ಬೆಂಗಳೂರು :
ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ.
ಅವರ ಬಹು ನಿರೀಕ್ಷಿತ ಕಾಂತಾರ ಭಾಗ- 2 ರ ಟೀಸರ್ ಬಿಡುಗಡೆಯಾಗಿದೆ.

ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ಮೂಡಿಬರಲಿರುವ ಚಿತ್ರದ ಫಸ್ಟ್ ಲುಕ್ ಭಾರೀ ಕುತೂಹಲ ಮೂಡಿಸಿದೆ.

ಅಘೋರಿ ಅವತಾರದಲ್ಲಿ ರಿಷಬ್ ಶೆಟ್ಟಿ ಘೋರ ರೂಪದಲ್ಲಿ ಕಂಡಿದ್ದಾರೆ. ಒಂದು ಕೈಯಲ್ಲಿ ತ್ರಿಶೂಲ, ಮತ್ತೊಂದು ಕೈಯಲ್ಲಿ ಕೊಡಲಿಯನ್ನು ಹಿಡಿದಿರುವ ರಿಷಬ್ ಪೋಸ್ಟರ್ ನಾನಾ ರೀತಿಯ ಚರ್ಚೆಗಳನ್ನು ಹುಟ್ಟು ಹಾಕಿದೆ.

ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಬಂಗಾಳಿ ಭಾಷೆಯಲ್ಲಿ ಟೀಸರ್ ಬಿಡುಗಡೆಯಾಗಿದ್ದು ಹೊಂಬಾಳೆ ಫಿಲ್ಮ್ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದೆ. ಯುಟ್ಯೂಬ್‌ನಲ್ಲಿ ಟೀಸರ್ ಬಿಡುಗಡೆಯಾಗಿದ್ದು ಕಾಂತಾರ ಎರಡರ ಚಿತ್ರಕಥೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಏಳುನೂರು ವರ್ಷಗಳ ಹಿಂದೆ ಆಳಿದ್ದ ಕದಂಬರ ಕಾಲಕ್ಕೆ ಕರೆದುಕೊಂಡು ಹೋಗಲಿದೆ. ಅಂದರೆ ಇದು ಕ್ರಿಸ್ತಶಕ 301 ರಿಂದ 400 ನೇ ಇಸವಿಯ ಅದ್ಭುತ ಕತೆಯ ತಿರುಳನ್ನು ಒಳಗೊಂಡಿದೆ. ದೈವಿಕ ಭೂಮಿ ಕಡೆಗೆ ಹೆಜ್ಜೆ ಎಂದು ಕಾಂತಾರ ಪ್ರೀಕ್ವೆಲ್ ಅನ್ನು ಹೊಂಬಾಳೆ ತಂಡ ಬಣ್ಣಿಸಿದೆ.

ಚಿತ್ರದ ಫಸ್ಟ್‌ ಲುಕ್‌ ಹಾಗೂ ಟೀಸರ್‌ ಬಿಡುಗಡೆಯಂದೇ ಕುಂದಾಪುರದ ಪ್ರಸಿದ್ದ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆದಿದೆ.

2022ರ ಸೆ.30ರಂದು ತೆರೆಕಂಡಿದ್ದ ‘ಕಾಂತಾರ–ಒಂದು ದಂತಕಥೆ’ಯ ದೊಡ್ಡ ಯಶಸ್ಸು, ಈಗ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಹೆಚ್ಚಿನ ಬಜೆಟ್‌ ನೀಡಿದೆ ಎನ್ನುವುದು ಟೀಸರ್‌ ಹಾಗೂ ಫಸ್ಟ್‌ಲುಕ್‌ನಲ್ಲಿ ಸ್ಪಷ್ಟವಾಗಿದೆ. ದೊಡ್ಡ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ ಎನ್ನುವುದಕ್ಕೆ ಟೀಸರ್‌ ಸಾಕ್ಷ್ಯವಾಗಿದೆ. ಇಂಗ್ಲಿಷ್‌ನಲ್ಲೂ ಟೀಸರ್‌ ಬಿಡುಗಡೆಯಾಗಿದ್ದು, ಇದು ವಿಶ್ವದಾದ್ಯಂತ ‘ಕಾಂತಾರ’ ಸೃಷ್ಟಿಸಿರುವ ನಿರೀಕ್ಷೆಯನ್ನು ಬಿಂಬಿಸಿದೆ. ‘ಇದು ಬರಿ ಬೆಳಕಲ್ಲ, ದರ್ಶನ’ ಎನ್ನುವ ಮೂಲಕ ಸಿನಿಮಾದ ಪ್ರೀಕ್ವೆಲ್‌ ಆರಂಭವಾಗುತ್ತದೆ.
ಕದಂಬರ ಆಳ್ವಿಕೆಯ ಕಾಲದಲ್ಲಿ ಹುಟ್ಟಿದ ದಂತಕಥೆಯ ಕಥಾಹಂದರ ಎಂದು ಟೀಸರ್‌ನಲ್ಲಿ ಉಲ್ಲೇಖಿಸಲಾಗಿದೆ. ಕೊಡಲಿ ಹಾಗೂ ತ್ರಿಶೂಲವನ್ನು ಹಿಡಿದಿರುವ ರಿಷಬ್‌ ಅವರು ಯಾವ ಪಾತ್ರವನ್ನು ತೆರೆಗೆ ತರುತ್ತಿದ್ದಾರೆ ಎನ್ನುವುದು ನಿಗೂಢವಾಗಿದೆ. ಕನ್ನಡ, ಇಂಗ್ಲಿಷ್‌ ಸೇರಿದಂತೆ ಏಳು ಭಾಷೆಗಳಲ್ಲಿ ಏಕಕಾಲದಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

‘‘ಕಾಂತಾರ’ದ ಅಧ್ಯಾಯ–1ನ್ನು ಪ್ರಾರಂಭಿಸಿದ್ದೇವೆ. ಅಧ್ಯಾಯ–2ನ್ನು ಈಗಾಗಲೇ ನೋಡಿದ್ದೀರಿ. ಇದರ ಪೂರ್ಣ ಯಶಸ್ಸನ್ನು ಕನ್ನಡಿಗರಿಗೆ ಅರ್ಪಿಸುತ್ತೇನೆ. ಆನೆಗುಡ್ಡೆ ಎಂದರೆ ನಾವು ನಂಬಿದ ದೇವಸ್ಥಾನ. ಲಕ್ಕಿ ಕೂಡಾ. ನಿರ್ಮಾಪಕರಾದ ವಿಜಯ್‌ ಕಿರಗಂದೂರ್‌ ಅವರಿಗೂ ಇಲ್ಲಿನ ದೇವರ ಬಗ್ಗೆ ನಂಬಿಕೆ ಇದೆ. ಕಳೆದ ಬಾರಿಯೂ ಈ ದೇವಸ್ಥಾನದಲ್ಲೇ ಮುಹೂರ್ತ ನಡೆದಿತ್ತು. ಡಿಸೆಂಬರ್‌ನಲ್ಲಿ ಪ್ರೀಕ್ವೆಲ್‌ನ ಚಿತ್ರೀಕರಣ ಆರಂಭವಾಗಲಿದೆ. ಮಾತಿಗಿಂತ ಕೆಲಸ ಮುಖ್ಯ. ಹಾಗಾಗಿ ಮೊದಲ ಅಧ್ಯಾಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಿಲ್ಲ. ಕರಾವಳಿ ಭಾಗಕ್ಕೆ ಸಂಬಂಧಿಸಿದ ಕಥೆ ಆಗಿರುವುದರಿಂದ ಇದೇ ಭಾಗದಲ್ಲಿ ಹೆಚ್ಚಿನ ಚಿತ್ರೀಕರಣ ನಡೆಯಲಿದೆ. ಕನ್ನಡದ ಕಲಾವಿದರಿಗೆ ಮೊದಲ ಆದ್ಯತೆ. ಮತ್ತಷ್ಟು ಹೊಸ ಪ್ರತಿಭೆಗಳನ್ನು, ರಂಗಭೂಮಿ ಕಲಾವಿದರನ್ನು ಈ ಭಾಗದಲ್ಲಿ ಹೆಚ್ಚಾಗಿ ಪರಿಚಯಿಸಲಿದ್ದೇವೆ. ‘ಕಾಂತಾರ’ ಈ ಮಟ್ಟಕ್ಕೆ ಹೋಗಲು ಹೊಂಬಾಳೆ ಕಾರಣ. ಕಥೆಗೆ ಬೇಕಾದ ಬಜೆಟ್‌ ಅನ್ನು ವಿಜಯ ಕಿರಗಂದೂರ್‌ ನೀಡಿದ್ದಾರೆ ಎನ್ನುತ್ತಾರೆ ರಿಷಬ್‌ ಶೆಟ್ಟಿ.