ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜು ಹೆಬ್ರಿ ಇಲ್ಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಅವರು ಉಪನ್ಯಾಸ ನೀಡಿದರು.
ಕೇವಲ ನೂರು ಶೇಕಡಾ ಫಲಿತಾಂಶ ನೀಡುವ ಸಂಸ್ಥೆ ಉತ್ತಮ ಸಂಸ್ಥೆ ಆಗದು , ಬದಲಾಗಿ ಉತ್ತಮ ಫಲಿತಾಂಶದ ಜೊತೆ ಅನ್ನ ಸಂಪಾದನೆಗೆ ದಾರಿ ಮಾಡಿ ಕೊಡುವ , ಮೌಲ್ಯ ಭರಿತ , ಋಣ ಪ್ರಜ್ಞೆ ಇರುವ , ದೇವರ ಬಗ್ಗೆ ಭಯ ಭಕ್ತಿ ಹುಟ್ಟಿಸುವ ಶಿಕ್ಷಣ ನೀಡುವ ಸಂಸ್ಥೆ ಉತ್ತಮ ಸಂಸ್ಥೆ ಎನ್ನಿಸಿಕೊಳ್ಳುತ್ತದೆ ಎಂದರು.
ವಿದ್ಯಾರ್ಥಿಗಳು ಜೀವನದ ಗುರಿ ಸಾಧನೆಗಾಗಿ ತೇಜ್ ಸಿಂಘ್, ಎಡ್ಮಂಡ್ ಹಿಲರಿ , ಅರುಣಿಮಾ ಸಿನ್ಹಾ ರವರಂತೆ ದೊಡ್ಡ ಎತ್ತರಕ್ಕೆ ಏರುವ ಗುರಿಯನ್ನು ಇಟ್ಟುಕೊಳ್ಳಬೇಕು . ಆ ಗುರಿಯ ಈಡೇರಿಕೆಗಾಗಿ ಉದಾಸೀನತೆ ತೋರದೆ , ಕೆಲಸವನ್ನು ಮುಂದೂಡದೆ , ಕೆಟ್ಟ ಆಕರ್ಷಣೆ ಗಳಿಗೆ ಒಳಗಾಗದೆ, ಸಮಯ ವ್ಯರ್ಥ ಮಾಡದೆ , ಭಾವನೆ ಗಳನ್ನು ಹತೋಟಿಯಲ್ಲಿ ಇಟ್ಟು ವಿದ್ಯಾಭ್ಯಾಸ ಮಾಡಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಅಮರೇಶ್ ಹೆಗ್ಡೆ ಸ್ಮರಣಿಕೆ ನೀಡಿ ಗೌರವಿಸಿದರು. ಪಿ.ಆರ್.ಓ. ವಿಜಯ್ ಕುಮಾರ್ ಶೆಟ್ಟಿ , ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಂಗ್ಲ ಭಾಷಾ ಉಪನ್ಯಾಸಕ ಸುಹಾಸ್ ನಿರೂಪಿಸಿ ವಂದಿಸಿದರು.