ಮ್ಯೂಸಿಯಂ ಅಥವಾ ವಸ್ತು ಸಂಗ್ರಹಾಲಯಗಳೆಂದರೆ ಕೇವಲ ಒಂದಿಷ್ಟು ಹಳೆಯ ವಸ್ತುಗಳನ್ನು ಒಂದೆಡೆ ಕೂಡಿಸಿಡುವುದಲ್ಲ. ಅವು ನಮ್ಮ ರಾಷ್ಟ್ರೀಯ ಇತಿಹಾಸ ಪರಂಪರೆಗಳ ಒಂದು ಭಾಗವಾಗಿದ್ದು ಇಂದಿನ ಮತ್ತು ಮುಂದಿನ ಪೀಳಿಗೆಯವರು ತಮ್ಮ ತಮ್ಮ ರಾಷ್ಟ್ರದ ಕುರಿತು ಅರಿವು ಮೂಡಿಸಿಕೊಳ್ಳಲು ಪ್ರೇರಕವಾಗಿರಬೇಕಾಗುತ್ತದೆ. ಸಾಮಾನ್ಯವಾಗಿ ಮ್ಯೂಸಿಯಂ ಗಳು ಎಲ್ಲ ರಾಷ್ಟ್ರಗಳಲ್ಲೂ ಇದ್ದೆ ಇರುತ್ತವೆ. ಭಾರತದಲ್ಲೂ ಇವೆ. ಆದರೆ ಅವನ್ನು ಎಷ್ಟು ಕಾಳಜಿಪೂರ್ವಕ ಮತ್ತು ವ್ಯವಸ್ಥಿತವಾಗಿ ಇಟ್ಟುಕೊಳ್ಳಲಾಗುತ್ತದೆನ್ನುವುದು ಬಹಳ ಮುಖ್ಯ. ಜಗತ್ತಿನಲ್ಲಿ ಒಟ್ಟು ಸುಮಾರು ೧ ಲಕ್ಷ ೪೦೦೦ ದಷ್ಟು ಮ್ಯೂಸಿಯಂ ಗಳಿವೆಯೆನ್ನಲಾಗುತ್ತದೆ.

ಸೌದಿ ಅರೇಬಿಯಾ ಸರಕಾರ ಮ್ಯೂಸಿಯಮ್ಮುಗಳಿಗೆ ವಿಶೇಷ ಮಹತ್ವ ನೀಡುತ್ತ ಬಂದಿದೆ ಮತ್ತು ಪ್ರೊತ್ಸಾಹವನ್ನೂ ನೀಡುತ್ತಿದೆ. ಸೌದಿಯ ಎಲ್ಲ ಪ್ರಮುಖ ನಗರಗಳಲ್ಲಲ್ಲದೆ ಅನೇಕ ಹಳ್ಳಿಗಳಲ್ಲಿ ಸಹ ಪಾರಂಪರಿಕ ಮ್ಯೂಸಿಯಂ ಗಳಿವೆ. ಹಳೆಯ ಹಲವು ಅರಮನೆ, ಕೋಟೆಗಳನ್ನು, ಮ್ಯೂಸಿಯಂ ಗಳನ್ನಾಗಿ ಪರಿವರ್ತಿಸಲಾಗಿದೆ ಅಲ್ಲದೆ ಅನೇಕ ವಿಶ್ವವಿದ್ಯಾಲಯಗಳಲ್ಲಿ ಕಾಲೇಜುಗಳಲ್ಲಿ ಸಹ ಮ್ಯೂಸಿಯಂ ಸ್ಥಾಪಿಸಲಾಗಿದೆ.
ಮುಖ್ಯವಾಗಿ ಗಮನ ಸೆಳೆಯುವ ಅಂಶವೆಂದರೆ ಇಲ್ಲಿ ಈ ಮ್ಯೂಸಿಯಂ ಗಳನ್ನು ಇರಿಸಿಕೊಂಡಿರುವ ವ್ಯವಸ್ಥಿತ ರೀತಿ. ಅವುಗಳಿಗೆ ನೀಡುವ ಪ್ರಚಾರಗಳಿಂದಾಗಿ ಅವೆಲ್ಲ ಪ್ರಸಿದ್ದ ಪ್ರವಾಸಿ ತಾಣಗಳಾಗಿ ದಿನನಿತ್ಯ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತಿವೆ ಮತ್ತು ಅವು ದೊಡ್ಡ ಆದಾಯ ಮೂಲವೂ ಆಗಿವೆ. ಸೌದಿಯ ಕೆಲ ರಾಷ್ಟ್ರೀಯ ವಸ್ತುಸಂಗ್ರಹಾಲಯಗಳು ಸಾಕಷ್ಟು ವಿಶಾಲವಾಗಿರುವಂತೆ ಶೈಕ್ಷಣಿಕ ದೃಷ್ಟಿಯಿಂದಲೂ ಪ್ರಾಮುಖ್ಯತೆ ಪಡೆದಿವೆ. ನಾವು ನೋಡಿದ ಇತ್ರಾದಂತಹ ಮ್ಯೂಸಿಯಂ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾದದ್ದಾಗಿದೆ. ಹಲವು ವೈಜ್ಞಾನಿಕ ಮಾಹಿತಿಗಳನ್ನೊದಗಿಸುತ್ತದೆ. ಅಲ್ ಮುರಬ್ಬಾ ಅರಮನೆ ಮ್ಯೂಸಿಯಂ ೮ ಗ್ಯಾಲರಿಗಳಿಂದೊಡಗೂಡಿದ್ದು ೩೭೦೦ ಕ್ಕೂ ಹೆಚ್ಚು ಪ್ರಾಚೀನ ಕಲಾಕೃತಿಗಳನ್ನೊಳಗೊಂಡಿದೆ.
ಸೌದಿಯ ಈಗಿನ ಅರಸು ಇಂತಹ ವಿಷಯಗಳಲ್ಲಿ ತೀವ್ರ ಆಸಕ್ತಿ ಹೊಂದಿದ್ದು ಆತ ಅಧಿಕಾರಕ್ಕೆ ಬಂದ ಮೇಲೆ ಅವನ ಸರಕಾರ ಕಲೆ ಸಾಹಿತ್ಯ ಸಂಸ್ಕೃತಿ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡುತ್ತಿದೆ. ಒಂದು ವೇಳೆ ಖಾಸಗಿಯವರು ಮುಂದೆ ಬಂದರೆ ಅವರಿಗೂ ಉತ್ತೇಜನ ನೀಡಲಾಗುತ್ತದೆ. ಆದ್ದರಿಂದ ಇಲ್ಲಿ ಸಾಕಷ್ಟು ಖಾಸಗಿ ಮ್ಯೂಸಿಯಂ ಗಳೂ ಇವೆ. ಸರಕಾರದ ಪ್ರಾಚ್ಯವಸ್ತು ಇಲಾಖೆ ಶಿಕ್ಷಣ ಇಲಾಖೆಯ ಸಹಭಾಗಿತ್ವವನ್ನೂ ಹೊಂದಿರುತ್ತದೆ. ೨೦೧೯-೨೦ ರ ವೇಳೆಗೆ ಇಲ್ಲಿ ೨೧೦ ಕ್ಕೂ ಹೆಚ್ಚು ಮ್ಯೂಸಿಯಂಗಳಿದ್ದವು. ೧೯೭೨ ರಲಿ ಪ್ರಾಚೀನ ವಸ್ತು ರಕ್ಷಣೆಯ ಕಾನೂನು ಜಾರಿಗೆ ಬಂತು. ೧೯೭೮ ರಲ್ಲಿ ನ್ಯಾಶನಲ್ ಮ್ಯೂಸಿಯಂ ಆಫ್ ಆಂಟಿಕ್ವಿಟೀಸ್ & ಫೋಕಲೋರ್ ಸ್ಥಾಪನೆ ಆಯಿತು. ೧೯೬೬ ರಿಂದ ವಿವಿಧ ವಿಶ್ವವಿದ್ಯಾಲಯಗಳಲ್ಲೂ ಮ್ಯೂಸಿಯಂ ಗಳು ತಲೆಯೆತ್ತಿದವು. ವಿಶೇಷವೆಂದರೆ ಮ್ಯೂಸಿಯಂ ಗಳು ವೈವಿಧ್ಯಮಯ ಕ್ಷೇತ್ರಗಳಿಗೆ ಸಂಬಂಧ ಪಟ್ಟಿದ್ದಾಗಿವೆ. ಪ್ರವಾಸೋದ್ಯಮ, ಪೆಟ್ರೋಲಿಯಂ, ಔದ್ಯಮಿಕ, ವಿಜ್ಞಾನ, ಖಗೋಳ ಶಾಸ್ತ್ರ ಮತ್ತಿತರ ಹಲವು ವಿಷಯಗಳನ್ನೊಳಗೊಂಡ ಅಪೂರ್ವ ಮ್ಯೂಸಿಯಂ ಗಳಿವೆ. ಶಡ್ಡಾ ಅರಮನೆ, ಮೊರಬ್ಬಾ ಅರಮನೆ, ತಬೂಕ್ ಕೋಟೆ, ಮಸ್ಮಾಕ್ ಕೋಟೆ, ಖಜಾಮ್ ಅರಮಬೆ ಜೆಡ್ಡಾ, ದಮ್ಮ್ಅಮ್ ಹೆರಿಟೇಜ್ ವಿಲ್ಲೇಜ್ , ಖೋಬರ್ ನ ಇತ್ರಾ, ರಿಜಾಲ ಹೆರಿಟೇಜ್ ಮ್ಯೂಸಿಯಂ, ಹೆಜಾಜ್ ರೇಲ್ವೆ ಮ್ಯೂಸಿಯಂ, ಅಲ್ ಜಹೇರ್ ಅರಮನೆ, ಅಲ್ ಅಹ್ಸಾ ಅಂತಾರಾಷ್ಟ್ರೀಯ ಮ್ಯೂಸಿಯಂ, ಹ್ಯೂಮನ್ ಹೆರಿಟೇಜ್ ಮ್ಯೂಜಿಯಂ, ಷರೀಫ್ ಮ್ಯೂಸಿಯಂ, ರಿಯಾದ್ ಐತಿಹಾಸಿಕ ಕೇಂದ್ರ, ಸೌದಿ ಅರೇಬಿಯಾ ರಾಷ್ಟ್ರೀಯ ಮ್ಯೂಸಿಯಂ, ಶಖ್ರಾ ಸುಬೈ ಹೆರಿಟೇಜ್ ಹೌಸ್ ಹೀಗೆ ಅಸಂಖ್ಯಾತ ಮ್ಯೂಸಿಯಂ ಗಳಿಂದ ಕೂಡಿದ ಸೌದಿ ಅರೇಬಿಯಾ ಸರಕಾರ ತನ್ನ ಯುವ ಪೀಳಿಗೆಗೆ ರಾಷ್ಟ್ರದ ಸಂಸ್ಕೃತಿ ಸಂಪ್ರದಾಯ ಪರಂಪರೆಗಳ ಕುರಿತು ಅಧ್ಯಯನಕ್ಕೆ ಅವಕಾಶ ಮಾಡಿಕೊಡುವುದರೊಡನೆ ಅವರಲ್ಲಿ ತಮ್ಮ ರಾಷ್ಟ್ರದ ಅಭಿಮಾನ ಮತ್ತು ಜ್ಞಾನ ಉಂಟುಮಾಡಲು ಪ್ರಯತ್ನಿಸುತ್ತಿದೆ. ವಿಷನ್ -೨೦೩೦ ರಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಿದೆ. ನನಗನಿಸುವಂತೆ ಭಾರತ ಸರಕಾರ ಸಹ ಮ್ಯೂಸಿಯಂ ಗಳ ವಿಷಯದಲ್ಲಿ ಸೌದಿ ಅರೇಬಿಯಾದ ಕೆಲವು ಮಾದರಿಗಳನ್ನು ಅನುಸರಿಸಬೇಕಾದ ಅಗತ್ಯ ಇದೆ. ಮುಖ್ಯವಾಗಿ ಮ್ಯೂಸಿಯಂ ಗಳನ್ನು ಯಾವರೀತಿ ವ್ಯವಸ್ಥಿತವಾಗಿ, ಸುಸಜ್ಜಿತವಾಗಿ ಮತ್ತು ಮಾಹಿತಿಯುಕ್ತವಾಗಿ ಇರಿಸಿ ಕೊಳ್ಳಬೇಕು , ಅಷ್ಟೇ ಅಲ್ಲ ಅವನ್ನು ಯಾವರೀತಿ ಎಜ್ಯುಕೇಟಿವ್ ಆಗಿಸಬೇಕು ಎನ್ನುವುದನ್ನು ಅನುಸರಿಸಬೇಕಾಗಿದೆ.

✒️ಎಲ್.ಎಸ್‌. ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ.