ಮಂಗಳೂರು : ಪರ್ಯಾಯ ಸಿನಿಮಾ ಹಾಗೂ ಟಿವಿ ಧಾರಾವಾಹಿಗಳ ಮೂಲಕ ಕನ್ನಡ ಮನೊರಂಜನಾ ಲೋಕಕ್ಕೆ ಅವಿಸ್ಮರಣೀಯ ಕಾಣೆ ನೀಡಿರುವ ನಿರ್ದೇಶಕರಲ್ಲಿ ಒಬ್ಬರಾಗಿರುವ ಸದಾನಂದ ಸುವರ್ಣ ಇಂದು (ಜುಲೈ 16) ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಸುವರ್ಣ ಅವರು ಗಿರೀಶ್ ಕಾಸರವಳ್ಳಿ, ಪ್ರಕಾಶ್ ರೈ ಅವರಂಥಹಾ ಅಪ್ರತಿಮ ಪ್ರತಿಭೆಗಳನ್ನು ಗುರುತಿಸಿ ಅವರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಿದವರು. ಮೂಲತಃ ಮೂಲ್ಕಿಯವರಾದ ಸದಾನಂದ ಸುವರ್ಣ ನಿರ್ದೇಶನದ ಜೊತೆಗೆ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಕೊಂಡಿದ್ದರು. ಜೊತೆಗೆ ರಂಗಭೂಮಿಯಲ್ಲಿಯೂ ಹಲವು ನೆನಪುಳಿವ ನಾಟಕಗಳನ್ನು ನಿರ್ದೇಶಿಸಿದ್ದಾರೆ.

ಕಾಸರವಳ್ಳಿ ನಿರ್ದೇಶನ ಮಾಡಿದ ಮೊದಲ ಸಿನಿಮಾ ‘ಘಟಶ್ರಾದ್ಧ’ಕ್ಕೆ ಹಣ ಹೂಡಿದವರು ಸುಸದಾನಂದ ಸುವರ್ಣ ಅವರೇ. ಪ್ರಕಾಶ್ ರೈ ನಟನಾಗಿ ಗುರುತಿಸಿಕೊಳ್ಳಲು ಸಹಾಯ ಮಾಡಿದ ಹಾಗೂ ಕನ್ನಡ ಟಿವಿ ಜಗತ್ತಿನ ಎವರ್‌ಗ್ರೀನ್ ಧಾರಾವಾಹಿಗಳಲ್ಲಿ ಒಂದಾದ ‘ಗುಡ್ಡದ ಭೂತ’ವನ್ನು ನಿರ್ದೇಶಿಸಿದ್ದು ಇದೇ ಸದಾನಂದ ಸುವರ್ಣ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರ ಸಂದರ್ಶವನ್ನು ಸಹ ಸದಾನಂದ ಸುವರ್ಣ ಅವರು ಮಾಡಿದ್ದರು, ‘ಹುಚ್ಚು ಮನಸಿನ ಹತ್ತು ಮುಖಗಳು’ ಹೆಸರಿನಲ್ಲಿ ಈ ಸಂದರ್ಶನ ಪ್ರಸಾರವಾಗಿತ್ತು.

ರಂಗಭೂಮಿಯಲ್ಲಿಯೂ ಸಹ ಸದಾನಂದ ಸುವರ್ಣ ಸಕ್ರಿಯರಾಗಿದ್ದರು, ಅವರ ನಿರ್ದೇಶನದ ‘ಕೋರ್ಟ್ ಮಾರ್ಷಲ್’ ನಾಟಕ ಬಹಳ ಜನಪ್ರಿಯತೆ ಗಳಿಸಿತ್ತು. ಇದರ ಜೊತೆಗೆ ‘ಉರುಳು’, ‘ಧರ್ಮಚಕ್ರ’, ‘ಸುಳಿ’, ‘ಡೊಂಕುಬಾಲ’ ಇನ್ನೂ ಕೆಲವು ನಾಟಕಗಳನ್ನು ಸದಾನಂದ ಸುವರ್ಣ ನಿರ್ದೇಶಿಸಿದ್ದರು. ಸದಾನಂದ ಸುವರ್ಣ ನಿರ್ಮಾಣ ಮಾಡಿದ್ದ ‘ಘಟಶ್ರಾದ್ಧ’ ಸಿನಿಮಾಕ್ಕೆ ಕೇಂದ್ರ ಸರ್ಕಾರವು ಸುವರ್ಣ ಕಮಲ
ಪ್ರಶಸ್ತಿಯನ್ನು ತಂದು ಕೊಟ್ಟಿತ್ತು.