ಬೆಂಗಳೂರು:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್‌ಗಳು ಅಪಘಾತವಾಗಿ ಪ್ರಯಾಣಿಕರು ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಮೊತ್ತ ನೀಡಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಅಪಘಾತಕ್ಕೀಡಾದಾಗ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ದುರದೃಷ್ಟವಶಾತ್ ಮೃತಪಟ್ಟಲ್ಲಿ, ಮೃತ ಪ್ರಯಾಣಿಕರ ಅವಲಂಬಿತರಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವ ಸದ್ದುದೇಶದಿಂದ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್ ವತಿಯಿಂದ ಪ್ರಸ್ತುತ ನೀಡಲಾಗುತ್ತಿರುವ ಆರ್ಥಿಕ ಪರಿಹಾರ ಮೊತ್ತವನ್ನು ಮೂರು ಲಕ್ಷ ರೂ.ನಿಂದ ಹತ್ತು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಈ ಆದೇಶ 2024ರ ಜನವರಿಯಿಂದ ಜಾರಿಗೆ ಬರಲಿದೆ.

ಮೃತರ ಅವಲಂಬಿತರಿಗೆ ಹೆಚ್ಚುವರಿ ಪರಿಹಾರ ಮೊತ್ತವನ್ನು ನೀಡುವ ಸಲುವಾಗಿ ರೂ.50 ರಿಂದ ರೂ.99 ರವರೆಗಿನ ಮುಖಬೆಲೆಯ ಟಿಕೆಟ್ ಪಡೆದು ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರತಿ ಪ್ರಯಾಣಿಕನಿಂದ ತಲಾ ರೂ.1 ಮತ್ತು ರೂ. 100 ಹಾಗೂ ಹೆಚ್ಚಿನ ಬೆಲೆಯ ಟಿಕೆಟ್ ಪಡೆದು ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರತಿ ಪ್ರಯಾಣಿಕನಿಂದ ತಲಾ ರೂ.2 ರಂತೆ ಅಪಘಾತ ಪರಿಹಾರ ನಿಧಿಯನ್ನು ಜ.1ರಿಂದ ಪಡೆಯಲಾಗುವುದು.

100 ಮುಖಬೆಲೆಯ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ ರೂ.1 ಅಪಘಾತ ಪರಿಹಾರ ನಿಧಿ ವಂತಿಕೆ ಸಂಗ್ರಹಣೆ ಮಾಡಲಾಗುತ್ತಿತ್ತು. ಈಗ ರೂ.1 ರಿಂದ ರೂ.49 ರವರೆಗಿನ ಮುಖಬೆಲೆಯ ಟಿಕೆಟ್ ಪಡೆದು ಪ್ರಯಾಣಿಸುವ ಪ್ರಯಾಣಿಕರಿಗೆ ಯಾವುದೇ ಅಪಘಾತ ಪರಿಹಾರ ನಿಧಿ ವಂತಿಕೆ ಇರುವುದಿಲ್ಲ. ಅದಕ್ಕಿಂತ ಹೆಚ್ಚಿನ ದರದ ಪ್ರಯಾಣಕ್ಕೆ ಪ್ರಯಾಣಿಕರಿಂದಲೇ ವಂತಿಕೆ ಸಂಗ್ರಹ ಮಾಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಆದರೆ ಶಕ್ತಿ ಯೋಜನೆಯಡಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಂದ ವಂತಿಗೆ ಹಣ ಪಡೆಯುವ ಬಗ್ಗೆ ಕೆಎಸ್‌ಆರ್‌ಟಿಸಿ ಯಾವುದೇ ಮಾಹಿತಿ ನೀಡಿಲ್ಲ.