ಬೆಂಗಳೂರು : 2024-25ನೇ ಸಾಲಿನಲ್ಲಿ ರಾಜ್ಯದ 5 ಕಡೆ ನಡೆಯಲಿರುವ ಕಂಬಳಕ್ಕೆ ಈ ಅಧಿವೇಶನ ಮುಗಿಯುವುದರ ಒಳಗೆ ಸರಕಾರದಿಂದ ಅನುದಾನ ಬಿಡುಗಡೆ ಮಾಡುತ್ತೇವೆ ಎಂದು ಸಚಿವ ಎಚ್‌.ಕೆ ಪಾಟೀಲ್ ಪ್ರಕಟಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಪ್ರಶೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ವರ್ಷದ ಕಂಬಳದ ಅನುದಾನ ಬಿಡುಗಡೆಯಾಗಿಲ್ಲ. ಎರಡು ಕಂಬಳಕ್ಕೆ 5 ಮತ್ತು 10 ಲಕ್ಷ ರು. ಅನುದಾನ ನೀಡಿದ್ದೇವೆ. ಡಿಸಿ ಅವರು ಬಿಲ್ ತಯಾರಿಸಿ ಮಾರ್ಚ್ 20ರ ಒಳಗೆ ಕಳಿಸಿದ್ದಾರೆ. ಬಿಲ್‌ ಕಳಿಸುವುದು ತಡವಾಗಿ ಅನುದಾನ ಬಿಡುಗಡೆ ಆಗಿಲ್ಲ. ಕೂಡಲೇ ಅನುದಾನ ಬಿಡುಗಡೆ ಮಾಡುತ್ತೇವೆ. ಈ ಅಧಿವೇಶನ ಮುಗಿಯುವ ಒಳಗೆ ಹಣ ಬಿಡುಗಡೆ ಮಾಡಲಾಗುತ್ತದೆ. ಈ ವರ್ಷ ಅಂದರೆ 2024-25ನೇ ಸಾಲಿನಲ್ಲಿ ರಾಜ್ಯದ 5 ಕಡೆ ನಡೆಯುವ ಕಂಬಳಕ್ಕೆ ಸರಕಾರದಿಂದ ಅನುದಾನ ಬಿಡುಗಡೆ ಮಾಡುತ್ತೇವೆ. ಕ್ರೀಡೆಯಲ್ಲಿ ನಾವು ರಾಜಕೀಯ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.