ನವದೆಹಲಿ : ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಇಂದು, ಮಂಗಳವಾರ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ 300 ಸ್ಥಾನಗಳ ಗಡಿ ದಾಟಲು ಹೆಣಗಾಡುತ್ತಿರುವಾಗ, ಬಿಜೆಪಿಗೆ ಸ್ವಂತ ಬಲದಿಂದ ಬಹುಮತದ 272 ಅನ್ನು ತಲುಪುವುದು ಕಷ್ಟಕರವಾಗಿದೆ.

ಅದು ಮುಂದಿನ ಸರ್ಕಾರವನ್ನು ರಚಿಸಿದರೆ, ಅದು ಅದರ ಮಿತ್ರಪಕ್ಷಗಳ ಸಹಾಯದಿಂದ. ಮುಖ್ಯವಾಗಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ, ಪ್ರಸ್ತುತ ಆಂಧ್ರಪ್ರದೇಶದಲ್ಲಿ 16 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಮತ್ತು ಬಿಹಾರದಲ್ಲಿ 14 ಸ್ಥಾನಗಳಲ್ಲಿ ಮುಂದಿರುವ ನಿತೀಶಕುಮಾರ ಅವರ ಜೆಡಿಯು ಮೇಲೆ ಅವಲಂಬಿತವಾಗಿದೆ.
ಎನ್‌ಡಿಎ ಸುಲಭವಾಗಿ 350 ಸ್ಥಾನಗಳ ಗಡಿ ದಾಟಲಿದೆ ಎಂದು ಭವಿಷ್ಯ ನುಡಿದ ಬಹುತೇಕ ನಿರ್ಗಮನ ಸಮೀಕ್ಷೆಗಳನ್ನು ಸುಳ್ಳಾಗಿಸಿದ ಹಿನ್ನೆಲೆಯಲ್ಲಿ ತೀವ್ರ ಚರ್ಚೆಗಳು ಆರಂಭಗೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರೊಂದಿಗೆ ಮಾತನಾಡಿದ್ದರೆ, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ನಿತೀಶ್ ಮತ್ತು ನಾಯ್ಡು ಇಬ್ಬರೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದೆ.

2014ರಲ್ಲಿ ಮೋದಿ ಪ್ರಧಾನಿಯಾದಾಗ ಭಾರತದ ರಾಜಕೀಯದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಕ್ಲೀನ್ ಬ್ರೇಕ್ ಆಗಿತ್ತು. ಅಸ್ತಿತ್ವಕ್ಕಾಗಿ ಯಾವುದೇ ಮಿತ್ರಪಕ್ಷಗಳ ಮೇಲೆ ಅವಲಂಬಿತವಾಗದಂತೆ ಬಿಜೆಪಿ ಬಹುಮತಕ್ಕಿಂತ ಸ್ಥಾನಗಳನ್ನು ಪಡೆದಿತ್ತು. ಭಾರತವು ದಶಕಗಳಿಂದ ಸಮ್ಮಿಶ್ರ ರಾಜಕೀಯವನ್ನು ಕಂಡಿತ್ತು, ಆಗಾಗ ಅಸ್ಥಿರವಾಗಿರುವ ಸಮ್ಮಿಶ್ರ ಸರ್ಕಾರಗಳು ಆಗ ಸಾಮಾನ್ಯ ಎಂಬಂತಾಗಿತ್ತು.
ಮೋದಿಯವರ ನಿರ್ಣಾಯಕ ಜನಾದೇಶ ಭಾರತದ ರಾಜಕೀಯದಲ್ಲಿ ಕೆಲಕಾಲದಿಂದ ಇದ್ದ ಚಿತ್ರಣವನ್ನು ಬದಲಾಯಿಸಿತು. ಯುಪಿಎ II ಸರ್ಕಾರದ ಅವಧಿಯಲ್ಲಿ, ಸಮ್ಮಿಶ್ರ ರಾಜಕೀಯವು ಭ್ರಷ್ಟಾಚಾರ ಮತ್ತು ನೀತಿ ನಿರೂಪಣೆಗಳಿಗೆ ಅನೇಕ ಅಡ್ಡಿ ಆತಂಕಗಳು ಎದುರಾಯಿತು. ಆದರೆ ಮೋದಿ ಅವರು ಸಮ್ಮಿಶ್ರ ನಿರ್ಬಂಧಗಳಿಂದ ಮುಕ್ತರಾಗಿದ್ದರು ಮತ್ತು ತಮ್ಮ ಇಚ್ಛೆಗೆ ಅನುಗುಣವಾಗಿ ಆರ್ಥಿಕತೆ ಮತ್ತು ಆಡಳಿತವನ್ನು ರೂಪಿಸಲು ಸಮರ್ಥರಾಗಿದ್ದರು. ಬಿಜೆಪಿಯ ಪೂರ್ಣ ಬಹುಮತದಿಂದಾಗಿ ಪ್ರಮುಖ ಸುಧಾರಣೆಗಳು ಸಾಧ್ಯವಾಯಿತು. ವಾಸ್ತವವಾಗಿ, ಬಿಜೆಪಿಯು ತನ್ನ ಹಲವಾರು ಮಿತ್ರಪಕ್ಷಗಳೊಂದಿಗೆ, ವಿಶೇಷವಾಗಿ ಶಿವಸೇನೆ ಮತ್ತು ಅಕಾಲಿದಳ ಪಕ್ಷಗಳಿಂದಲೂ ದೂರ ಉಳಿಯಿತು. ಈ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಎಐಎಡಿಎಂಕೆ ಜತೆಗಿನ ಸಂಬಂಧವನ್ನು ಕಡಿದುಕೊಂಡಿತ್ತು. ಭಾರತ ಏಕಪಕ್ಷೀಯ ಆಡಳಿತದತ್ತ ಸಾಗುತ್ತಿದೆ ಎಂದು ಹಲವರು ಭಾವಿಸತೊಡಗಿದರು.

ಸಮ್ಮಿಶ್ರ ಧರ್ಮಕ್ಕೆ ಮರಳಿದ ಬಿಜೆಪಿ :
ಬಿಜೆಪಿ ಸ್ವಂತ ಬಲದಿಂದ ಬಹುಮತ ಪಡೆಯುವ ಸಾಧ್ಯತೆ ಇಲ್ಲದೇ ಇರುವುದರಿಂದ ಮುಂದಿನ ಸರ್ಕಾರ ಸಮ್ಮಿಶ್ರ ಸರ್ಕಾರವೇ ಆಗಲಿದೆ. ವರದಿಗಳ ಪ್ರಕಾರ ನಾಯ್ಡು ಮತ್ತು ನಿತೀಶ ಇಬ್ಬರೂ ಬಿಜೆಪಿಗೆ ತಮ್ಮ ಬೆಂಬಲವನ್ನು ವಾಗ್ದಾನ ಮಾಡಿದ್ದಾರೆ. ಆದ್ದರಿಂದ ಅವರು ಇಂಡಿಯಾ ಬಣಕ್ಕೆ ಸೇರುವ ಸಾಧ್ಯತೆ ಕಡಿಮೆ. ಆದರೆ ಎಲ್ಲಾ ಫಲಿತಾಂಶಗಳು ಹೊರಬರುವವರೆಗೆ ಯಾವುದನ್ನೂ ಖಚಿತವಾಗಿ ಹೇಳಲಾಗುವುದಿಲ್ಲ. ಫಲಿತಾಂಶಗಳು ಆಶ್ಚರ್ಯಗಳು ಮತ್ತು ಫ್ಲಿಪ್-ಫ್ಲಾಪ್‌ಗಳಿಂದ ಗುರುತಿಸಲ್ಪಟ್ಟ ಸಮ್ಮಿಶ್ರ ಯುಗವನ್ನು ಮರಳಿ ತಂದಿವೆ.
370 ಸ್ಥಾನಗಳ ಗುರಿಯನ್ನು ಹೊಂದಿದ್ದ ಮತ್ತು ಎನ್‌ಡಿಎಗೆ 400 ಪ್ಲಸ್ ಗುರಿ ಹೊಂದಿದ್ದ ಬಿಜೆಪಿ, ಲೋಕಸಭೆಗೆ 80 ಶಾಸಕರನ್ನು ಕಳುಹಿಸುವ ಉತ್ತರ ಪ್ರದೇಶದಿಂದ ನಿರಾಸೆಗೊಂಡಂತೆ ತೋರುತ್ತಿದೆ. ಸಂಜೆ ಸುಮಾರಿಗೆ ಬಿಜೆಪಿ 241 ಸ್ಥಾನಗಳಲ್ಲಿ, ಎನ್‌ಡಿಎ 296 ಸ್ಥಾನಗಳಲ್ಲಿ ಮುಂದಿದೆ. ವಿಪಕ್ಷಗಳ ಇಂಡಿಯಾ ಒಕ್ಕೂಟವು 228 ಸ್ಥಾನಗಳಲ್ಲಿ, ಕಾಂಗ್ರೆಸ್ 98 ಸ್ಥಾನಗಳಲ್ಲಿ ಮುಂದಿದೆ.
80 ಸ್ಥಾನಗಳಿರುವ ಉತ್ತರ ಪ್ರದೇಶದಲ್ಲಿ 40ಕ್ಕೂ ಹೆಚ್ಚು ಸ್ಥಾನಗಳಲ್ಲಿ ಇಂಡಿಯಾ ಒಕ್ಕೂಟದ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮುನ್ನಡೆ ಪಡೆಯುವ ಮೂಲಕ ಬಿಜೆಪಿಗೆ ಶಾಕ್‌ ನೀಡಿದೆ. ಬಿಜೆಪಿ ನಲವತ್ತು ಸ್ಥಾನಗಳ ಸಮೀಪ ಮುನ್ನಡೆಯಲ್ಲಿದೆ. ಬಿಜೆಪಿ 2014 ರಲ್ಲಿ 2019 ರಲ್ಲಿ ಉತ್ತರ ಪ್ರದೇಶಗಳಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳು ಪಕ್ಷಕ್ಕೆ ಹೆಚ್ಚಿನ ಸ್ಥಾನಗಳು ಬರುತ್ತವೆ ಎಂದು ಹೇಳಿದ್ದವು. ಆದರೆ ಫಲೋಡಿ ಸಟ್ಟಾ ಬಜಾರ್‌ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ನಿರೀಕ್ಷತ ಸ್ಥಾನಗಳು ಬರುವುದಿಲ್ಲ ಎಂದು ಹೇಳಿತ್ತು.

ಬಿಜೆಪಿ ದೊಡ್ಡ ಭರವಸೆ ಇಟ್ಟುಕೊಂಡಿದ್ದ ಬಂಗಾಳದಲ್ಲಿ, ಅದು 2019 ಕ್ಕಿಂತ ಕಳಪೆ ಪ್ರದರ್ಶನ ನೀಡಿದೆ. ಅದು ಕೇವಲ 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಕಳೆದುಕೊಂಡಿದ್ದ ಸ್ಥಾನಗಳನ್ನು ಮತ್ತೆ ಮರಳಿ ಪಡೆದಿದೆ. ಅದು 31 ಸ್ಥಾನಗಳಲ್ಲಿ ಮುಂದಿದೆ.
ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ರಾಜಕೀಯ ತಂತ್ರಗಳ ಬಗ್ಗೆ ಮಹಾರಾಷ್ಟ್ರ ತನ್ನ ಅಸಮ್ಮತಿಯನ್ನು ಸ್ಪಷ್ಟಪಡಿಸಿದೆ. ಉದ್ಧವ್ ಠಾಕ್ರೆ ಬಣದ ಶಿವಸೇನೆ 11 ಸ್ಥಾನಗಳಲ್ಲಿ ಹಾಗೂ ಶಿಂಧೆ ಬಣದ ಶಿವಸೇನೆ 5 ಸ್ಥಾನಗಳಲ್ಲಿ ಮುಂದಿದೆ. ಎನ್‌ಸಿಪಿಯ ಅಜಿತ್ ಪವಾರ್ ಬಣ ಕೇವಲ ಒಂದು ಸ್ಥಾನದಲ್ಲಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ಬಣದ ಎನ್‌ಸಿಪಿ 7 ರಲ್ಲಿ ಮುಂದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಕ್ರಮವಾಗಿ 12 ಮತ್ತು 11 ಸ್ಥಾನಗಳಲ್ಲಿ ಮುನ್ನಡೆಯಲಿದ್ದಾರೆ. ಒಡಿಶಾ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ನಿರೀಕ್ಷೆಯಂತೆ ಬಿಜೆಪಿಯ ತನಗಾದ ನಷ್ಟವನ್ನು ಸರಿದೂಗಿಸಿದೆ.
ಈ ಚುನಾವಣೆಯಲ್ಲಿ ಮತದಾರರ ಮನಸ್ಥಿತಿಯನ್ನು ಓದುವುದು ಕಷ್ಟಕರವಾಗಿದ್ದಂತೂ ಹೌದು. ಮೂರು ಎಕ್ಸಿಟ್ ಪೋಲ್‌ಗಳು ಬಿಜೆಪಿ ನೇತೃತ್ವದ ಎನ್‌ಡಿಎಗೆ 400 ಪ್ಲಸ್ ಸ್ಥಾನಗಳು ಬರಬಹುದು ಎಂದು ಭವಿಷ್ಯ ನುಡಿದಿದ್ದವು. ಉಳಿದವುಗಳು ಎನ್‌ಡಿಎ ಗೆಲುವಿನ ಅಂತರದಲ್ಲಿ ಮಾತ್ರ ಭಿನ್ನವಾಗಿವೆ. ಎಕ್ಸಿಟ್ ಪೋಲ್‌ಗಳು ಯಾವಾಗಲೂ ದೇಶದಲ್ಲಿ ಮಿಶ್ರ ಯಶಸ್ಸನ್ನು ಹೊಂದಿವೆ.
543 ಲೋಕಸಭಾ ಸ್ಥಾನಗಳಿಗೆ ಏಳು ಹಂತಗಳಲ್ಲಿ ಮತದಾನ ನಡೆದಿದ್ದು, ಶನಿವಾರ ಮುಕ್ತಾಯವಾಗಿದೆ. ಸರಳ ಬಹುಮತ ಪಡೆಯಲು 272 ಸ್ಥಾನಗಳು ಬೇಕು.