುನ್ನತ ಸ್ಥಾನಮಾನ ಗಳಿಸಿರುತ್ತಾರೆ.
ದಾನಿಗಳು, ಹಳೆ ವಿದ್ಯಾರ್ಥಿಗಳು,
ಶಿಕ್ಷಣಾಭಿಮಾನಿಗಳು ಹಾಗೂ
ವಿವಿಧ ಸಂಘ ಸಂಸ್ಥೆಗಳಿಂದ ಶಾಲೆಗೆ ವಿವಿಧ ಕೊಡುಗೆಗಳನ್ನು ನೀಡಿ ಶಾಲೆಯ ಪ್ರಗತಿ ಹಾಗೂ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ.

ಶಾಲಾ ವಾರ್ಷಿಕ ಪ್ರತಿಭಾ ಪುರಸ್ಕಾರ ಹಾಗೂ ಮಕ್ಕಳ ಸಾಂಸ್ಕೃತಿಕ ವೈಭವ ಸಂಭ್ರಮಾಚರಣೆಯ ಪ್ರಯುಕ್ತ ಶಾಲಾ ಸಭಾಂಗಣದಲ್ಲಿ ಜ. 4 ನೇ ಶನಿವಾರ ಬೆಳಗ್ಗೆ ಗಂ 9.30 ಕ್ಕೆ ದಾನಿಗಳು,
ಹಳೆ ವಿದ್ಯಾರ್ಥಿಗಳು, ಶಿಕ್ಷಣಾಭಿಮಾನಿಗಳು, ಎಸ್‌ಡಿಎಂಸಿ
ಹಾಗೂ ವಿವಿಧ ಸಂಘ ಸಂಸ್ಥೆಗಳ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ, ಉತ್ತಮ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು, ಸಾಂಸ್ಕೃತಿಕ ವೈಭವ ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.