ರಾಂಚಿ: ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆ ನವೆಂಬರ್ 13 ಮತ್ತು ನವೆಂಬರ್ 20ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಚುನಾವಣಾ ಕಣ ರಂಗೇರುತ್ತಿದೆ. ಈ ಮಧ್ಯೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ʼಇಂಡಿಯಾʼ ಮೈತ್ರಿಕೂಟದಲ್ಲಿ ಭಿನ್ನಮತ ಭುಗಿಲೆದ್ದಿದ್ದು, ತಾನು ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಮಿತ್ರ ಪಕ್ಷ ರಾಷ್ಟ್ರೀಯ ಜನತಾ ದಳ (RJD) ಹೇಳಿದೆ.
ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಮಿತ್ರ ಪಕ್ಷಗಳಾದ ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (JMM)ದ ನಿಲುವಿನ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಆರ್‌ಜೆಡಿ ಪ್ರತ್ಯೇಕವಾಗಿ ಕಣಕ್ಕಿಳಿಯುವುದಾಗಿ ಭಾನುವಾರ (ಅಕ್ಟೋಬರ್ 20) ಪಕ್ಷದ ಹಿರಿಯ ಮುಖಂಡ ಮನೋಜ್ ಝಾ ತಿಳಿಸಿದ್ದಾರೆ.
ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ಸಿಂಹಪಾಲು ಪಡೆದಿದ್ದು, ಆರ್‌ಜೆಡಿಗೆ ಕೇವಲ 6 ಸೀಟುಗಳನ್ನು ಬಿಟ್ಟುಕೊಡುವ ಬಗ್ಗೆ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ. ಇದಕ್ಕೆ ತೇಜಸ್ವಿ ಯಾದವ್ ಅವರ ಆರ್‌ಜೆಡಿ ಇದಕ್ಕೆ ಸಮ್ಮತಿಸಿಲ್ಲ. ʼʼನಾವು 12ರಿಂದ 13 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದೇವೆ. ಇದಕ್ಕಿಂತ ಕಡಿಮೆ ಸೀಟನ್ನು ನಾವು ಒಪ್ಪುತ್ತಿಲ್ಲ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಚಿಂತನೆ ನಡೆಸಿದ್ದೇವೆʼʼ ಎಂದು ಮನೋಜ ಝಾ ಹೇಳಿದ್ದಾರೆ.
ರಾಜ್ಯದ ಆಡಳಿತಾರೂಢ ಮಿತ್ರ ಪಕ್ಷಗಳಾದ ಕಾಂಗ್ರೆಸ್ ಮತ್ತು ಹೇಮಂತ್ ಸೊರೇನ್ ಅವರ ಜೆಎಂಎಂ ಪಕ್ಷವು 81 ಸ್ಥಾನಗಳ ಪೈಕಿ 70 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿವೆ. ಆರ್‌ಜೆಡಿಗೆ 6 ಸ್ಥಾನಗಳನ್ನು ಬಿಟ್ಟುಕೊಡುವುದಾಗಿ ಹೇಳಿದ್ದು, ಉಳಿದವುಗಳನ್ನು ಎಡಪಕ್ಷಕ್ಕೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಆರ್‌ಜೆಡಿ ಅಸಮಾಧಾನಗೊಂಡಿದ್ದು, ಜಾರ್ಖಂಡ್‌ನಲ್ಲಿ ತಮ್ಮ ಪಕ್ಷವು 18-20 ಸ್ಥಾನಗಳಲ್ಲಿ ಪ್ರಭಾವ ಹೊಂದಿದೆ ಎಂದು ಮನೋಜ್ ಝಾ ತಿಳಿಸಿದ್ದಾರೆ.
ʼʼಬಿಜೆಪಿಯನ್ನು ಸೋಲಿಸುವುದೇ ನಮ್ಮ ಏಕೈಕ ಗುರಿಯಾಗಿದ್ದರಿಂದ ನಾವು ʼಇಂಡಿಯಾʼ ಮೈತ್ರಿಕೂಟಕ್ಕೆ ಹಾನಿ ಮಾಡುವುದಿಲ್ಲ. ಜಾರ್ಖಂಡ್ ಚುನಾವಣೆಯಲ್ಲಿ ನಾವು ಏಕಾಂಗಿಯಾಗಿ ಸ್ಪರ್ಧಿಸಿದರೂ, 60-62 ಸ್ಥಾನಗಳಲ್ಲಿ ʼಇಂಡಿಯಾʼ ಒಕ್ಕೂಟದ ಅಭ್ಯರ್ಥಿಗಳನ್ನು ಬೆಂಬಲಿಸುತ್ತೇವೆ” ಎಂದು ಅವರು ಹೇಳಿದ್ದಾರೆ.2019ರ ಜಾರ್ಖಂಡ್ ಫಲಿತಾಂಶ
2019ರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ 7 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 1 ಸ್ಥಾನವನ್ನು ಗೆದ್ದಿತ್ತು. ಇನ್ನು ಜೆಎಂಎಂ 43 ಕಡೆ ಸ್ಪರ್ಧಿಸಿ 30 ಕಡೆ ಗೆಲುವು ಸಾಧಿಸಿತ್ತು. 31 ಸ್ಥಾನಗಳಲ್ಲಿ ಕಣಕ್ಕಿಳಿದಿದ್ದ ಕಾಂಗ್ರೆಸ್ 16 ಕಡೆ ಗೆಲುವಿನ ಪತಾಕೆ ಹಾರಿಸಿತ್ತು. ಮೂರು ಮೈತ್ರಿ ಪಕ್ಷಗಳು ಸೇರಿ ಒಟ್ಟು 47 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದ್ದವು. ಬಹುಮತ್ತಕ್ಕೆ ಅಗತ್ಯವಾದ ಸಂಖ್ಯಾಬಲ 41 ಆಗಿದೆ..
ಜಾರ್ಖಂಡ್‌ನಲ್ಲಿ ಎನ್‌ಡಿಎ(NDA) ಮೈತ್ರಿಕೂಟ ಸೀಟು ಹಂಚಿಕೆಯನ್ನು ಈಗಾಗಲೇ ಘೋಷಿಸಿದೆ. ಒಟ್ಟು 81 ಕ್ಷೇತ್ರಗಳಲ್ಲಿ ಬಿಜೆಪಿ 68 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಉಳಿದ ಕ್ಷೇತ್ರಗಳಲ್ಲಿ ಮಿತ್ರ ಪಕ್ಷಗಳು ಸ್ಪರ್ಧಿಸಲಿವೆ. ಜಾರ್ಖಂಡ್‌ನಲ್ಲಿ ನವೆಂಬರ್ 13 ಮತ್ತು ನವೆಂಬರ್ 20ರಂದು 2 ಹಂತಗಳಲ್ಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ನವೆಂಬರ್ 23ರಂದು ನಡೆಯಲಿದೆ. ಪ್ರಸ್ತುತ ಜಾರ್ಖಂಡ್ ವಿಧಾನಸಭೆಯ ಅವಧಿಯು 2025ರ ಜನವರಿ 5ಕ್ಕೆ ಕೊನೆಗೊಳ್ಳಲಿದೆ.