
ಬೆಳಗಾವಿ: ಬದ್ಧತೆಯುಳ್ಳ ಪ್ರಾಧ್ಯಾಪಕರಾದ ಬಸವರಾಜ ಜಗಜಂಪಿ ಕನ್ನಡದ ಶಕ್ತಿ. ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಅವರು ಅಹಿರ್ನಿಶಿ ದುಡಿದಿದ್ದಾರೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.
ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಾಹಿತಿ ಬಸವರಾಜ ಜಗಜಂಪಿ ಅವರ ‘ಪರಿಣತಮತಿ’ ಅಭಿನಂದನಾ ಗ್ರಂಥ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
‘ಸಮಾಜಮುಖಿಯಾದ ಕೆಎಲ್‌ಇ ಸಂಸ್ಥೆ ಶಿಕ್ಷಣ, ಆರೋಗ್ಯ, ಸಂಶೋಧನೆಯ ನೆಲೆಗಟ್ಟಿನಲ್ಲಿ ಇಂದು ಜಾಗತಿಕವಾಗಿ ಬೆಳೆದಿದ್ದರೆ, ಅದರ ಹಿಂದೆ ಇಂಥ ಅಸಂಖ್ಯ ಶ್ರಮಿಕರ ಕೊಡುಗೆ ಇದೆ. ಕಚೇರಿ ಸಿಬ್ಬಂದಿಯಿಂದ ಹಿಡಿದು ಪ್ರಾಚಾರ್ಯರವರೆಗಿನ ವಿವಿಧ ಹುದ್ದೆಗಳನ್ನು ಜಗಜಂಪಿ ಸಮರ್ಪಣಾ ಭಾವದಿಂದ ನಿಭಾಯಿಸಿದ್ದಾರೆ. ಒಬ್ಬ ಕನ್ನಡ ಪ್ರಾಧ್ಯಾಪಕ ಹೇಗಿರಬೇಕು? ಹೇಗೆ ಬದುಕಬೇಕು ಎನ್ನುವುದಕ್ಕೆ ಅವರು ನಿದರ್ಶನ’ ಎಂದು ಶ್ಲಾಘಿಸಿದರು.
‘ಕೆಎಲ್‌ಇ ಸಂಸ್ಥೆ ಮತ್ತು ಜಗಜಂಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವಿದ್ಯಾರ್ಥಿಯಾಗಿ, ಪ್ರಾಧ್ಯಾಪಕರಾಗಿ ಸಂಸ್ಥೆಯ ಹಿರಿಮೆ-ಗರಿಮೆ, ಸ್ಥಾನಮಾನ ಹೆಚ್ಚಿಸಿದ್ದಾರೆ. ಅವರು ಕೆಎಲ್‌ಇ ಸಂಸ್ಥೆಯ ನಿಜವಾದ ಸಾಂಸ್ಕೃತಿಕ ರಾಯಭಾರಿ’ ಎಂದರು.
ಗದುಗಿನ ತೋಂಟದ ಸಿದ್ದರಾಮ ಸ್ವಾಮೀಜಿ, ‘ಒಬ್ಬ ಪ್ರಾಧ್ಯಾಪಕ ತರಗತಿ ಕೊಠಡಿಯಲ್ಲಿ ಮಾತ್ರವಲ್ಲ; ತರಗತಿ ಆಚೆಗೆ ಸಮಾಜ ಕಟ್ಟುವ ಕೆಲಸ ಮಾಡಬೇಕು. ಬಸವರಾಜ ಜಗಜಂಪಿ ಸಾಹಿತ್ಯ ಕೃಷಿ ಮೂಲಕ ಆ ಕೆಲಸ ವ್ಯವಸ್ಥಿತವಾಗಿ ಮಾಡಿದ್ದಾರೆ’ ಎಂದರು.
‘ಲಿಂ.ಶಿವಬಸವ ಸ್ವಾಮೀಜಿ ಅವರ ಕಾಲದಿಂದಲೂ ನಾಗನೂರು ರುದ್ರಾಕ್ಷಿಮಠದ ಜತೆಗೆ ಒಡನಾಟ ಹೊಂದಿದ ಜಗಜಂಪಿ, ‘ಕನ್ನಡ ಕಾಯಕಯೋಗಿ’ ಎಂಬ ಕೃತಿ ರಚಿಸಿದ್ದಾರೆ. ಅದು ಆರು ಮುದ್ರಣ ಕಂಡಿದ್ದು, 25 ಸಾವಿರ ಪ್ರತಿ ಮಾರಾಟವಾಗಿವೆ. ಇಂಗ್ಲಿಷ್ ಭಾಷೆಗೂ ಅದು ಅನುವಾದಗೊಂಡಿದೆ’ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ‘ಜಗಜಂಪಿ ಪ್ರಾಧ್ಯಾಪಕರಾಗಿ, ಕೆಎಲ್‌ಇ ಸಂಸ್ಥೆಯ ಹೆಸರನ್ನು ಎತ್ತರಕ್ಕೆ ಬೆಳೆಸಿದರು. ಅನೇಕ ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಅವರ ಪಾತ್ರವಿದೆ. ಇಂಥ ಪ್ರಾಧ್ಯಾಪಕರು ಇರುವುದರಿಂದಲೇ ಕೆಎಲ್‌ಇ ಸಂಸ್ಥೆ ಬೆಳೆದಿದೆ’ ಎಂದು ಪ್ರಶಂಸಿಸಿದರು.
ಅಭಿನಂದನಾ ನುಡಿಗಳನ್ನಾಡಿದ ಸಾಹಿತಿ ವಿ.ಎಸ್.ಮಾಳಿ, ‘ಜಗಜಂಪಿ ಕೆಎಲ್‌ಇ ಸಂಸ್ಥೆಗೆ ಸೀಮಿತಗೊಳ್ಳಲಿಲ್ಲ. ತಮ್ಮ ಭಾಷಣಗಳ ಮೂಲಕ ನಾಡಿನುದ್ದಗಲಕ್ಕೂ ಕನ್ನಡ ಉತ್ತುವ, ಬಿತ್ತುವ ಮತ್ತು ಬೆಳೆಸುವ ಕೆಲಸ ಮಾಡಿದರು. ಜನಪದ ಸಾಹಿತ್ಯವನ್ನು ಜನಸಾಮಾನ್ಯರ ಆವರಣದಲ್ಲಿ ಹಸಿರಾಗಿಸಿದರು’ ಎಂದರು.
ಸಾಹಿತಿ ಬಿ.ಎಸ್.ಗವಿಮಠ ಮಾತನಾಡಿ, ‘ಸಾಂಸ್ಕೃತಿಕ ವಾರಸುದಾರರಾಗಿ ಕೆಎಲ್‌ಇ ಸಂಸ್ಥೆಗೆ ಬಸವರಾಜ ಜಗಜಂಪಿ ಅವರ ಕೊಡುಗೆ ಅನನ್ಯ’ ಎಂದು ಹೇಳಿದರು.
ಬಸವರಾಜ ಜಗಜಂಪಿ ಮಾತನಾಡಿ, ‘ಕೆಎಲ್‌ಇ ಸಂಸ್ಥೆ, ಮಠ-ಮಾನ್ಯಗಳು ಮತ್ತು ವಿವಿಧ ಸಂಘ-ಸಂಸ್ಥೆಯವರು ನನ್ನನ್ನು ಪ್ರೋತ್ಸಾಹಿಸಿ ಮಾರ್ಗದರ್ಶನ ನೀಡಿದರು. ಗಡಿಯಲ್ಲಿ ಕನ್ನಡ ಸೇವೆಗೆ ಹುರಿದುಂಬಿಸಿದರು.
ಅವರೆಲ್ಲರಿಗೆ ಕೃತಜ್ಞನಾಗಿದ್ದೇನೆ’ ಎಂದರು.‘ಜನಪದ ಸಾಹಿತ್ಯ ಕಟ್ಟಿ ಬೆಳೆಸಿದವರು ಅನಕ್ಷರಸ್ಥರು, ಹೆಸರಿಲ್ಲದವರು ಮತ್ತು ಹೆಸರು ಒಲ್ಲದವರು. ಆದರೆ, ನಾನು ಅವರ ಹಾಡುಗಳನ್ನೇ ಹಾಡಿ ಪ್ರಸಿದ್ಧಿ ಗಳಿಸಿದೆ. ನನ್ನ ಬೆಳವಣಿಗೆಗೆ ಜನಪದರೇ ಕಾರಣ’ ಎಂದು ಹೇಳಿದರು.
ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ. ಎಚ್.ಬಿ.ರಾಜಶೇಖರ ಅಧ್ಯಕ್ಷತೆ ವಹಿಸಿದ್ದರು. ರಾಮಕೃಷ್ಣ ಮರಾಠ ಅಭಿನಂದನಾ ನುಡಿಗಳನ್ನಾಡಿದರು. ಸುಷ್ಮಾ ಜಗಜಂಪಿ ಇತರರಿದ್ದರು. ಲಿಂಗರಾಜ ಜಗಜಂಪಿ ಸ್ವಾಗತಿಸಿದರು. ಅಮೃತಾ ಕಲ್ಲೂರ ವಂದಿಸಿದರು. ಅವಿನಾಶ ಕವಿ ನಿರೂಪಿಸಿದರು.