ಕುಮಟಾ : ಖ್ಯಾತ ಸಂಸ್ಕೃತ ವಿದ್ವಾಂಸ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ. ಎ. ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಡಾ. ವಿ. ಕೆ. ಹಂಪಿಹೊಳಿ (71) ಗುರುವಾರ ವಿಧಿವಶರಾಗಿದ್ದಾರೆ.
ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗದ ತಾಲೂಕಿನ ಹಂಪಿಹೊಳಿಯವರಾದ ಅವರು ಕುಮಟಾದ ಕೆನರಾ ಸಂಸ್ಥೆಯ ಡಾ. ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜು ಮತ್ತು ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸುದೀರ್ಘ 34 ವರ್ಷಗಳ ಕಾಲ ಉಪನ್ಯಾಸಕರಾಗಿ ಹಾಗೂ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವಿಶ್ವವಿದ್ಯಾಲಯ ನೀಡುವ ವಿಶೇಷ ಗೌರವವಾದ ಪ್ರೊ. ಎಮಿರೇಟ್ಸ್ ಪ್ರಶಸ್ತಿಗೆ ಭಾಜನರಾಗಿದ್ದರು. ವಾತ್ಸಾಯನ ಕಾಮಸೂತ್ರದ ಮೇಲೆ ವಿಶೇಷ ಶೋಧನೆ ನಡೆಸಿ ಪಿಎಚ್‌ಡಿ ಗ್ರಂಥ ಬರೆದಿದ್ದಾರೆ. ಕುಮಟಾದ ಗಂಧರ್ವ ಸಂಗೀತ ಕಲಾ ಕೇಂದ್ರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ನೂರಕ್ಕೂ ಹೆಚ್ಚು ಸೆಮಿನಾರ್‌ಗಳಲ್ಲಿ ಪ್ರಬಂಧ ಹಾಗೂ ವಿಷಯ ಮಂಡಿಸಿದ್ದರು. ವೇದದ ಮೇಲೆ ಅಗಾಧ ಪಾಂಡಿತ್ಯ ಹೊಂದಿದ್ದು ಯಜುರ್ವೇದದ ಮೇಲೆ ರಾಜ್ಯದಲ್ಲೇ ವಿಶೇಷ ಜ್ಞಾನ ಹೊಂದಿದ ಕೆಲವೇ ಪಂಡಿತರಲ್ಲಿ ಒಬ್ಬರಾಗಿದ್ದರು. ಶ್ರೀಮದ್ ಭಾಗವತ ಸಪ್ತಾಹದಲ್ಲಿ ನೂರಾರು ಉಪನ್ಯಾಸ ನೀಡಿದ ಕೀರ್ತಿ ಇವರದ್ದು. ಗ್ರಂಥಗಳನ್ನು ಬರೆದಿದ್ದಾರೆ. ವೇದ, ಸಂಸ್ಕೃತಿ, ಹಿಂದೂ ಸಂಪ್ರದಾಯ ಇತ್ಯಾದಿ ವಿಷಯಗಳ ಬಗ್ಗೆ 500ಕ್ಕೂ ಹೆಚ್ಚು ಲೇಖನ ಬರೆದಿದ್ದರು.
ಗಣೇಶ ಹಬ್ಬ, ದಸರಾ, ದೀಪಾವಳಿ, ಯುಗಾದಿ ಇತ್ಯಾದಿ ಹಬ್ಬಗಳು ಹಾಗೂ ಆಚರಣೆಗಳು ಕುರಿತಾಗಿ ಟಿವಿಗಳಲ್ಲಿ ಇವರ ಸಂದರ್ಶನಗಳು ಹಾಗೂ ಇವರ ಪ್ರಸ್ತುತಿಗಳು ಪ್ರಸಾರವಾಗಿವೆ.ಸಂಸ್ಕೃತ ಭಾಷೆ, ಸಾಹಿತ್ಯ, ಛಂದಸ್ಸು, ವ್ಯಾಕರಣ, ವಾಂಞಯ ಇತ್ಯಾದಿಗಳ ಮೇಲೆ ಏನಾದರೂ ಸಂಶಯಗಳು, ಗೊಂದಲಗಳು ಇದ್ದರೆ ಜಿಲ್ಲೆಯ ವಿದ್ವಾಂಸರು ಹಾಗೂ ಉಪನ್ಯಾಸಕರು ಅವರನ್ನು ಸಂಪರ್ಕಿಸುತ್ತಿದ್ದರು. ಅವರು ಅನೇಕ ಸಮ್ಮಾನಗಳಿಗೆ ಭಾಜನರಾಗಿದ್ದರು.
ಡಾ. ವಿ. ಕೆ ಹಂಪಿಹೊಳಿ ನಿಧನ ವಿದ್ವತ್ ಲೋಕಕ್ಕೆ ತುಂಬಲಾರದ ನಷ್ಟ ಎಂದು ಡಾ.ಎ.ವಿ.ಬಾಳಿಗಾ ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್.ಕೆ. ನಾಯಕ, ಡಾ. ಶಂಕರ ಭಟ್ಟ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ. ಕುಮಟಾದ ಗಂಧರ್ವ ಕಲಾಕೇಂದ್ರದ ಗೌರೀಶ ಯಾಜಿ ಕೂಜಳ್ಳಿ, ವಿ.ಜಿ.ಹೆಗಡೆ, ಕೂಜಳ್ಳಿ ಸ್ವಸಂಗಮದ ಅಧ್ಯಕ್ಷ ಸುಬ್ರಾಯ ಭಟ್ ಕೂಜಳ್ಳಿ ಮೊದಲಾದವರು ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.