ಹುಬ್ಬಳ್ಳಿ: ಮುಂಬೈ- ಹುಬ್ಬಳ್ಳಿ- ಮುಂಬೈ ((Mumbai-Hubballi-Mumbai) ಮಧ್ಯೆ ಇಂಡಿಗೋ 6ಇ (Indigo 6e) ವಿಮಾನಯಾನ ಸೇವೆ ಜುಲೈ 15ರಿಂದ ಪುನಾರಂಭಗೊಳ್ಳಲಿದೆ.
ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರ ಮನವಿ ಮೇರೆಗೆ ಇಂಡಿಗೋ 6 ಇ ವಿಮಾನ ಸಂಚಾರವನ್ನು ಮತ್ತೆ ಶುರು ಮಾಡಲು ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ. ಇಂಡಿಗೋ 6ಇ ನಿರ್ವಹಣೆಗೆ ಸಚಿವ ಜೋಶಿ ಅವರು ಈ ಹಿಂದೆ ನಾಗರಿಕ ವಿಮಾನಯಾನ ಸಚಿವಾಲಯದ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಸಚಿವಾಲಯ ಈಗ ವಿಮಾನ ಸಂಚಾರ ಮತ್ತೆ ಆರಂಭಿಸಲು ಕ್ರಮ ಕೈಗೊಂಡಿದೆ.

ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮುಂಬೈ – ಹುಬ್ಬಳ್ಳಿ – ಮುಂಬೈ ನಡುವೆ ಬರುವ ತಿಂಗಳು ಜುಲೈ 15ರಿಂದ ಪ್ರತಿದಿನ ವಿಮಾನಗಳು ಕಾರ್ಯ ನಿರ್ವಹಿಸಲಿವೆ. ಇಂಡಿಗೋ ವಿಮಾನ ಮಧ್ಯಾಹ್ನ 3 ಗಂಟೆಗೆ ಮುಂಬೈ ಬಿಟ್ಟು ಸಂಜೆ 4:10ಕ್ಕೆ ಹುಬ್ಬಳ್ಳಿ ತಲುಪಲಿದೆ. ಸಂಜೆ 4:40ಕ್ಕೆ ಹುಬ್ಬಳ್ಳಿಯಿಂದ ನಿರ್ಗಮಿಸಿ ಸಂಜೆ 5.50ಕ್ಕೆ ಮುಂಬೈ ತಲುಪಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ.

ವಿಮಾನದ ಟಿಕೆಟ್ ದರ
ಜುಲೈ 15ರಿಂದ ಪ್ರಾರಂಭ ಆಗಲಿರುವ ವಿಮಾನದ ಟಿಕೆಟ್ ಗಳು ಇಂಟರ್​ನೆಟ್​​ನಲ್ಲಿ ಇರುವ ಮಾಹಿತಿಯ ಪ್ರಕಾರ ಸದ್ಯ ಸೇವರ್ ಟಿಕೆಟ್ ಗೆ 6112 ರೂ., ಫ್ಲೆಕ್ಸಿ ಪ್ಲಸ್ ಗೆ 6672 ರೂ. ಮತ್ತು ಸೂಪರ್ ಆರ್ ಇ ಗೆ 17407 ರೂಪಾಯಿ ಇದೆ. ಇದು ಪ್ರತಿದಿನ ಬದಲಾಗುತ್ತಿರುತ್ತದೆ.
ಇಂಡಿಗೋ ಏರ್‌ಲೈನ್ಸ್ ಫೆಬ್ರವರಿ 15 ರಿಂದ ಹುಬ್ಬಳ್ಳಿ-ಮುಂಬೈ ಏರ್‌ಬಸ್ ಎ 320 ಕ್ರಾಫ್ಟ್ ಅನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿತ್ತು. ಮುಂಬೈ ವಿಮಾನ ನಿಲ್ದಾಣದಲ್ಲಿ ಭಾರೀ ಏರ್ ಟ್ರಾಫಿಕ್(Air traffic controllers-ATC) ದಟ್ಟಣೆಯಿಂದಾಗಿ ಹುಬ್ಬಳ್ಳಿಯ ವಿಮಾನ ಸೇವೆಯನ್ನು ಅಮಾನತುಗೊಳಿಸಲಾಗಿತ್ತು ಎನ್ನಲಾಗಿದೆ. ಹುಬ್ಬಳ್ಳಿಯಿಂದ ಬೆಂಗಳೂರು, ಹೈದರಾಬಾದ್, ಚೆನ್ನೈ, ದಿಲ್ಲಿ, ಪುಣೆಗಳಿಗೂ ನೇರ ವಿಮಾನ ಸೌಲಭ್ಯ ಇದೆ.