ಬೆಳಗಾವಿ : ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಅವರು ರಾಜ್ಯದ ಮುಖ್ಯಮಂತ್ರಿ ಆದರೆ ಸಂತೋಷ ಪಡುವುದಾಗಿ ಖಾನಾಪುರ ಬಿಜೆಪಿ ಶಾಸಕ ವಿಠ್ಠಲ ಹಲಗೇಕರ ಹೇಳಿದ್ದಾರೆ.
ಬೆಳಗಾವಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸತೀಶ ಜಾರಕಿಹೊಳಿ ಬೆಳಗಾವಿ ಜಿಲ್ಲೆಯವರು. ಅದರಲ್ಲೂ ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾದರೆ ಅವರು ಈ ಭಾಗದ ಸಮಸ್ಯೆಗಳಿಗೆ ಹೆಚ್ಚಾಗಿ ಸ್ಪಂದಿಸಲಿದ್ದಾರೆ. ಈ ನಿಟ್ಟಿನಲ್ಲಿ
ಸತೀಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯವರೇ ಆಗಿದ್ದು ಅವರಿಗೆ ಸ್ಥಳೀಯ ಸಮಸ್ಯೆಗಳ ಅರಿವಿದೆ. ಹಿಂದುಳಿದಿರುವ ಖಾನಾಪುರ ತಾಲೂಕಿನ ಸಮಸ್ಯೆಗಳಿಗೆ ಅವರು ಸ್ಪಂದಿಸಲಿದ್ದಾರೆ. ಅವರು ಹಾಗೂ ನನ್ನ ಜೊತೆ ಉತ್ತಮ ಸಂಬಂಧ ಇದ್ದು ಒಂದು ವೇಳೆ ಅವರು ಮುಖ್ಯಮಂತ್ರಿ ಆದರೆ ಸಂತೋಷ ಎಂದು ಹೇಳಿದರು. ಮೊದಲಿನಿಂದಲೂ ಸತೀಶ ಜಾರಕಿಹೊಳಿ ಅವರ ಜೊತೆ ನನಗೆ ಉತ್ತಮ ಒಡನಾಟವಿದೆ. ಒಂದು ವೇಳೆ ಅವರು ಕಾಂಗ್ರೆಸ್ ಪಕ್ಷದ 136 ಶಾಸಕರ ಬೆಂಬಲ ಪಡೆದು ಮುಖ್ಯಮಂತ್ರಿ ಹುದ್ದೆಗೆ ಏರಿದರೆ ಬೆಳಗಾವಿ ಜಿಲ್ಲೆಯವರೊಬ್ಬರು ಮುಖ್ಯಮಂತ್ರಿ ಆಗಲಿದ್ದಾರೆ. ಅದು ಈ ಭಾಗದ ಜನತೆಗೆ ಸಂತಸ ಕ್ಷಣವಾಗಲಿದೆ ಎಂದು ಅವರು ವಿಶ್ಲೇಷಿಸಿದರು.ಎರಡು ದಿನಗಳ ಹಿಂದಷ್ಟೇ ರಾಯಬಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅವರು ಸಹ ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಆದರೆ ಸಂತೋಷ ಎಂದು ಪ್ರತಿಕ್ರಿಯೆ ನೀಡಿದ್ದರು.