ಬೆಳಗಾವಿ : ಸಂವಿಧಾನ ಓದು ಅಭಿಯಾನ- ಕರ್ನಾಟಕ ಮತ್ತು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಮಾಜ ವಿಜ್ಞಾನ ವಿಭಾಗಗಳ ಸಹಯೋಗದಲ್ಲಿ ಎಪ್ರಿಲ್ 13 ಮತ್ತು 14 ರಂದು ಮಹಾವಿದ್ಯಾಲಯದ ಸಭಾಂಗಣದಲ್ಲಿ ರಾಜ್ಯಮಟ್ಟದ ಸಂವಿಧಾನ ಓದು ಮತ್ತು ಅಧ್ಯಯನ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎಚ್. ಎನ್. ನಾಗಮೋಹನ್ ದಾಸ್ ಉದ್ಘಾಟಿಸಲಿದ್ದಾರೆ. “ಸಂವಿಧಾನ ಓದು” ಇಂಗ್ಲೀಷ್ ಭಾಷೆಯ ಕೃತಿಯನ್ನು ಕರ್ನಾಟಕ ಸರ್ಕಾರದ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಲೋಕಾರ್ಪಣೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ವಹಿಸಲಿದ್ದಾರೆ. ಮೊದಲನೇ ದಿನ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿಷಯದ ಕುರಿತು ಡಾ. ಗೋವಿಂದಪ್ಪ ಪಾವಗಡ ಉಪನ್ಯಾಸ ನೀಡಲಿದ್ದಾರೆ. ಸಂವಿಧಾನ ಮತ್ತು ಮಹಿಳೆ ಎಂಬ ವಿಷಯದ ಕುರಿತು ಶಾಂತಿ ನಾಗಲಾಪುರ ಮಾತನಾಡಲಿದ್ದಾರೆ. ಎರಡನೇ ದಿನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಯ ಜೊತೆಗೆ ಎರಡು ಉಪನ್ಯಾಸ ನಡೆಯಲಿವೆ. ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಕುರಿತು ಬಿ. ರಾಜಶೇಖರ ಮೂರ್ತಿ ಹಾಗೂ ಸಂವಿಧಾನ ಮತ್ತು ಜಾತ್ಯತೀತತೆ ವಿಷಯದ ಕುರಿತು ಆರ್. ರಾಮಕೃಷ್ಣ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 2ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎಚ್.ಎನ್. ನಾಗಮೋಹನ ದಾಸ್ ವಹಿಸಲಿದ್ದಾರೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಪ್ರೊ. ವಿಜಯ್ ನಾಗಣ್ಣವರ ಆಗಮಿಸಲಿದ್ದಾರೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಎಂ. ಜಿ. ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.