
ರಾಯಬಾಗ: ಬಾಗಿ ನಾಡಿನಲ್ಲಿ ಸಾಹಿತ್ಯದ ಸಂಸ್ಕೃತಿ ನಿರಂತರವಾಗಿ ಬೆಳೆಯಲು ಇಲ್ಲಿನ ಶಿಕ್ಷಕರೇ ಮೂಲ ಕಾರಣರಾಗಿದ್ದಾರೆ ಎಂದು ತಹಶೀಲ್ದಾರ ಸುರೇಶ ಮುಂಜೆ ಹೇಳಿದರು.
ಭಾನುವಾರ ಪಟ್ಟಣದ ಶಾರದಾ ಟ್ಯುಟೋರಿಯಲ್ಸ್ ಸಭಾಂಗಣದಲ್ಲಿ ಸಂಘರ್ಷ ಸಾಹಿತ್ಯಕೂಟದ 17ನೇ ಪ್ರಕಟಣೆಯಾದ ಸಾಹಿತಿ ಶಿವಾನಂದ ಬೆಳಕೂಡ ಅವರ ಕನಸು ಕಾಯುವ ಹಾದಿ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಯುವ ಸಾಹಿತಿಗಳ ಬೆಳವಣಿಗೆಗೆ ಇಲ್ಲಿ ಪೂರಕ ವಾತಾವರಣ ಸೃಷ್ಟಿಯಾಗಿದೆ. ಹಿರಿಯ ಸಾಹಿತಿ ಶಿವಾನಂದ ಬೆಳಕೂಡ ಅವರು ಯುವ ಕವಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಅವರ ಈ ಕವನ ಸಂಕಲನ ಎಲ್ಲ ಕನ್ನಡ ಹೃದಯಗಳಿಗೆ ಮುಟ್ಟಲಿ ಎಂದು ಹಾರೈಸಿದರು.
ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಅಧ್ಯಕ್ಷ ಡಾ.ಯಲ್ಲಪ್ಪ ಹಿಮ್ಮಡಿ ಮಾತನಾಡಿ, ಶಿವಾನಂದ ಬೆಳಕೂಡ ಅವರು ಸಂಘರ್ಷ ಸಾಹಿತ್ಯಕೂಟದ ಮೂಲಕ ಅನೇಕ ಯುವ ಕವಿಗಳ ಕೃತಿಗಳನ್ನು ಪ್ರಕಟಿಸುವುದರ ಮೂಲಕ ಪ್ರೋತ್ಸಾಹ ನೀಡಿದ್ದರಿಂದ, ರಾಯಬಾಗದಲ್ಲಿ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ನಡೆಯಲು ಸಾಧ್ಯವಾಗಿದೆ. ಯುವ ಸಾಹಿತಿಗಳಿಗೆ ಭಾಷೆಯನ್ನು ಬೆಳೆಸುವ ಮತ್ತು ಬಳಸುವುದರ ಬಗ್ಗೆ ಆಳವಾದ ಅರಿವು ಇರಬೇಕು. ಶಿವಾನಂದ ಬೆಳಕೂಡ ಅವರು ತಮ್ಮ ಕಾವ್ಯಗಳ ಮೂಲಕ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ ಎಂದರು.
ಸಾಹಿತಿ ಡಾ.ಕೆ.ಎನ್.ದೊಡ್ಡಮನಿ ಮಾತನಾಡಿ, ಕಲಿಸಿದ ಗುರುವಿನ ಕೃತಿ ಪರಿಚಯ ಮಾಡುವುದು ನನ್ನ ಸೌಭಾಗ್ಯ. ಅವರ ವ್ಯಕ್ತಿತ್ವ ಈ ಕವನ ಸಂಕಲನದಲ್ಲಿ ಪ್ರತಿಬಿಂಬದಂತೆ ಮೂಡಿದೆ. ಇದರಲ್ಲಿ ಅವರ ಜೀವನ ಪ್ರೀತಿಯನ್ನು ಕಾಣುತ್ತೇವೆ ಎಂದರು.
ಸಾಹಿತಿ ಶಿವಾನಂದ ಬೆಳಕೂಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಡಾ.ಪಿ.ಜಿ.ಕೆಂಪಣ್ಣವರ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ.ಪಂ.ಅಧ್ಯಕ್ಷ ಅಶೋಕ ಅಂಗಡಿ, ಕ.ಸಾ.ಪ.ಅಧ್ಯಕ್ಷ ರವೀಂದ್ರ ಪಾಟೀಲ, ಸುರೇಖಾ ಬೆಳಕೂಡ, ಪುಷ್ಪಾ ಜ್ಯೋತಿಹೊಸುರ, ಕಲಾದಂಪತಿಗಳಾದ ಬಾಬುರಾವ ನಡೋಣಿ, ಆಶಾರಾಣಿ ನಡೋಣಿ, ಎಮ್.ಬಿ.ಹೂಗಾರ, ಡಾ.ಬಿ.ಎಮ್.ಪಾಟೀಲ, ಎಚ್.ಕೆ.ಗುರವ, ವಿ.ಡಿ.ಸಾಲಿ, ಡಾ.ಗಾಯತ್ರಿ ಬಾನೆ, ಸುಖದೇವ ಕಾಂಬಳೆ, ಸುರೇಶ ಚೌಗಲಾ, ಡಿ.ಎಚ್.ಯಲ್ಲಟ್ಟಿ, ಸಾಗರ ಝೆಂಡೆನ್ನವರ, ಶ್ರೀಶೈಲ ಹೊಸೂರ, ಶಂಕರ ಕೊಡತೆ ಸೇರಿ ಅನೇಕರು ಇದ್ದರು.
ಮನೋಹರ ಹೊಸಮನಿ ಸ್ವಾಗತಿಸಿದರು, ಜ್ಯೋತೇಪ್ಪಾ ರುಪ್ಯಾಳೆ ನಿರೂಪಿಸಿದರು, ಟಿ.ಎಸ್.ವಂಟಗೂಡಿ ವಂದಿಸಿದರು.