ಮಂಗಳೂರು: ಮಹಾರಾಷ್ಟ್ರ ಚುನಾವಣಾ ನಿಮಿತ್ತ ಸದ್ಯ ಪುಣೆಯಲ್ಲಿರುವ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರನ್ನು ಭೇಟಿಯಾಗಿ ಸ್ಥಗಿತಗೊಂಡಿರುವ ಮಂಗಳೂರು-ಪುಣೆ ಮಧ್ಯೆ ನೇರ ವಿಮಾನ ಯಾನ ಪುನರ್ ಆರಂಭಿಸುವಂತೆ ಮನವಿ ಮಾಡಿದರು.
ಮಂಗಳೂರು- ಪುಣೆ ನಗರಗಳ ನಡುವೆ ಅನೇಕ ರೀತಿಯಲ್ಲಿ ನೇರ ಸಂಬಂಧಗಳಿದ್ದು ದಿನ ನಿತ್ಯ ಸಾರ್ವಜನಿಕರು, ಉದ್ಯಮಿಗಳು, ಉದ್ಯೋಗಿಗಳು ಸೇರಿದಂತೆ ಅನೇಕ ಜನರ ಓಡಾಟವಿದೆ. ಹಾಗಾಗಿ ಈ ಹಿಂದೆ ಇದ್ದ ನೇರ ವಿಮಾನ ಸೇವೆಯಿಂದ ಅನೇಕ ಪ್ರಯಾಣಿಕರಿಗೆ ಸಹಾಯವಾಗುತ್ತಿದ್ದು, ಪ್ರಸ್ತುತ ಈ ಸೇವೆ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರಿಗೆ ತೀವ್ರ ಅನಾನುಕೂಲತೆ ಉಂಟಾಗಿದೆ. ಈ ಬಗ್ಗೆ ಈ ಹಿಂದೆ ಪುಣೆ ಹಾಗೂ ಮಂಗಳೂರಿನ ಉದ್ಯಮಿಗಳು ಮನವಿ ಸಲ್ಲಿಸಿದ್ದು ಅದರಂತೆ ವಿಶೇಷ ಆದ್ಯತೆಯ ಮೇರೆಗೆ ಮನವಿಯನ್ನು ಪರಿಗಣಿಸಿ ವಿಮಾನಯಾನವನ್ನು ಪುನರ್ ಆರಂಭಿಸುವಂತೆ ಶಾಸಕರು ಮನವಿ ಮಾಡಿದ್ದಾರೆ, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.