ಹುಬ್ಬಳ್ಳಿ: ಮುಂಬೈ- ಹುಬ್ಬಳ್ಳಿ- ಮುಂಬೈ ((Mumbai-Hubballi-Mumbai) ಮಧ್ಯೆ ಇಂಡಿಗೋ 6ಇ (Indigo 6e) ವಿಮಾನಯಾನ ಸೇವೆ ಜುಲೈ 15ರಿಂದ ಪುನಾರಂಭಗೊಳ್ಳಲಿದೆ.
ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರ ಮನವಿ ಮೇರೆಗೆ ಇಂಡಿಗೋ 6 ಇ ವಿಮಾನ ಸಂಚಾರವನ್ನು ಮತ್ತೆ ಶುರು ಮಾಡಲು ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ. ಇಂಡಿಗೋ 6ಇ ನಿರ್ವಹಣೆಗೆ ಸಚಿವ ಜೋಶಿ ಅವರು ಈ ಹಿಂದೆ ನಾಗರಿಕ ವಿಮಾನಯಾನ ಸಚಿವಾಲಯದ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಸಚಿವಾಲಯ ಈಗ ವಿಮಾನ ಸಂಚಾರ ಮತ್ತೆ ಆರಂಭಿಸಲು ಕ್ರಮ ಕೈಗೊಂಡಿದೆ.
ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮುಂಬೈ – ಹುಬ್ಬಳ್ಳಿ – ಮುಂಬೈ ನಡುವೆ ಬರುವ ತಿಂಗಳು ಜುಲೈ 15ರಿಂದ ಪ್ರತಿದಿನ ವಿಮಾನಗಳು ಕಾರ್ಯ ನಿರ್ವಹಿಸಲಿವೆ. ಇಂಡಿಗೋ ವಿಮಾನ ಮಧ್ಯಾಹ್ನ 3 ಗಂಟೆಗೆ ಮುಂಬೈ ಬಿಟ್ಟು ಸಂಜೆ 4:10ಕ್ಕೆ ಹುಬ್ಬಳ್ಳಿ ತಲುಪಲಿದೆ. ಸಂಜೆ 4:40ಕ್ಕೆ ಹುಬ್ಬಳ್ಳಿಯಿಂದ ನಿರ್ಗಮಿಸಿ ಸಂಜೆ 5.50ಕ್ಕೆ ಮುಂಬೈ ತಲುಪಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ.
ವಿಮಾನದ ಟಿಕೆಟ್ ದರ
ಜುಲೈ 15ರಿಂದ ಪ್ರಾರಂಭ ಆಗಲಿರುವ ವಿಮಾನದ ಟಿಕೆಟ್ ಗಳು ಇಂಟರ್ನೆಟ್ನಲ್ಲಿ ಇರುವ ಮಾಹಿತಿಯ ಪ್ರಕಾರ ಸದ್ಯ ಸೇವರ್ ಟಿಕೆಟ್ ಗೆ 6112 ರೂ., ಫ್ಲೆಕ್ಸಿ ಪ್ಲಸ್ ಗೆ 6672 ರೂ. ಮತ್ತು ಸೂಪರ್ ಆರ್ ಇ ಗೆ 17407 ರೂಪಾಯಿ ಇದೆ. ಇದು ಪ್ರತಿದಿನ ಬದಲಾಗುತ್ತಿರುತ್ತದೆ.
ಇಂಡಿಗೋ ಏರ್‌ಲೈನ್ಸ್ ಫೆಬ್ರವರಿ 15 ರಿಂದ ಹುಬ್ಬಳ್ಳಿ-ಮುಂಬೈ ಏರ್‌ಬಸ್ ಎ 320 ಕ್ರಾಫ್ಟ್ ಅನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿತ್ತು. ಮುಂಬೈ ವಿಮಾನ ನಿಲ್ದಾಣದಲ್ಲಿ ಭಾರೀ ಏರ್ ಟ್ರಾಫಿಕ್(Air traffic controllers-ATC) ದಟ್ಟಣೆಯಿಂದಾಗಿ ಹುಬ್ಬಳ್ಳಿಯ ವಿಮಾನ ಸೇವೆಯನ್ನು ಅಮಾನತುಗೊಳಿಸಲಾಗಿತ್ತು ಎನ್ನಲಾಗಿದೆ. ಹುಬ್ಬಳ್ಳಿಯಿಂದ ಬೆಂಗಳೂರು, ಹೈದರಾಬಾದ್, ಚೆನ್ನೈ, ದಿಲ್ಲಿ, ಪುಣೆಗಳಿಗೂ ನೇರ ವಿಮಾನ ಸೌಲಭ್ಯ ಇದೆ.