ಸಂಕೇಶ್ವರ:
ಅಂಕಲಿ ಗ್ರಾಮದಲ್ಲಿ ಕರ್ನಾಟಕ ಬಾವುಟ ತೆರವುಗೊಳಿಸಿ ಕನ್ನಡಿಗ ಯುವಕರ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕನ್ನಡಪರ ಸಂಘಟನೆಗಳು ಸಭೆ ನಡೆಸಿದವು. ಘಟನೆ ನಡೆದು 24 ಗಂಟೆಗಳಾದರೂ ಸಂಕೇಶ್ವರ ಪೊಲೀಸರು ಐವರಲ್ಲಿ ಕೇವಲ ಓರ್ವನನ್ನು ಬಂಧಿಸಿದ್ದು ಉಳಿದ ನಾಲ್ವರನ್ನು ತಕ್ಷಣವೇ ಬಂಧಿಸದಿದ್ದರೇ ಶನಿವಾರ ಸಂಕೇಶ್ವರ ಬಂದ್ ಮಾಡಿ ಪ್ರತಿಭಟನೆ ನಡೆಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕನ್ನಡಪರ ಹೋರಾಟಗಾರ ಮಹೇಶ ಹಟ್ಟಿಹೊಳಿ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಹಾಗೂ ಗಡಿ ಭಾಗದಲ್ಲಿ ಕನ್ನಡಿಗರ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ದ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಹುಕ್ಕೇರಿ ತಾಲೂಕು ಕನ್ನಡಪರ ಹೋರಾಟಗಾರರು ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಲಿದ್ದೇವೆ ಎಂದು ತಿಳಿಸಿದ್ದಾರೆ.