ಬೆಳಗಾವಿ : ಬೆಳಗಾವಿ, ಚಿಕ್ಕೋಡಿ ಲೋಕಸಭಾ ಮತಕ್ಷೇತ್ರ ಸೇರಿದಂತೆ ರಾಜ್ಯದ 14 ರಿಂದ 17 ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಪತ್ರಕರ್ತರ ಜತೆ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಈ ಸಲ ಅತಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ. ಸಚಿವರ ಮಕ್ಕಳಿಗೆ ಟಿಕೆಟ್ ನೀಡಿರುವುದರಿಂದ ಪಕ್ಷಕ್ಕೆ ಅನುಕೂಲಕರ ಆಗಿದೆ. ಹಿಂದಿನ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಸಲ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂದು ಹೇಳಿದರು.

ಬಿಜೆಪಿಯಲ್ಲಿ ಸಹಾ ಸಚಿವರ ಮಕ್ಕಳಿಗೆ ಟಿಕೆಟ್ ನೀಡಿರುವ ಉದಾಹರಣೆ ಇದೆ. ಈ ವ್ಯವಸ್ಥೆ ಎಲ್ಲಾ ಪಕ್ಷಗಳಲ್ಲೂ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಸಚಿವರ ಮಕ್ಕಳಿಗೆ ಟಿಕೆಟ್ ನೀಡಿರುವುದು ಹೈಕಮಾಂಡಿಗೆ ಬಿಟ್ಟ ವಿಚಾರ. ಈ ಬಗ್ಗೆ ಬಿಜೆಪಿಯವರಿಗೆ ನೈತಿಕ ಹಕ್ಕಿಲ್ಲ ಎಂದು ಅವರು ತಮ್ಮ ಪುತ್ರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದನ್ನು ಸಮರ್ಥಿಸಿಕೊಂಡರು.