Join The Telegram | Join The WhatsApp |
ಬೆಂಗಳೂರು-
2022-23ನೇ ಸಾಲಿನ ಎಂಜಿನಿಯರಿಂಗ್ ಕೋರ್ಸುಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಎಲ್ಲ ಸುತ್ತುಗಳ ಕೌನ್ಸೆಲಿಂಗ್ ಬಳಿಕವೂ ಎಲ್ಲ ಮಾದರಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ 15 ಸಾವಿರಕ್ಕೂ ಹೆಚ್ಚು ಸೀಟುಗಳು ಭರ್ತಿಯಾಗದೆ ಉಳಿದಿವೆ.
ಈ ಪೈಕಿ ಅತಿ ಕಡಿಮೆ ಶುಲ್ಕವಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲೇ 1700ಕ್ಕೂ ಹೆಚ್ಚು ಸೀಟುಗಳನ್ನು ಕೇಳೋರಿಲ್ಲವಾಗಿದೆ.
ರಾಜ್ಯದ ಎಲ್ಲ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಈ ಬಾರಿ ಸಿಇಟಿ ರ್ಯಾಂಕಿಂಗ್ ವಿದ್ಯಾರ್ಥಿಗಳಿಗೆ 65,358 ಸೀಟುಗಳು ಪ್ರವೇಶಕ್ಕೆ ಲಭ್ಯವಿದ್ದವು. ಈ ಪೈಕಿ ಮೂರನೇ ಸುತ್ತಿನ ಕೌನ್ಸೆಲಿಂಗ್ ಬಳಿಕ 50,272 ಸೀಟುಗಳು ಭರ್ತಿಯಾಗಿವೆ. ಇನ್ನೂ 15,086 ಸೀಟುಗಳು(ಶೇ.23) ಭರ್ತಿಯಾಗಿಲ್ಲ. ಇವೆಲ್ಲಾ ಸರ್ಕಾರಿ ಕೋಟಾ ಆಗಿ ಪರಿವರ್ತನೆಯಾಗಿವೆ. ಇನ್ನು ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ರಾಜ್ಯ ಸರ್ಕಾರ ನಡೆಸಿರುವ ಹಲವು ಪ್ರಯತ್ನಗಳ ನಡುವೆಯೂ ಆ ಸೀಟುಗಳನ್ನು ಪಡೆಯುವವರ ಸಂಖ್ಯೆ ಕಡಿಮೆಯಾಗಿದೆ. ಸರ್ಕಾರಿ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಲಭ್ಯವಿದ್ದ ಸೀಟುಗಳ ಪೈಕಿ ಶೇ.33ರಷ್ಟುಸೀಟುಗಳು ಭರ್ತಿಯಾಗದೆ ಉಳಿದಿವೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಅಂಕಿ-ಅಂಶಗಳ ಪ್ರಕಾರ, ರಾಜ್ಯದ 19 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು 5,433 ಸೀಟುಗಳು ಈ ಬಾರಿ ಪ್ರವೇಶಕ್ಕೆ ಲಭ್ಯವಿದ್ದವು. ಆದರೆ ಕೆಇಎ ನಡೆಸಿದ ಎಲ್ಲಾ ಸುತ್ತಿನ ಕೌನ್ಸೆಲಿಂಗ್ ನಂತರ 1793 ಸೀಟುಗಳು ಖಾಲಿ ಉಳಿದಿವೆ. ಕೆಇಎ ಕೌನ್ಸೆಲಿಂಗ್ ಮೂಲಕ 4,036 ಸೀಟುಗಳನ್ನು ಹಂಚಿಕೆ ಮಾಡಿದ್ದರೂ 3,640 ಅಭ್ಯರ್ಥಿಗಳು ಮಾತ್ರ ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ. ಆಶ್ಚರ್ಯಕರ ವಿಷಯ ಎಂದರೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಪೈಕಿ ಅತಿ ಬೇಡಿಕೆಯ ಕಾಲೇಜುಗಳಲ್ಲೊಂದಾದ ಬೆಂಗಳೂರಿನ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್(ಯುವಿಸಿಇ)ಯಲ್ಲೂ ಮೆಕಾನಿಕಲ್‌ನಲ್ಲಿ 14, ಸಿವಿಲ್‌ನಲ್ಲಿ 13 ಸೀಟು ಸೇರಿ ವಿವಿಧ ವಿಭಾಗದ 37 ಸೀಟುಗಳು ಖಾಲಿ ಉಳಿದಿವೆ. ಇದಷ್ಟೇ ಅಲ್ಲದೆ ಇನ್ನೂ ಕೆಲ ಪ್ರಮುಖ ಸರ್ಕಾರಿ ಕಾಲೇಜುಗಳಲ್ಲೂ ಇದೇ ರೀತಿಯ ಸ್ಥಿತಿ ಇದೆ.
Join The Telegram | Join The WhatsApp |