ಮೂಡಲಗಿ:
ಗ್ರಾಮೀಣ ಸಮುದಾಯದ ಮಹಿಳೆಯರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲೀಕರಣಗೊಳಿಸಲು 2013-14ರ ಹಣಕಾಸು ವರ್ಷದಿಂದ 2023ರ ಹಣಕಾಸು ವರ್ಷದವರೆಗೆ ಸ್ವಸಹಾಯ ಗುಂಪುಗಳಿಗೆ ರೂ.7.68 ಲಕ್ಷ ಕೋಟಿ ರೂಪಾಯಿಗಳ ಬ್ಯಾಂಕ್ ಸಾಲವನ್ನಾಗಿ ನೀಡಲಾಗಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ರಾಜ್ಯಸಭೆಯ ಚಳಿಗಾಲ ಅಧಿವೇಶನದಲ್ಲಿ ಸ್ವಸಹಾಯ ಗುಂಪುಗಳ ಬ್ಯಾಂಕ್ ಲಿಂಕ್ ಯೋಜನೆ ಅನುಷ್ಠಾನದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಸ್ವಸಹಾಯ ಗುಂಪುಗಳ ಬ್ಯಾಂಕ್ ಲಿಂಕ್ ಯೋಜನೆಯಡಿ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರ ತರಬೇತಿ ಮತ್ತು ಅರಿವು ನೀಡುವುದು, ಗ್ರಾಮೀಣ ಬ್ಯಾಂಕ್ ಶಾಖೆಗಳಲ್ಲಿ ಬ್ಯಾಂಕ್ ಸಖಿಗಳ ತರಬೇತಿ ಮತ್ತು ಅವರ ನಿಯೋಜನೆ ಮಾಡುವುದು, ಗ್ರಾಮೀಣ ಬ್ಯಾಂಕ್ ಶಾಖೆಗಳಲ್ಲಿ ಸಮುದಾಯ ಆಧಾರಿತ ಮರುಪಾವತಿ ಕಾರ್ಯವಿಧಾನವನ್ನು ಪ್ರಾರಂಭಿಸುವುದು, ಸ್ವಸಹಾಯ ಗುಂಪುಗಳ ಕ್ರೆಡಿಟ್ ಲಿಂಕ್‌ಗಳ ಪ್ರಮುಖ ಘಟಕಗಳನ್ನು ಒಳಗೊಂಡು ಕಾರ್ಯನಿರ್ವಹಿಸುತ್ತಿದೆ ಎಂದರು.

ಬ್ಯಾಂಕ್ ಸಖಿ, ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುವ ಸ್ವಸಹಾಯ ಗುಂಪುಗಳ ತರಬೇತಿ ಪಡೆದ ಸದಸ್ಯರು ವಹಿವಾಟು ಮತ್ತು ಅಪ್ಲಿಕೇಶನ್ ಪ್ರಕ್ರಿಯೆಗಳಲ್ಲಿ ಸಂಘದ ಸದಸ್ಯರಿಗೆ ಸಹಾಯ ಮಾಡುತ್ತಾರೆ. ಪ್ರಸ್ತುತ, 45,746 ಬ್ಯಾಂಕ್ ಸಖಿಗಳನ್ನು ಗ್ರಾಮೀಣ ಬ್ಯಾಂಕ್ ಶಾಖೆಗಳಲ್ಲಿ ನಿಯೋಜಿಸಲಾಗಿದೆ, ಇದು ಬ್ಯಾಂಕ್‌ಗಳು ಮತ್ತು ಸ್ವಸಹಾಯ ಗುಂಪುಗಳ ನಡುವೆ ತಡೆರಹಿತ ಸಂವಹನವನ್ನು ಸುಲಭಗೊಳಿಸುತ್ತದೆ ಎಂದರು.

2019ರಲ್ಲಿ ನಡೆಸಿದ ಸಂಶೋಧನೆ ಅಧ್ಯಯನದ ಪ್ರಕಾರ ಮಹಿಳಾ ಸ್ವಸಹಾಯ ಸಂಘಗಳಿಂದ ಸದಸ್ಯರು ಸಾಲವನ್ನು ಕೃಷಿ ಚಟುವಟಿಕೆಗಳಿಗೆ ಶೇ 43.9%, ಹಸು/ಎಮ್ಮೆ ಖರೀದಿಗೆ ಶೇ7.7%, ಇತರ ಜಾನುವಾರು ಚಟುವಟಿಕೆಗಳಿಗೆ ಶೇ 6.7%, ಮೇಕೆ/ಕುರಿ ಖರೀದಿಗೆ ಶೇ6.3%, ಇತರೆ ಶೇ 31.9% (ಆರೋಗ್ಯ, ವಸತಿ ಇತ್ಯಾದಿ ಸೇರಿದಂತೆ) ಸ್ವಸಹಾಯ ಸಂಘಗಳಿಂದ ಈ ಎಲ್ಲ ಉದ್ದೇಶಗಳಿಗೆ ಸದಸ್ಯರು ಸಾಲದ ಬಳಕೆ ಮಾಡಿಕೊಂಡಿದ್ದಾರೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಹಾಯ ಮಾಡುವ ಉದ್ದೇಶದಿಂದ ದೀನದಯಾಳ್ ಅಂತ್ಯೋದಯ ಯೋಜನೆಯಡಿ (ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್) ಉಪಯೋಜನೆಯಾದ ಸ್ಟಾರ್ಟ್-ಅಪ್ ವಿಲೇಜ್ ಎಂಟರ್‌ಪ್ರೆನ್ಯೂರ್‌ಶಿಪ್ ಪ್ರೋಗ್ರಾಂ ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮೀಣ ಬಡ ಮಹಿಳೆಯರನ್ನು ಸ್ವ-ಸಹಾಯ ಗುಂಪುಗಳಾಗಿ ಸಂಘಟಿಸಲು ಮತ್ತು ಅವರ ಸ್ವಂತ ಅಭಿವೃದ್ಧಿಯ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮೂಲಕ ಗ್ರಾಮೀಣ ಸಮುದಾಯಗಳನ್ನು ಸಬಲೀಕರಣಗೊಳಿಸಲು ಅವರ ಸಾಮರ್ಥ್ಯವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದರು.

ಆರೋಗ್ಯ, ಪೋಷಣೆ, ನೈರ್ಮಲ್ಯ, ಅಸ್ತಿತ್ವದಲ್ಲಿರುವ ಸರ್ಕಾರದ ಯೋಜನೆಗಳು, ಲಿಂಗ ಸಮಸ್ಯೆಗಳು, ನಾಗರಿಕ ಹಕ್ಕುಗಳು ಮತ್ತು ಯೋಜನೆ, ನಿರ್ಧಾರ ತೆಗೆದುಕೊಳ್ಳುವುದು, ಸಮಸ್ಯೆ ಪರಿಹಾರ ಮತ್ತು ಸಂಘರ್ಷ ಪರಿಹಾರ ಕೌಶಲ್ಯಗಳಲ್ಲಿ ಮಹಿಳೆಯರ ಸಾಮರ್ಥ್ಯವನ್ನು ನಿರ್ಮಿಸುವ ವಿವಿಧ ಅಭಿವೃದ್ಧಿ ಅಂಶಗಳ ಕುರಿತು ಸ್ವಸಹಾಯ ಗುಂಪು ಸದಸ್ಯರಲ್ಲಿ ಜಾಗೃತಿ ಮೂಡಿಸಿ ಗ್ರಾಮೀಣ ಸಮುದಾಯಗಳನ್ನು ಸಬಲೀಕರಣಗೊಳಿಸಲು ಅವರ ಸಾಮರ್ಥ್ಯವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದು ಸಚಿವರು ಉತ್ತರಿಸಿದ್ದಾರೆಂದು ಈರಣ್ಣ ಕಡಾಡಿ ಮಾಹಿತಿ ನೀಡಿದರು.