ಸಂಭಲ್ : ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಮೊಘಲ್‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಒತ್ತುವರಿ ತೆರವುಗೊಳಿಸಲಾಗುತ್ತಿತ್ತು. ಈ ವೇಳೆ ಪ್ರಾಚೀನ ಶಿವನ ದೇವಾಲಯ ಮತ್ತು ಬಾವಿಯೊಂದು ಪತ್ತೆಯಾಗಿರುವುದನ್ನು ಸಂಭಲ್ ಜಿಲ್ಲಾಡಳಿತ ದೃಢಪಡಿಸಿದೆ. 42 ವರ್ಷಗಳ ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ ದೇವಾಲಯವನ್ನು ಸ್ವಚ್ಛಗೊಳಿಸಲಾಗುತ್ತಿದೆ, ದೇವಾಲಯದ ನಿರ್ವಹಣೆ ಮಾಡುವವರಿಗೆ ಪತ್ತೆಯಾದ ಬಾವಿಯ ಜವಾಬ್ದಾರಿಯನ್ನು ಹಸ್ತಾಂತರಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯಾಡಳಿತವು ಅತಿಕ್ರಮಣ ವಿರೋಧಿ ಮತ್ತು ವಿದ್ಯುತ್‌ ಕಳ್ಳತನ ವಿರುದ್ದ ಕಾರ್ಯಾಚರಣೆ ನಡೆಸುತ್ತಿರು ವಾಗ ದೇವಾಲಯ ಪತ್ತೆಯಾಗಿದೆ.

ಸಂಭಾಲ್‌ನ ಖಗ್ಗು ಸರೈ ಪ್ರದೇಶದಲ್ಲಿ ಈ ಶಿವ ದೇವಾಲಯ ಪತ್ತೆಯಾಗಿದ್ದು, ಮತ್ತೆ ದೇಗುಲದ ಬಾಗಿಲನ್ನು ತೆರೆಯಲಾಗಿದೆ. ಈ ದೇವಾಲಯ ಸದ್ಯ ಶಿಥಿಲಾವಸ್ಥೆಯಲ್ಲಿದೆ. 1978ರಲ್ಲಿ ಕೋಮುಗಲಭೆ ಉಂಟಾಗಿ ಹಿಂದೂಗಳು ಗುಳೇ ಹೋಗಿದ್ದರು. ಅಂದಿನಿಂದ ದೇವಾಲಯ ಮುಚ್ಚಿದ ಸ್ಥಿತಿಯಲ್ಲಿಯೇ ಇತ್ತು ಎನ್ನುವ ಮಾಹಿತಿ ದೊರಕಿದೆ.