ಮಾಸ್ಕೋ: ಕ್ಯಾನ್ಸರ್ ರೋಗ ಇದೀಗ ಎಲ್ಲೆಡೆ ಪತ್ತೆಯಾಗುತ್ತಿದೆ. ದೂರದಲ್ಲಿ ಕೇಳುತ್ತಿದ್ದ ಕ್ಯಾನ್ಸರ್ ಪ್ರಕರಣಗಳು ಇದೀಗ ಅಕ್ಕ ಪಕ್ಕ, ಮನೆ ಮನೆಗಳಲ್ಲೂ ಕಾಣಸಿಗುತ್ತಿದೆ. ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದರೆ ಮಾತ್ರ ರೋಗಿಗಳ ಅಪಾಯದಿಂದ ಪಾರಾಗಬಹುದು. ಇದೀಗ ರಷ್ಯಾ ವಿಶೇಷ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಿದೆ. ಇದು ಕ್ಯಾನ್ಸರ್ ಲಸಿಕೆ. mRNA ಲಸಿಕೆ ಕ್ಯಾನ್ಸರ್ ವಿರುದ್ದ ಹೋರಾಡಲಿದೆ ಎಂದು ರಷ್ಯಾ ಹೇಳಿದೆ. ವಿಶೇಷ ಅಂದರೆ ಈ ಲಸಿಕೆಯನ್ನು ರಷ್ಯಾ ಉಚಿತವಾಗಿ ನೀಡುವುದಾಗಿ ಘೋಷಿಸಿದೆ.

ರಷ್ಯಾ ಅಭಿವೃದ್ಧಿಪಡಿಸಿದ mRNA ಕ್ಯಾನ್ಸರ್ ಲಸಿಕೆ 2025ರ ಆರಂಭದಲ್ಲೇ ಬಿಡುಗಡೆಯಾಗಲಿದೆ.ಬಿಡುಗಡೆ ಬೆನ್ನಲ್ಲೇ ರಷ್ಯಾ ಮಾರುಕಟ್ಟೆಯಲ್ಲಿ ಕ್ಯಾನ್ಸರ್ ಲಸಿಕೆ ಲಭ್ಯವಾಗಲಿದೆ. ರಷ್ಯಾದ ರೇಡಿಯಲ್ ಮೆಡಿಕಲ್ ರೀಸರ್ಚ್ ಸೆಂಟರ್, ಆರೋಗ್ಯ ಸಚಿವಾಲಯ ಈ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದೆ. ವಿಶೇಷ ಅಂದರೆ ಪ್ರಾಯೋಗಿಕ ಹಂತದಲ್ಲಿ ಈ ಲಸಿಕೆ ಕ್ಯಾನ್ಸರ್ ಟ್ಯೂಮರ್ ಬೆಳವಣಿಗೆಯನ್ನು ನಿಯಂತ್ರಿಸಿದೆ. ಕ್ಯಾನ್ಸರ್ ಪತ್ತೆಯಾದ ರೋಗಿಗಳಲ್ಲಿ ಟ್ಯೂಮರ್ ನಿಯಂತ್ರಿಸಿ ರೋಗಿಗಳನ್ನು ಕ್ಯಾನ್ಸರ್‌ನಿಂದ ಮುಕ್ತವಾಗಿಸಲು ಈ ಲಸಿಕೆ ಸಹಕರಿಸಿದೆ ಎಂದು ಗಮಾಲೆಯಾ ನ್ಯಾಷನಲ್ ರೀಸರ್ಚ್ ಸೆಂಟರ್‌ನ ಎಪಿಡಮಿಯೋಲಜಿ ಹಾಗೂ ಮೈಕ್ರೋಬಯೋಲಜಿಯ ನಿರ್ದೇಶಕ ಅಲೆಕ್ಸಾಂಡರ್ ಗಿಂಟ್ಸ್‌ಬರ್ಗ್ ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ಕುರಿತು ಘೋಷಣೆ ಮಾಡಿದ್ದರು. ಕ್ಯಾನ್ಸರ್ ವಿರುದ್ದ ಸಮರ್ಥವಾಗಿ ಹೋರಾಡಬಲ್ಲ ಲಸಿಕೆಯನ್ನು ರಷ್ಯಾ ಅಭಿವೃದ್ಧಿಪಡಿಸಿದೆ. ಈ ಲಸಿಕೆ ಪ್ರಾಯೋಗಿಕ ಹಂತದಲ್ಲಿ ಉತ್ತಮ ಫಲಿತಾಂಶ ನೀಡಿದೆ. ಈ ಲಸಿಕೆ ಅಭಿವೃದ್ಧಿಯಲ್ಲಿ ನಾವು ಬಹುತೇಕ ಯಶಸ್ಸು ಸಾಧಿಸಿದ್ದೇವೆ. ಸಾಮಾನ್ಯವಾಗಿ ಲಸಿಕೆ ಅಭಿವೃದ್ಧಿಯಲ್ಲಿ ಮ್ಯಾಟ್ರಿಕ್ಸ್ ಮೆಥಡ್ ಹಾಗೂ ಮ್ಯಾಥಮ್ಯಾಟಿಕಲ್ ಟರ್ಮ್ಸ್ ಲೆಕ್ಕಾಚಾರ ಹಾಕಲು ಸುದೀರ್ಘ ದಿನಗಳೇ ಬೇಕಾಗುತ್ತದೆ. ಆದರೆ ಇದೀಗ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ಈ ಕ್ರಮವನ್ನು ಸುಲಭಗೊಳಿಸಲಾಗಿದೆ. ಹೀಗಾಗಿ ಸುದೀರ್ಘ ದಿನಗಳು ತೆಗೆದುಕೊಳ್ಳುವ ಲೆಕ್ಕಾಚಾರಗಳು ಕೇವಲ ಗಂಟೆಯಲ್ಲಿ ಮುಗಿದು ಹೋಗಲಿದೆ ಎಂದು ಅಲೆಕ್ಸಾಂಡರ್ ಗಿಂಟ್ಸ್‌ಬರ್ಗ್ ಹೇಳಿದ್ದಾರೆ.

ಈ ಲಸಿಕೆ ರೋಗಿಯ ದೇಹದಲ್ಲಿ ಕ್ಯಾನ್ಸರ್ ವಿರುದ್ದ ಹೋರಾಡಬಲ್ಲ ಪ್ರತಿಕಾಯ ಹಾಗೂ ರೋಗ ನಿರೋಧ ಶಕ್ತಿಯನ್ನು ನೀಡಲಿದೆ. ಕ್ಯಾನ್ಸರ್ ಸೆಲ್ಸ್ ನಿಯಂತ್ರಿಸಲು ಸಹಕಾರಿಯಾಗಲಿದೆ. ಕ್ಯಾನ್ಸರ್ ಟ್ಯೂಮರ್ ಸೆಲ್ಸ್‌ನ ಪ್ರೊಟಿನ್ಸ್ ಅಥವಾ ಆ್ಯಂಟಿಜೆನ್ಸ್ ವಿರುದ್ದ ಶಕ್ತವಾಗಿ ಹೋರಾಡಲಿದೆ. ದೇಹದಲ್ಲಿ ಕ್ಯಾನ್ಸರ್ ಸೆಲ್ಸ್ ನಿರೋಧ ಪ್ರತಿಕಾಯಗಳನ್ನು ಉತ್ಪಾದಿಸುವ ಮೂಲಕ, ಟ್ಯೂಮರ್ ನಿಯಂತ್ರಿಸಲು ಸಹಾಯ ಮಾಡಲಿದೆ. ಗರ್ಭಕಂಠ ಕ್ಯಾನ್ಸರ್ ಸೇರಿದಂತೆ ಹಲವು ಮಾರಕ ಹಾಗೂ ಅಪಾಯಾಕಾರಿ ಟ್ಯೂಮರ್ ಸೆಲ್ಸ್ ವಿರುದ್ಧವೂ ಈ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಗಿಂಟ್ಸ್‌ಬರ್ಗ್ ಹೇಳಿದ್ದಾರೆ.

ಕ್ಯಾನ್ಸರ್ ಲಸಿಕೆ ವೈದ್ಯಲೋಕದಲ್ಲಿನ ಮಹತ್ವದ ಮೈಲಿಗಲ್ಲಾಗಿದೆ. ಹಲವು ದೇಶಗಳು ಕ್ಯಾನ್ಸರ್ ವಿರುದ್ದ ಹೋರಾಡಲು ಲಸಿಕೆ, ಔಷಧಿಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆದರೆ ಇನ್ನು ಆರಂಭಿಕ ಹಂತದಲ್ಲಿದೆ. ಇದರ ನಡುವೆ ರಷ್ಯಾ ಪರಿಣಾಮಕಾರಿಯಾದ ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ಘೋಷಿಸಿದೆ. ಈ ಲಸಿಕೆಯನ್ನು ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ನೀಡುವುದಾಗಿ ಹೇಳಿದೆ. ರಷ್ಯಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಲಸಿಕೆ ಉಚಿತವಾಗಿ ಸಿಗಲಿದೆ ಎಂದಿದೆ. ಕ್ಯಾನ್ಸರ್ ಮಾರಕ ರೋಗಕ್ಕೆ ರಷ್ಯಾ ಅಬಿವೃದ್ಧಿಪಡಿಸಿದೆ ಈ ಲಸಿಕೆ ವೈದ್ಯ ಲೋಕದಲ್ಲಿ ಹೊಸ ಅಧ್ಯಾಯ ಬರೆಯುವ ಸಾಧ್ಯತೆ ಇದೆ.