(ಜನೇವರಿ 2 ರಂದು ಎರಡನೆಯ ವರ್ಷದ ಪುಣ್ಯ ಸ್ಮರಣೆ ತದಮಿತ್ತ ಬರೆದ ಲೇಖನವಿದು. )
ಜಗತ್ತಿನಲ್ಲಿಯೇ ಭಾರತ ದೇಶವು ಧರ್ಮ, ವೈಚಾರಿಕ,ಹಾಗೂ ಆಧ್ಯಾತ್ಮಿಕ ಕ್ಷೇತ್ರಕ್ಕೆ ತನ್ನದೆಯಾದ ಸಂಸ್ಕೃತಿ ಪರಂಪರೆಯನ್ನು ಹೊಂದಿದೆ. ಸನಾತನ ಕಾಲದಿಂದಲೂ ಅನೇಕ ಶ್ರೇಷ್ಠ ಶರಣರು ,ಮಹಂತರು, ತಪಸ್ವಿಗಳು, ಸಂತರು, ಶಿವಯೋಗಿಗಳು ಅನುಭಾವಿಗಳು ದಿವ್ಯದರ್ಶನ ಮೂಲಕ ಸಾಧನೆ ಶಿಖರ ತಲುಪಿದ್ದಾರೆ. ಅನೇಕ ಸಾಧು ಸಂತರು ಭಕ್ತರ ಹೃನ್ಮನಗಳಲ್ಲಿ ನೆಲೆಸಿದ್ದಾರೆ. ಅಂತಹ ಪೂಜ್ಯ ಶಿವಯೋಗಿಗಳ ಸಾಲಿನಲ್ಲಿ ನೆಲೆಸಿರುವ ಅವಿಮುಕ್ತ ಪಾವನಕ್ಷೇತ್ರವಾದ ವಿಜಯಪುರದ ಜ್ಞಾನ ಯೋಗಾಶ್ರಮದ ಪರಮ ಪೂಜ್ಯರಾದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರು.
ಶ್ರೀ ಸಿದ್ದೇಶ್ವರ ಸ್ವಾಮಿಗಳ ಬಾಲ್ಯದ ಜೀವನವು ಉದಾತ್ತ ಮೌಲ್ಯಗಳಿಂದ ಅನಾವರಣಗೊಂಡಿತ್ತು. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ತಾಯಿಯ ಊರಾದ ‘ನಂದರಗಿ’ ಯಲ್ಲಿ ಕ್ರಿ ಶ 1940 ,ಸಷ್ಟಂಬರ 5 ರಂದು ಜನಿಸಿದರು. ಶ್ರೀಗಳು ತಿಕೋಟಾ ತಾಲ್ಲೂಕಿನ ಜಿಜ್ಜರಗಿ ಗ್ರಾಮದ ಚಿತ್ರ ಕಲಾವಿದರಾದ ಓಗಪ್ಪ ಮತ್ತು ತಾಯಿ ಸಂಗಮ್ಮ ದಂಪತಿಗಳಿಗೆ ಹಿರಿಯ ಪುತ್ರನಾದ ಸಿದ್ದಗೊಂಡಪ್ಪನೆ ಮುಂದೆ ಸಿದ್ದೇಶ್ವರ ಶ್ರೀಗಳಾದರು .
ಪೂಜ್ಯ ಶ್ರೀಗಳು ಬಿಜ್ಜರಗಿ ಗ್ರಾಮದಲ್ಲಿ ನಾಲ್ಕನೆಯ ತರಗತಿಯ ವರೆಗೆ ಪ್ರಾಥಮಿಕ ಶಿಕ್ಷಣ ಪಡೆದರು. ತದನಂತರ ಮುಲ್ಕಿ ಪರೀಕ್ಷೆ ಬರೆಯಲು ಆಗಿನ ವಿಜಾಪುರ ಸಿದ್ದೇಶ್ವರ ಪದವಿಪೂರ್ವ ಕಾಲೇಜು ಶಿಕ್ಷಣಕ್ಕೆ ಸೇರಿದರು .ಕಾಲೇಜು ಸಮೀಪವಿದ್ದ ಶಿವಾನುಭವ ಮಂಟಪದಲ್ಲಿ ವೇದಾಂತ ಕೇಸರಿ ಎಂಬ ಅಭಿದಾನ ಪಡೆದ ಪರಮ ಪೂಜ್ಯರಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಆಧ್ಯಾತ್ಮಿಕ ಅಮೃತ ಸಿಂಚನಗಳು ಸಿದ್ದೇಶ್ವರ ಶ್ರೀಗಳ ಮನಸ್ಸಿನ ಮೇಲೆ ಸ್ಪೂರ್ತಿಯಾದವು. ತದನಂತರ ಸಿದ್ದಗೊಂಡನ ಗೆಳಯರು ಪರೀಕ್ಷೆಗಳನ್ನು ಬರೆದು ತಮ್ಮೂರಿಗೆ ಹೊರಟು ಹೋದರು. ಆದರೆ ಸಿದ್ದಗೊಂಡಪ್ಪನು ಗ್ರಾಮಕ್ಕೆ ಹೋಗದೆ ಜ್ಞಾನಯೋಗಾಶ್ರಮಕ್ಕೆ ಹೋಗಿ ಅಲ್ಲಿಯೆ ತಂಗಿದ್ದರು. ಮಲ್ಲಿಕಾರ್ಜುನ ಶ್ರೀಗಳ ದಿವ್ಯದರ್ಶನಕ್ಕೆ ಮಾರು ಹೋಗಿ ಬೆಳಿಗ್ಗೆ ಪ್ರವಚನ ಆಲಿಸಿ, ಶ್ರೀಗಳು ವಾಸ್ತವ್ಯದ ಕೊಠಡಿಯ ಮುಂಭಾಗದಲ್ಲಿ ಮಲಗುತ್ತಿದರು. ಶ್ರೀಗಳು ಸಿದ್ದಗೊಂಡಪ್ಪನಿಗೆ ಎಷ್ಟೇ ಹೇಳಿದರೂ ಕೇಳಲಿಲ್ಲ. ತದನಂತರ ಸಿದ್ದಗೊಂಡಪ್ಪ ಮಲ್ಲಿಕಾರ್ಜುನ ಶ್ರೀಗಳ ಆಧ್ಯಾತ್ಮಿಕ ಮಹಾಮನೆಯಲ್ಲಿ ಸಿದ್ದಗೊಂಡರು. ನಂತರ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದರು. ಕೊಲ್ಲಾಪೂರ ಶಿವಾಜಿ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರ ವಿಷಯದಲ್ಲಿ ಎಂ.ಎ, ಪದವಿ ಗಳಿಸಿದರು.
ಸಿದ್ದೇಶ್ವರ ಶ್ರೀಗಳು ಆಧ್ಯಾತ್ಮಿಕ ಪ್ರವಚನದ ಅಮೃತ ಸಿಂಚನಗಳನ್ನು ಭಕ್ತರಿಗೆ ಉಣಬಡಿಸುತ್ತಾ ನಡೆದರು. ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳಗಿಂತಲೂ ಪ್ರವಚನ ಹೇಳುವಲ್ಲಿ ಪಾರಗಂತರಾದರು. ರಾಜ್ಯ ರಾಷ್ಟ್ರ ಮತ್ತು ವಿದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ಪ್ರವಚನ ಪ್ರಸ್ತುತ ಪಡಿಸುವಲ್ಲಿ ನಿಷ್ಣಾತರಾದರು. ಹಳ್ಳಿಗಳಲ್ಲಿ ನಗರಗಳಲ್ಲಿ ತಿಂಗಳಗಟ್ಟಲೇ ಆಧ್ಯಾತ್ಮಿಕ ಪ್ರವಚನಮಾಲೆ ನೀಡುತ್ತಿದ್ದರು. ಯಾವದೇ ಪ್ರದೇಶದಲ್ಲಿ ಪ್ರವಚನ ಗೈಯುತ್ತಿದರೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಪುನೀತರಾಗುತ್ತಿದರು. ಪೂಜ್ಯರು ಸೂರ್ಯೋದಯ ಪೂರ್ವದಲ್ಲಿ ಪ್ರವಚನ ಪ್ರಾರಂಭಿಸಿದರೆ ತನ್ಮಯತೆ ಸಂಯಮದಿಂದ ಭಾಗವಹಿಸಿ ಭಕ್ತರು ಮಂತ್ರ ಮುಗ್ಧರಾಗುತ್ತಿದ್ದರು. ಪೂಜ್ಯರು ಸರಳತೆ, ಧರ್ಮ ಸಂಸ್ಕೃತಿಯಿಂದ ಗ್ರಾಮೀಣ ಸೊಗಡಿನಿಂದ ಕೂಡಿದ ಭಾಷೆಯಾಗಿತ್ತು. ತಿಳಿಹಾಸ್ಯ ಮೃದುಭಾಷೆಯಲ್ಲಿ ದಿವ್ಯ ಪದಪುಂಜಗಳನ್ನು ಪ್ರಯೋಗ ಮಾಡಿ ಚಿಕ್ಕ ಚಿಕ್ಕ ರೂಪಕ ಪ್ರತಿಮೆ ಸಂಕೇತ ಮೂಲಕ ಪ್ರವಚನ ಅಭಿವ್ಯಕ್ತ ಪಡಿಸುತ್ತಿದ್ದರು. ಕಥೆ ಮತ್ತು ದೃಷ್ಟಾಂತ ಮುಖೇನ ಪ್ರವಚನದಲ್ಲಿಯೇ ಬದುಕಿನ ರೀತಿ ನೀತಿಗಳನ್ನು ಹದಗೊಳಿಸಿ ಪಂಡಿತ ಪಾಮರರಿಗೆ ತಿಳಿಯುವ ಹಾಗೇ ಅರಿವು ಹಾಗೂ ಜಾಗೃತಿ ಮೂಡಿಸುತ್ತಿದ್ದರು. ಪ್ರವಚನ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಿಸುವಲ್ಲಿ ತಮ್ಮ ಚಿಂತನೆಗಳನ್ನು ಸಾದರಪಡಿಸುತ್ತಿದ್ದರು. ಅಷ್ಟೇ ಅಲ್ಲದೆ ಮಾನವನ ಧರ್ಮ, ಪರಿಸರ ಸಂರಕ್ಷಣೆ,ಪಕ್ಷಿ ಪ್ರಾಣಿ ಸಂಕುಲ, ಕಲ್ಲು ಮಣ್ಣು ,ಹೂ ಹಣ್ಣು ಮುಂತಾದವುಗಳಲ್ಲಿ ಶಿವಶಕ್ತಿಯ ಜಂಗಮಶೀಲತೆಯಿದೆಂದು
ಹೇಳುತ್ತಿದ್ದರು. ಶಿವಶರಣ – ಶರಣಿಯರ ಕನ್ನಡ ಸಾಹಿತ್ಯ ರಾಶಿ ಸಮಗ್ರ ಅಧ್ಯಯನಿಸಿ ವಚನಗಳ ಅಂತರ್ಯ ವಿಶ್ಲೇಷಣೆ ನೀಡುತ್ತಿದ್ದರು. ಉದಾತ್ತ ಆದರ್ಶ ಮೌಲ್ಯಗಳನ್ನು ಹೇಳುತ್ತಾ , ಅರ್ಥಪೂರ್ಣ ಜೀವನ ರೂಪಿಸಿಕೊಳ್ಳವಲ್ಲಿ ಯಶಸ್ವಿಯಾದರು .
ಸಂಸ್ಕೃತ ಕನ್ನಡ ಮರಾಠಿ ಇಂಗ್ಲಿಷ್ ಮತ್ತು ಪರ್ಷಿಯನ್ ಭಾಷೆಯಲ್ಲಿ ಪ್ರಭುತ್ವ ಪಾಂಡಿತ್ಯ ಪಡೆದು ನಿರರ್ಗಳವಾಗಿ ಸ್ಟುಟವಾಗಿ ಪ್ರವಚನ ನೀಡುತ್ತಿದ್ದರು. ಚಿಕ್ಕ ಮಕ್ಕಳಿಂದ ವಯೋವೃದರ ವರೆಗೂ ಕ್ರಿಯೆಗೆ ಪ್ರತಿಕ್ರಿಯೆ ಎನ್ನುವಂತೆ ಎಲ್ಲರಿಗೂ ಕೈ ಮುಗಿದು ನಕ್ಕು ನಮಸ್ಕರಿಸುತ್ತಿದ್ದರು .
ಶ್ರೀಗಳ ಮನಸ್ಸು ಕೋಮಲವಾದ ಹೂವಿನಂತೆ ಮೃದುವಾದದ್ದು. ಅವರ ಸೂಳ್ನುಡಿಗಳು ಸವಿಜೇನಿನ ಮಕರಂದದಂತೆ ಸಿಹಿಯಾದದ್ದು. ಶ್ರೀಗಳ ಬದುಕು ಬಾಳೆಗೊನಿಯಂತೆ ಭಾಗಿರುತ್ತಿತ್ತು. ತುಂಬಿದ ಕಳಸದಂತೆ ಪೂಜ್ಯರು ಸ್ಥಿತಪ್ರಜ್ಞೆರಂತೆ ಯಾವಾಗಲೂ ಮಂದಸ್ಮಿತರಾಗಿ ಇರುತ್ತಿದ್ದರು. ಸ್ವಾಮಿಗಳಾಗಿದ್ದರೂ ಮಠ ಗುಡಿ ಗುಂಡಾರ ನಿರ್ಮಿಸಲಿಲ್ಲ. ಕಾವಿ ಬಟ್ಟೆ ಧರಿಸಲಿಲ್ಲ, ಪೇಟ ಸುತ್ತಲಿಲ್ಲ. ಬೆಲೆಬಾಳುವ ವಾಹನಗಳಲ್ಲಿ ಸುತ್ತಡಾಲಿಲ್ಲ .ಮೊಬೈಲ್ ಇಟ್ಟು ಕೊಳ್ಳಲಿಲ್ಲ. ಅಡ್ಡ ಮತ್ತು ಉದ್ದ ಪಲ್ಲಕಿಯಲ್ಲಿ ಕೂಡಲಿಲ್ಲ. ತುಲಾಭಾರ ಮಾಡಿಸಿ ಕೊಳ್ಳಲಿಲ್ಲ. ಮೆರವಣಿಗೆಯಲ್ಲಿ ಭಾಗವಹಿಸಲಿಲ್ಲ .ಯಾವ ಪ್ರಶಸ್ತಿ- ಪುರಸ್ಕಾರ ಬೆನ್ನ ಹತ್ತಲಿಲ್ಲ. ತಮಗೆ ಸಿಕ್ಕ ಪ್ರತಿಷ್ಠಿತ ಅನೇಕ ಪ್ರಶಸ್ತಿ ಪುರಸ್ಕಾರಗಳು ತಿರಸ್ಕರಿಸಿ ದೇವಮಾನವರಾದರು .ಜೇಬು ಇಲ್ಲದ ಬರಿ ಶ್ವೇತವರ್ಣ ವಸ್ತ್ರಧಾರಿಗಳಾಗಿ ನಡೆದಾಡುವ ದೇವರೆಂದು ಪೂಜ್ಯನೀಯ ಸ್ಥಾನ ಪಡೆದವರು.
ಮೃದು ಸ್ವಭಾವದ ಸರಳ ಸಜ್ಜನಿಕೆಯ ಸಾಕಾರಮೂರ್ತಿಗಳಾದ ಅಲ್ಲಮಪ್ರಭುರಂತೆ ವೈರಾಗ್ಯಮೂರ್ತಿಗಳಾದರು. ವಿದೇಶ
ತತ್ತ್ವಜ್ಞಾನಿಯಗಳಾದ ಪ್ಲೇಟ್,ಅರಿಸ್ಟಾಟಲ್, ಸಾಕ್ರೇಟಿಸ್ ಮುಂತಾದವರ ವಿಚಾರಧಾರೆಗಳನ್ನು ಸಾದರ ಪಡಿಸುತ್ತಿದ್ದರು. ಬುದ್ಧ ಬಸವ ಅಲ್ಲಮರ ಹಾಗೂ ಪರಮಹಂಸರ ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರ ವೈಚಾರಿಕ ನಿಲವುಗಳನ್ನು,ಆಧ್ಯಾತ್ಮಿಕ ಮೌಲ್ಯಗಳನ್ನು ತಮ್ಮ ವಾಕ್ಚಾತುರ್ಯ ಗಳಿಂದ ಪ್ರರೇಪಿಸುತ್ತಿದ್ದರು.
ಸಂಸ್ಕೃತ ವಾಣಿಯಂತೆ” ಪರೋಪಕಾರ ಇದಂ ಶರೀರಂ ” ಎಂಬ ತತ್ವದಡಿಯಲ್ಲಿ ಬದುಕಿದವರು.ಸರ್ವೇ ಜನ: ಸುಖಿನೋ ಭವಂತು ವಾಕ್ಯದೊಂದಿಗೆ ಮಾನವನು ಬಾಳುತ್ತಿರಬೇಕೆಂದು ಶ್ರೀಗಳ ಸಂಕಲ್ಪ ವಾಗಿತ್ತು.
ಶ್ರೀಗಳ ಜೀವನವು ಸಕಲ ಪ್ರಾಣಿಗಳಲ್ಲಿ ಲೇಸನ್ನೇ ಬಯಸುವದೇ ಧರ್ಮವಾಗಿತ್ತು.
ವ್ಯಕ್ತಿ ಹಿತಕ್ಕಿಂತ ಸಮಾಜದ ಹಿತವನ್ನು ಬಯಿಸಿದವರು. ದಯೆವೇ ಧರ್ಮದ ಮೂಲವಯ್ಯ ತತ್ವದ ತಳಹದಿ ಮೇಲೆ ಅಲೌಕಿಕ ಬದುಕು ಸಾಗಿಸಿ ಶಿವಸಾಯುಜ್ಯ ಶಿವಸಾಮಿಪ್ಯ ಪಡೆದರು. ಈ ಶತಮಾನದ ಶ್ರೇಷ್ಠ ಸಂತ,ವೈರಾಗ್ಯಮೂರ್ತಿ, ನಡೆದಾಡುವ ದೇವರು ನಮ್ಮ ನಡುವೆ ಇಲ್ಲದಿರುವದೇ ದೊಡ್ಡ ಹಾನಿಯಾಗಿದೆ. ಶಿವಸ್ವರೂಪಿಗಳಾದ ಶ್ರೀಗಳನ್ನು ಅನುದಿನವು ಅನುಕ್ಷಣವು ಸ್ಮರಿಸುವುದು ನಮ್ಮ ಭಾಗ್ಯ, ಸೌಭಾಗ್ಯವಾಗಿದೆ. ಶ್ರೀಗಳ ನಡೆ ನುಡಿ,ವೇಷ ಭೂಷಣ, ಆಚಾರ ವಿಚಾರಗಳ ಪಥದಲ್ಲಿ ಪ್ರಾಜಂಲ ಒಮ್ಮಸ್ಸಿನಿಂದ ಸಾಗಿದರೆ ಬದುಕು ದೇದಿಪ್ಯಮಾನವಾಗುತ್ತದೆ. ಶ್ರೀಗಳು ವ್ಯಕ್ತಿ ಯಾಗಿರದೆ ಶಕ್ತಿಯಾಗಿ ದಾರಿದೀಪವಾಗಿದ್ದರು.
ಪ್ರಾತ:ಸ್ಮರಣೀರಾದ ಸಿದ್ದೇಶ್ವರ ಶ್ರೀಗಳು ನಮ್ಮ ಮಧ್ಯ ಭೌತಿಕವಾಗಿ ಇಲ್ಲದಿದ್ದರೂ ಸಾಂಸ್ಕೃತಿಕ ಮೌಲ್ಯಗಳಿಂದ ಅಮರ ಚಿರಂಜೀವಿಯಾಗಿದ್ದಾರೆ. ದೇವಮಾನವರಾದ ಶ್ರೀಗಳನ್ನು ನೆನೆಸುವದೇ ಪುಣ್ಯಕಾರ್ಯವಾಗಿದೆ.ಪ್ರೊ.ಶಶಿಕಾಂತ ಬ ತಾರದಾಳೆ
ಕನ್ನಡ ಅಧ್ಯಾಪಕರು
ಆರ್ ಎಲ್ ಎಸ್.
ಮಹಾವಿದ್ಯಾಲಯ,
ಬೆಳಗಾವಿ
994912291