ಕಾರವಾರ: ಗುಡ್ಡ ಕುಸಿತ ಪ್ರದೇಶದ ಸುತ್ತ ಮುತ್ತಲಿನ ಜನರು ಸುರಕ್ಷಿತ ಸ್ಥಳದಲ್ಲಿರುವಂತೆ ಮನವಿ ಮಾಡಿ ಅಂಕೋಲಾದ ಶಿರೂರು ಬಳಿ ಗುಡ್ಡ ಕುಸಿತದ ಮಣ್ಣಿನ ಅಡಿಯಲ್ಲಿ ಸಿಲುಕಿದವರ ಹೊರ ತೆಗೆಯುವ ಕಾರ್ಯ ತೀವ್ರಗೊಳಿಸುವಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್‌ ನಾಯ್ಕ ಆಗ್ರಹಿಸಿದ್ದಾರೆ.

ಮಂಗಳವಾರ ಕಾರವಾರ ತಾಲ್ಲೂಕಿನ ಕಡವಾಡದ ಮಂದ್ರಾಳಿ, ಚೆಂಡಿಯಾ ಹಾಗೂ ಅಂಕೋಲಾದ ಶಿರೂರು ಬಳಿ ಗುಡ್ಡ ಕುಸಿತ ಪ್ರದೇಶಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಭೇಟಿ ನೀಡಿ ಮಾತನಾಡಿದರು.

ಜಿಲ್ಲೆಯ ಕರಾವಳಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ಇದರಿಂದ ಪ್ರವಾಹ ಉಂಟಾಗುತ್ತಿದೆ. ಕಾರವಾರದ ಚೆಂಡಿಯಾದಲ್ಲಿ ಗುಡ್ಡದಿಂದ ನೀರು ಹರಿದು ಬರುತ್ತಿದೆ. ಸಮುದ್ರಕ್ಕೆ ನೀರು ಹರಿದು ಹೋಗಲು ಆಗದೆ ಪ್ರವಾಹವಾಗುತ್ತಿದೆ. ಬ್ಲಾಕೆಜ್‌ನಿಂದಾಗಿ ಹೆದ್ದಾರಿಯೂ ನೀರಿನಲ್ಲಿ ಮುಳುಗಡೆಯಾಗಿದೆ ಎಂದರು.

ನಿರಂತರ ಮಳೆಯಿಂದ ಕಾರವಾರ ಅಂಕೋಲಾ ಸೇರಿದಂತೆ ಪ್ರವಾಹ ಹಾಗೂ ಗುಡ್ಡ ಕುಸಿತವಾಗಿದ್ದು, ಜನ ಜಾನುವಾರುಗಳ ರಕ್ಷಣೆ ಪರಿಹಾರ ಕಾರ್ಯವನ್ನು ಸರ್ಕಾರ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಈಗಾಗಲೇ ಗುಡ್ಡ ಕುಸಿತ ಸ್ಥಳದಲ್ಲಿ ಮಣ್ಣಿನ ತೆರವು ಮಾಡಲಾಗುತ್ತಿದೆ. ಶೀಘ್ರದಲ್ಲಿ ಸಂಚಾರಕ್ಕೆ ರಸ್ತೆ ತೆರವು ಮಾಡಲಾಗುತ್ತದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನರು ಜಾಗೃತೆ ವಹಿಸಬೇಕು. ಮಣ್ಣಿನ ಅಡಿಯಲ್ಲಿ‌ ಸಿಲುಕಿದವರ ಹೊರತೆಗೆಯುವ ಕಾರ್ಯ ಜಿಲ್ಲಾಡಳಿತ ಚುರುಕುಗೊಳಿಸಬೇಕು ಎಂದು ಆಗ್ರಹಿಸಿದರು.