ಬೆಳಗಾವಿ : ರಡ್ಡಿ ಸಮಾಜ ಸ್ವಾಭಿಮಾನದ ಪ್ರತೀಕ. ಸಮಾಜದಲ್ಲಿನ ಬೆಂಕಿ ಆರಿಸಿ, ಸೌಹಾರ್ದತೆ ಕಾಪಾಡುವ ಸಮಾಜ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿಪ್ರಾಯ ಪಟ್ಟಿದ್ದಾರೆ.

ಬೆಳಗಾವಿಯ ಕೆ ಕೆ ಕೊಪ್ಪದ ಬಳಿ ವೆಂಕಟೇಶ್ವರ ದೇವಸ್ಥಾನ, ಹೇಮರಡ್ಡಿ ಮಲ್ಲಮ್ಮ ಧ್ಯಾನ ಮಂದಿರ ಮತ್ತು ಕಲ್ಯಾಣ ಮಂಟಪ ನಿರ್ಮಾಣದ ಭೂಮಿ ಪೂಜೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಗ್ರಾಮೀಣ ಕ್ಷೇತ್ರದಲ್ಲಿ ಇಂತಹ ದೇವಸ್ಥಾನ ನಿರ್ಮಾಣವಾಗುತ್ತಿರುವುದು ಕ್ಷೇತ್ರದ ಪಾಲಿನ ಸೌಭಾಗ್ಯವೆಂದೇ ಭಾವಿಸುತ್ತೇನೆ. ನಾನೇ ಮುಂದೆ ನಿಂತು, ಹೆಗಲಿಗೆ ಹೆಗಲು ಕೊಟ್ಟು ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಸಹಕರಿಸುತ್ತೇನೆ. ಇದು ನನ್ನದೇ ಸಮಾಜದ ಕಾರ್ಯ ಎಂದು ತಿಳಿದು ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಇಲ್ಲಿ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿದರೂ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ನಮ್ಮ ಸರಕಾರ ಜನರಿಗೋಸ್ಕರ ಇರುವ ಸರಕಾರ. ಜನಪರ ನಿಲುವಿನ ಸರಕಾರ ಎಂದ ಅವರು, ಬೆಳಗಾವಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಈ ಸ್ಥಳವನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ನಾನು ಶಾಸಕಿಯಾದ ನಂತರ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 140 ದೇವಸ್ಥಾನಗಳನ್ನು ಅಭಿವೃದ್ಧಿಪಡಿಸುತ್ತಿದ್ದೇನೆ. ಹಿರಿಯ ಸಚಿವ ಎಚ್.ಕೆ.ಪಾಟೀಲ ಅವರು ಸೌದತ್ತಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ಕ್ರಮ ತೆಗೆದುಕೊಂಡಿದ್ದಾರೆ. ಪ್ರಾಧಿಕಾರ ರಚಿಸಿ ಕೇಂದ್ರ ಸರಕಾರದಿಂದ 110 ಕೋಟಿ ರೂ. ಅನುದಾನ ತಂದಿದ್ದಾರೆ. ರಾಜಹಂಸಗಡ ಅಭಿವೃದ್ಧಿಗೂ ಈಗಾಗಲೆ ಒಂದು ಕೋಟಿ ರೂ. ಮಂಜೂರು ಮಾಡಿದ್ದು, ಇನ್ನೂ ಹೆಚ್ಚಿನ ಸಹಾಯ ನೀಡುವ ವಿಶ್ವಾಸವಿದೆ. ಅವರು ನನಗೆ ಆದರ್ಶ ವ್ಯಕ್ತಿ. ಅವರ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕಾರ್ಯಕ್ರಮದಲ್ಲಿ ಹರಿಹರ ತಾಲೂಕಿನ ಎರೆಹೊಸಳ್ಳಿಯ ರೆಡ್ಡಿ ಗುರುಪೀಠದ ಶ್ರೀ ವೇಮನಾನಂದ ಶ್ರೀಗಳು, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಪ್ರವಾಸೋದ್ಯಮ ಮತ್ತು ಕಾನೂನು ಸಚಿವ ಎಚ್.ಕೆ.ಪಾಟೀಲ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಆಸೀಫ್ ಸೇಠ್, ಮಾಜಿ ಶಾಸಕರಾದ ಡಿ.ಆರ್.ಪಾಟೀಲ, ಆರ್.ವಿ.ಪಾಟೀಲ, ಇಂದಿರಾಬಾಯಿ ಮಳಲಿ, ರೆಡ್ಡಿ ಸಂಘದ ಅಧ್ಯಕ್ಷರೂ, ಬಾಲಾಜಿ ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷ ರಾಮಣ್ಣ ಮುಳ್ಳೂರು, ಡಾ.ಗಿರೀಶ್ ಸೋನವಾಲ್ಕರ್, ರಮೇಶ್ ಜಂಗಲ್, ಎನ್.ವಿ.ಬರಮನಿ, ಪಾಂಡುರಂಗ ರಡ್ಡಿ ಸೇರಿದಂತೆ ಟ್ರಸ್ಟ್ ಪದಾದಿಕಾರಿಗಳು, ರೆಡ್ಡಿ ಸಮಾಜದ ಮುಖಂಡರು ಉಪಸ್ಥಿತರಿದ್ದರು

 

ಸಂಭ್ರಮಾಚರಣೆ ವೇಳೆ ಮೃತಪಟ್ಟವರಿಗೆ ಆರ್ಸಿಬಿ, ಕೆಎಸ್ಸಿಎ ಒಂದು ಕೋಟಿ ಪರಿಹಾರ ನೀಡಲಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಗ್ರಹ:

18 ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಆರ್ ಸಿಬಿ ತಂಡದ ಸಂಭ್ರಮಾಚರಣೆ ವೇಳೆ ಮೃತಪಟ್ಟ ಕುಟುಂಬದವರಿಗೆ ಕೆಎಸ್ಸಿಎ ಹಾಗೂ ಆರ್ ಸಿಬಿ ಮ್ಯಾನೇಜ್ಮೆಂಟ್ ವತಿಯಿಂದ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಗ್ರಹಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಅಭಿಮಾನಿಗಳ ಸಾವು ನೋವು ತಂದಿದೆ. ಆರ್ ಸಿಬಿ ಹಾಗೂ ಕೆ ಎಸ್ಸಿಎ‌ ಹೆಚ್ಚಿನ ಪರಿಹಾರ ಕೊಡಬೇಕು ಎಂದರು.

ಈ ಪ್ರಕರಣದಲ್ಲಿ ವಿರೋಧ ಪಕ್ಷಗಳು ಜನರ ದಾರಿ ತಪ್ಪಿಸುತ್ತಿವೆ. ನಮ್ಮ ಹಿರಿಯರು ಇದಕ್ಕೆ ತಕ್ಕ ಉತ್ತರ ಕೊಡಲಿದ್ದಾರೆ. ರಾಜಕಾರಣಕ್ಕಿಂತ ಘಟನೆ ಯಾಕೆ ಆಯಿತು ಎಂಬುದು ಗೊತ್ತಾಗಬೇಕು. ಇಂಥ ದುರ್ಘಟನೆ ನಡೆದಿದ್ದು ನಿಜಕ್ಕೂ ದುರದೃಷ್ಟಕರ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.