ನಮಗೆ ಬೇರೆ ದೇಶಗಳ ಪೂರ್ತಿ ಪರಿಚಯವಿರುವುದಿಲ್ಲ ಮತ್ತು ಕೆಲವೊಂದು ತಪ್ಪು ಕಲ್ಪನೆಗಳೂ ಇರುತ್ತವೆ. ಅದು ಸಹಜ ಕೂಡ. ಸಾಮಾನ್ಯವಾಗಿ ಇಸ್ಲಾಮಿಕ್ ದೇಶಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ಇರುವುದಿಲ್ಲ ಎನ್ನುವ ಭಾವನೆ ಇದ್ದೇ ಇದೆ ಮತ್ತು ಅದು ಪೂರ್ಣ ಸುಳ್ಳೇನಲ್ಲ. ಆದರೆ ಸೌದಿ ಅರೇಬಿಯಾದಲ್ಲಿ ಜಗತ್ತಿನ ಅತಿದೊಡ್ಡ ಮಹಿಳಾ ವಿಶ್ವವಿದ್ಯಾಲಯವೊಂದಿದ್ದು ಅದು ಐವತ್ತು ವರ್ಷಗಳ ಹಿಂದೆಯೇ 1970 ರಲ್ಲಿ ಸ್ಥಾಪನೆಯಾಗಿರುವುದು ಗಮನಿಸಬೇಕಾದ ವಿಚಾರ.

ಸೌದಿ ಅರೇಬಿಯಾ ಅರ್ಧ ಶತಮಾನದ ಹಿಂದೆಯೇ ಆಧುನೀಕರಣದ ಬದಲಾವಣೆಗಳಿಗೆ ತನ್ನನ್ನು ತೆರೆದುಕೊಳ್ಳತೊಡಗಿದ್ದು , ಇಲ್ಲಿನ ದೊರೆಗಳ ಈ ಪಾಶ್ಚಾತ್ಯೀಕರಣದ ವಿರುದ್ಧ ಮೂಲಭೂತವಾದಿ ಮುಸ್ಲಿಂ ಆತಂಕವಾದಿಗಳು ಅಸಹನೆ ಹೊಂದಿದ್ದರು. ಒಸಾಮಾ ಬಿನ್ ಲಾಡೆನ್ ನ ಅಲ್ ಖೈದಾ ಈ ದೇಶದ ಮೇಲೆ 2೦೦3 ರಲ್ಲಿ ದಾಳಿ ಮಾಡಿದ್ದು ಅದಕ್ಕೆ ಉದಾಹರಣೆ.

ಪ್ರಿನ್ಸೆಸ್ ನೌರಾ ಬಿಂಟ್ ಅಬ್ದುಲ್ ರಹಮಾನ್ ವಿಶ್ವವಿದ್ಯಾಲಯದಡಿಯಲ್ಲಿ ನೂರಾರು ಮಹಿಳಾ ಕಾಲೇಜುಗಳಿದ್ದು 33 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇಲ್ಲಿ ಕಲಿಯುತ್ತಾರೆ. 3 ಸಾವಿರಕ್ಕೂ ಹೆಚ್ಚು ಶೈಕ್ಷಣಿಕ ಸಿಬ್ಬಂದಿ, 2 ಸಾವಿರಕ್ಕೂ ಹೆಚ್ಚು ಆಡಳಿತ ಸಿಬ್ಬಂದಿಯನ್ನು ಹೊಂದಿರುವ ಈ ಮಹಿಳಾ ವಿವಿ. ಕಲೆ, ವಿಜ್ಞಾನ, ಆರೋಗ್ಯ, ಫಾರ್ಮಸಿ, ನರ್ಸಿಂಗ್, ಅರ್ಥಶಾಸ್ತ್ರ, ಗೃಹವಿಜ್ಞಾನ, ಕಂಪ್ಯೂಟರ್ , ಮಾಹಿತಿ ವಿಜ್ಞಾನ, ದೂರಸಂಪರ್ಕ ಮೊದಲಾದ ಇಪ್ಪತ್ತೈದಕ್ಕೂ ಹೆಚ್ಚು ವಿಷಯಗಳ ಶಿಕ್ಷಣ ವಿಭಾಗಗಳನ್ನು ಹೊಂದಿದೆ. ಮಹಿಳಾ ಸಬಲೀಕರಣದ ಉದ್ದೇಶದೊಂದಿಗೆ ಅರಸನ ಸಹೋದರಿಯ ಹೆಸರಿನಲ್ಲಿ ಸ್ಥಾಪಿತವಾದ ಈ ವಿಶ್ವವಿದ್ಯಾಲಯ ಇಲ್ಲಿಯ ಮಹಿಳೆಯರನ್ನು ಸುಶಿಕ್ಷಿತರನ್ನಾಗಿ ಮಾಡುವಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತಿದೆ.

ಈಚಿನ ಒಂದೆರಡು ದಶಕಗಳಲ್ಲಿ ಸೌದಿ ಅರಸರು ಮಹಿಳೆಯರ ಮೇಲಿನ ಹಲವು ಬಿಗಿ ನಿಯಮಗಳನ್ನು ಸಡಿಲಿಸಿದ್ದು ಮಹಿಳಾ ಸ್ವಾತಂತ್ರ್ಯದ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ರಿಯಾಧ ನಲ್ಲಿ ನಾವು ನೋಡಿದಂತೆ ಮಹಿಳೆಯರು ಬಹಳ ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದು , ಮನೋರಂಜನೆ, ವಾಹನ ಚಾಲನೆ ಸಹಿತ ಹಲವು ಬಗೆಯ ಆನಂದವನ್ನು ಅನುಭವಿಸುತ್ತಿದ್ದಾರೆ. ಇದರಿಂದ ವಿವಿಧ ಕ್ಷೇತ್ರಗಳಲ್ಲಿ ಆದಾಯವೂ ಇಮ್ಮಡಿ ಮುಮ್ಮಡಿ ಹೆಚ್ಚಾಗಿರುವುದು ಗಮನಾರ್ಹ. ದೇಶದ ಆರ್ಥಿಕ, ಸಾಮಾಜಿಕ ಬೆಳವಣಿಗೆಯಲ್ಲಿ ಮಹಿಳೆಯರ ಪಾಲು ದೊಡ್ಡದೆನಿಸುತ್ತಿದೆ.

1940 ರಿಂದಲೇ ಇಲ್ಲಿ ಆಧುನೀಕರಣದ ಗಾಳಿ ಬೀಸತೊಡಗಿದೆ. 1953 ರಿಂದ ಅಮೆರಿಕಾದ ಗ್ರಿಡ್ ಮಾದರಿಯನ್ನು ಇಲ್ಲಿ ಜಾರಿಗೊಳಿಸಲಾಗಿದ್ದು 1983 ರಲ್ಲಿ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಯಿತು. ಈಗ 2024 ರಲ್ಲಿ ರಿಯಾಧ್ ಮೆಟ್ರೋ ಸಾರಿಗೆ ಆರಂಭವಾಗುತ್ತಿದ್ದು ಅದು 176 ಕಿ. ಮೀ. ಗಳಷ್ಟು ಸಂಚಾರ ಮಾರ್ಗ ಹೊಂದಿದೆ. ಮೂಲಭೂತವಾದಿ ಉಗ್ರ ಸಂಘಟನೆಗಳಿಗೆ ಈ ಬದಲಾವಣೆಗಳು ಇಷ್ಟವಿಲ್ಲವಾದರೂ ಇಲ್ಲಿನ ಅರಸು ಮನೆತನ ಒಂದೊಂದಾಗಿ ಸುಧಾರಣೆಯ ಬಾಗಿಲು ತೆರೆಯತೊಡಗಿದೆ. ಇಲ್ಲಿಯ ಜನರೂ ಅದನ್ನು ಸ್ವಾಗತಿಸಿದ್ದು ಬದಲಾವಣೆಗಳಿಗೆ ಮೈಯೊಡ್ಡತೊಡಗಿದ್ದಾರೆ.
ಇಷ್ಟೇ ಅಲ್ಲ , 2030 ರ ವೇಳೆಗೆ ದೇಶದ ಚಿತ್ರಣವನ್ನೇ ಬದಲಿಸುವ ಬೃಹತ್ ಸುಧಾರಣಾ ಯೋಜನೆಯೊಂದನ್ನು ಜಾರಿಗೊಳಿಸಲಾಗುತ್ತಿದೆ. ಅದರ ಬಗ್ಗೆ ಮುಂದೆ ಬರೆಯಲಿದ್ದೇನೆ.

ಸೌದಿ ಪ್ರವಾಸಾನುಭವ -8 :
ಸೌದಿ ಅರೇಬಿಯಾದ ರಾಜಧಾನಿ ರಿಯಾಧ್ 42 ಲಕ್ಷದಷ್ಟು ಜನರಿರುವ ಬಹಳ ದೊಡ್ಡ ನಗರ. 1973 ಚದರು ಕಿ. ಮೀ. ವಿಸ್ತಾರ. ರಿಯಾಧ್ ಎನ್ನುವುದಕ್ಕೆ ಉದ್ಯಾನವನ (The Garden) ಎಂಬ ಅರ್ಥವೂ ಇದೆ. ಹಿಂದೆ ಇದು ನೀರು ಮತ್ತು ಹಸಿರು ತುಂಬಿದ ಪ್ರದೇಶವಾಗಿತ್ತಂತೆ. 14 ನೇ ಶತಮಾನದಲ್ಲಿ ಇಲ್ಲಿಗೆ ಭೆಟ್ಟಿ ನೀಡಿದ್ದ ಉತ್ತರ ಆಫ್ರಿಕಾದ ಪ್ರವಾಸಿ ಇಬ್ನ ಬತೂತಾ ಇದನ್ನು ” ಕಾಲುವೆ ಮತ್ತು ಮರಗಳ ನಗರ” ಎಂದು ಬಣ್ಣಿಸಿದ್ದಾನೆ. ಹಜ್ರ ಎಂಬ ಒಂದು ಬುಡಕಟ್ಟು ಜನಾಂಗಕ್ಕೆ ಸೇರಿದ ಪ್ರದೇಶವಾಗಿತ್ತಿದು ಎನ್ನಲಾಗಿದೆ.
‌ಅಬ್ದುಲ್ಲಜೀಜ ಇಬ್ನ ಸೌದ್ ಎಂಬವನಿಂದಾಗಿ ಈ ಪ್ರದೇಶಕ್ಕೆ ಸೌದಿ ಎಂಬ ಹೆಸರು ಬಂದಿದ್ದು.‌ ಮೊದಲಿನ ಒಂದು ರಾಜ್ಯ ನಾಶವಾಗಿ ಎರಡನೆಯ ಸೌದಿ ರಾಜ್ಯ ನಿರ್ಮಾಣವಾಗಿದ್ದು 1825 ರಲ್ಲಿ ರಿಯಾಧ್ ಇದರ ರಾಜಧಾನಿಯಾಯಿತು. ಸೌದಿಗೆ ಮಹತ್ವ ಬರಲು ಕಾರಣವಾದದ್ದು ಮೊದಲನೆಯದಾಗಿ ಇಲ್ಲಿ ಪವಿತ್ರ ಮಕ್ಕಾ ಮದೀನಾಗಳಿದ್ದುದಕ್ಕೆ, ಎರಡನೆಯದಾಗಿ ತೈಲ ಮತ್ತು ನೈಸರ್ಗಿಕ ಅನಿಲ ನಿಕ್ಷೇಪಗಳಿದ್ದುದಕ್ಕೆ.
ರಿಯಾಧ್ ಇಂದು ಅಗಾಧ ಸ್ವರೂಪದಲ್ಲಿ ಬೆಳೆದಿದೆ. ಇದು ಆಡಳಿತ ಕೇಂದ್ರವೂ ಹೌದು, ಆರ್ಥಿಕ ಕೇಂದ್ರವೂ ಹೌದು. ಅರಸೊತ್ತಿಗೆಯಡಿ ಇಲ್ಲಿ ಮುನಸಿಪಲ್ ಮಾದರಿಯ ಆಡಳಿತವಿದೆ. ಒಟ್ಟು 15 ಮುನಸಿಪಲ್ ಜಿಲ್ಲೆಗಳನ್ನಾಗಿ ವಿಂಗಡಿಸಲಾಗಿದ್ದು ರಿಯಾದ್ ಮುನಸಿಪಾಲಿಟಿ ಎಲ್ಲವನ್ನೂ ನಿಯಂತ್ರಿಸುತ್ತದೆ. ಕನ್ಸಲ್ಟೇಟಿವ್ ಅಸೆಂಬ್ಲಿ( ಶೂರಾ ಅಥವಾ ಶುರಾ ಕೌನ್ಸಿಲ್) , ಮಂತ್ರಿ ಪರಿಷತ್ತು, ಸುಪ್ರೀಂ ಜ್ಯುಡಿಶಿಯಲ್ ಕೌನ್ಸಿಲ್, ಗವರ್ನರ್, ಮೇಯರ್ ಎಲ್ಲ ಸೇರಿ ಸಮಗ್ರ ಕಾನೂನು ಮತ್ತು ಆಡಳಿತಾತ್ಮಕ ವ್ಯವಸ್ಥೆಯನ್ನು ರೂಪಿಸುತ್ತಾರೆ. 35 ಪುತ್ರರನ್ನು ಹೊಂದಿರುವ ರಾಜಮನೆತನದ ಸದಸ್ಯರೇ ಹೆಚ್ಚಾಗಿ ಎಲ್ಲ ವಿಭಾಗಗಳ ಪ್ರಮುಖರಾಗಿರುತ್ತಾರೆ. ಅದು ಇಲ್ಲಿಯ ಪರಂಪರೆ, ಪದ್ಧತಿ. ಅನ್ನಸ್ರಿಯಾ ರಾಜಮನೆತನದ ವಸತಿ ಜಿಲ್ಲೆ ಪ್ರತ್ಯೇಕವಾಗಿದೆ.‌ 1936 ರಲ್ಲಿ ಮುರಬ್ ಅರಮನೆ ನಿರ್ಮಾಣವಾಗಿ‌ ಅಲ್ಲಿಗೆ ಸುಮಾರು 8೦೦ ಪ್ರಮುಖ ಕುಟುಂಬಗಳು ಶಿಫ್ಟ್ ಆದವು.‌ 194೦ ರಿಂದೀಚೆ ಇಲ್ಲಿ ಆಧುನೀಕರಣದ ಪ್ರಕ್ರಿಯೆಗಳು ಆರಂಭವಾದವು. ರಿಯಾದ್ ನಲ್ಲಿ ಈಗ 114 ವಿದೇಶೀ ರಾಯಭಾರ ಕಚೇರಿಗಳಿವೆ. ಪಶ್ಚಿಮಕ್ಕೆ ರಾಜತಾಂತ್ರಿಕ ಕ್ವಾರ್ಟರ್ ಗಳಿವೆ. ಸೌದಿ ನ್ಯಾಶನಲ್ ಬ್ಯಾಂಕ್, ಅಲ್ ರಾಜಿ ಬ್ಯಾಂಕ್, ಅಲ್ಮರೈ ಮೊದಲಾದ ಪ್ರಮುಖ ಹಣಕಾಸು ಸಂಸ್ಥೆಗಳು ಆರ್ಥಿಕ ಕ್ಷೇತ್ರಕ್ಕೆ ಬಲ ತಂದುಕೊಟ್ಟಿವೆ.
ದೇಶದ ಹೆಚ್ಚಿನ ಭಾಗ ಮರುಭೂಮಿಯಾಗಿದ್ದರೂ ನೈಋತ್ಯ ಭಾಗ ಪರ್ವತ ಶ್ರೇಣಿಗಳಿಂದ ಕೂಡಿದ್ದು, ಅಲ್ಲಿ ಮಳೆ ಹೆಚ್ಚು. ಹರ್ರಾತುಶ್ಶಾಮ ಎಂಬ ಜ್ವಾಲಾಮುಖಿಯೂ ಇದೆ. ಮರಳು ಬಿರುಗಾಳಿಯ ( Sand storm area) ಪ್ರದೇಶಗಳನ್ನು ಗುರುತಿಸಿ ಅಲ್ಲಿ ಎಚ್ಚರಿಕೆ ಫಲಕಗಳನ್ನಳವಡಿಸಲಾಗಿದೆ. ರಿಯಾಧ್ ಗೆ ಹೋಗುವ ದಾರಿಯಲ್ಲಿ ನಮಗೆ ಅಂತಹ ಕೆಲವು ಫಲಕಗಳು ಕಂಡುಬಂದವು. ನಾವು ಪ್ರಯಾಣ ಮಾಡಿದ 5೦೦ ಕಿ. ಮಿ.ನಲ್ಲಿ 4೦೦ ಕಿ. ಮೀ. ಉದ್ದದಷ್ಟು ರಸ್ತೆ ಅಕ್ಕಪಕ್ಕ ಬರೀ ಉಸುಕಿನ ಹಾಸು ಕಂಡುಬಂತು. ವಸತಿ ಪ್ರದೇಶಗಳು ಅಪರೂಪಕ್ಕೆ ಅಲ್ಲಲ್ಲಿ ಇದ್ದದ್ದು ನೋಡಿದೆವು.

 

ಸೌದಿ ಪ್ರವಾಸಾನುಭವ-9
***********************
ಜುಬೇಲ್ ಎಂಬ ಸುಂದರ ನಗರದಲ್ಲಿ
************************
ನಾನು ಸೌದಿ ಅರೇಬಿಯಾಕ್ಕೆ ಬಂದು ಒಂಬತ್ತು ದಿವಸ ಮುಗಿದಿದೆ. ಇನ್ನು ಸುಮಾರು 6೦ ದಿವಸ ಇಲ್ಲಿರುತ್ತೇನೆ. ಆ ಪ್ರಕಾರ ನನ್ನ ಅನುಭವ ಕಥನ ಒಟ್ಟು 6೦-65 ಕಂತುಗಳಾಗಬಹುದು. ಸೌದಿಯನ್ನು ಈವರೆಗೆ ನೋಡಿರದ ಮತ್ತು ಈ ಬಗ್ಗೆ ತಿಳಿಯಬಯಸುವವರಿಗಾಗಿ ನಾನು ಸಂಕ್ಷಿಪ್ತವಾಗಿ ಕೆಲವು ವಿಚಾರಗಳನ್ನು ಬರೆಯುತ್ತಿದ್ದೇನೆ‌. ಎಲ್ಲಕ್ಕಿಂತ ಹೆಚ್ಚಾಗಿ ನನಗೇ ಸ್ವತಃ ಬೇರೆ ಬೇರೆ ದೇಶಗಳ ಇತಿಹಾಸ ಅರಿಯುವ ಕುತೂಹಲವಿದೆ. ಅದಕ್ಕಾಗಿ ಓದಿ ತಿಳಿದುಕೊಳ್ಳುತ್ತೇನೆ. ಓದಿದ್ದನ್ನು ಬರೆಯುತ್ತೇನೆ.
ಬೆಂಗಳೂರು ಮೂಲಕ ನಾವು ಮಸ್ಕತ್ ದಮ್ಮಾಮವರೆಗೆ ವಿಮಾನದಲ್ಲಿ ಬಂದು ನಂತರ ಕಾರಿನಲ್ಲಿ ಈ ಜುಬೇಲ್ ಅಥವಾ ಅಲ್ ಜುಬೇಲ್ ಎಂಬ ಪುಟ್ಟ ನಗರಿಗೆ ಬಂದೆವು. ಒಂದೂವರೆ ತಾಸಿನ ಹಾದಿ. ನನ್ನ ಅಳಿಯ – ಮಗಳು ಇಲ್ಲಿ ಬಹಳ ವರ್ಷಗಳಿಂದ ಇದ್ದಾರೆ. ಮೊದಲು ಜಡ್ಡಾದಲ್ಲಿದ್ದರು. ಇದು ಒಂದು ಖಾಸಗಿ ಕಂಪನಿಗೆ ಒಳಪಟ್ಟ ವಸತಿ ಪ್ರದೇಶ. 3೦-3೦ ಮನೆಗಳ ಮೂರು ನಾಲ್ಕು ಬ್ಲಾಕ್ ಗಳು. ಎಲ್ಲ ಸೌಕರ್ಯಗಳಿಂದ ಕೂಡಿದ್ದು. ಆಂಗ್ಲ ಮಾದರಿಯ ಮನೆಗಳು. ಸ್ವಚ್ಛತೆಗೆ ಆದ್ಯತೆ. ತುಂಬ ಗಿಡಮರ ಬೆಳೆಸಿದ್ದಾರೆ. ಸದ್ಯಕ್ಕಂತೂ ಹವೆ ಹಿತಕರವಾದದ್ದು. ಶಾಂತ, ಆಹ್ಲಾದಕರ ವಾತಾವರಣ. ಇಲ್ಲಿರುವವರೆಲ್ಲ ಹೆಚ್ಚಾಗಿ ಭಾರತೀಯರೆ. ತೆಲುಗು, ತಮಿಳು, ಕನ್ನಡ, ಮರಾಠಿ, ಹಿಂದಿ, ಮಲೆಯಾಳಿ ಎಲ್ಲ ಭಾಷಿಕರಿಂದ ಕೂಡಿದ “ಮಿನಿಭಾರತ” ಇದು. ಬಹಳ ಸ್ನೇಹದಿಂದ ಕೂಡಿ ಬದುಕುತ್ತಿದ್ದಾರೆ. ಹಬ್ಬ ಹರಿದಿನ ಉತ್ಸವಗಳನ್ನು ಎಲ್ಲ ಸೇರಿ ಆಚರಿಸುತ್ತಾರೆ.
ಜುಬೇಲ್ ಸುಮಾರು ಏಳು ಲಕ್ಷ ಜನಸಂಖ್ಯೆಯ ಸುಂದರ ಸ್ವಚ್ಛ ನಗರ. ಇದು ಮೊದಲು ಒಂದು ಮೀನುಗಾರಿಕಾ ಗ್ರಾಮವಾಗಿತ್ತಂತೆ. ಸೌದಿ ಅರೇಬಿಯಾದ ಗಲ್ಫ ಕರಾವಳಿಯ ಪೂರ್ವಭಾಗದಲ್ಲಿದೆ. ಆದರೆ 1957 ರ ನಂತರ ಈ ಪ್ರದೇಶದ ಸ್ವರೂಪವೇ ಬದಲಾಗಿಬಿಟ್ಟಿತು. ಇಂದು ಇದು ವಿಶ್ವದ ಅತಿದೊಡ್ಡ ಕೈಗಾರಿಗಾ ನಗರ. ಮಧ್ಯಪ್ರಾಚ್ಯದ ಅತಿದೊಡ್ಡ ಮತ್ತು ಜಗತ್ತಿನ ನಾಲ್ಕನೇ ಬೃಹತ್ ಇಂಡಸ್ಟ್ರಿಯಲ್ ಏರಿಯಾ. ಇಲ್ಲಿಯ ಪೆಟ್ರೊ ಕೆಮಿಕಲ್ ಕಂಪನಿ SABIC / IWPP ಒಂದು ಸ್ವತಂತ್ರ ನೀರು ಮತ್ತು ವಿದ್ಯುತ್ ಉತ್ಪಾದನಾ ಯೋಜನೆ. ಪ್ರತಿನಿತ್ಯ 2743 ಮೆಗಾವ್ಯಾಟ್ ವಿದ್ಯುತ್ ಮತ್ತು 8 ಲಕ್ಷ m ನೀರು ಉತ್ಪಾದನೆ ಘಟಕ ಇದು. ಪ್ರಾಂತೀಯ ಗವರ್ನರ್ ಸೌದ್ ಬಿನ್ ನಯೇಫ್ ಅವರ ದೇಖರೇಖೆಯಲ್ಲಿ ಜಮಾಲ್ ಜುಬೇಲ್ ಅಸಾಧಾರಣ ಬೆಳವಣಿಗೆ ಕಂಡಿದೆ.
ಇಲ್ಲಿಯ ಜನಸಂಖ್ಯೆಯಲ್ಲಿ ಶೇ. 73 ರಷ್ಟು ಸೌದಿ, ಶೇ. 17 ರಷ್ಟು ಭಾರತೀಯರು, ಉಳಿದವರು ಪಾಕ್, ಬಾಂಗ್ಲಾ, ಫಿಲಿಫೈನ್ಸ್ , ಅಮೆರಿಕಾ ಮೊದಲಾದೆಡೆಯವರು. ಸೌದಿ ಅರೇಬಿಯಾದಲ್ಲಿ ಹೊರದೇಶದ ವಲಸಿಗರ ಸಂಖ್ಯೆ ದೊಡ್ಡದಿದ್ದರೂ ಅವರೆಲ್ಲ ಕೆಲಸಗಾರರೇ. ಇಲ್ಲಿ ಹೊರಗಿನ ಯಾರಿಗೂ ಸ್ವಂತ ಆಸ್ತಿಪಾಸ್ತಿ ಮಾಡಲು ಅವಕಾಶವಿಲ್ಲ. ಇಲ್ಲಿ ಸಮುದ್ರತೀರವಿದೆ. ಎರಡು ಬಂದರುಗಳಿವೆ. ನೌಕಾವಿಮಾನ ನಿಲ್ದಾಣವಿದೆ. ಏಳು ಪ್ರಮುಖ ಬೀಚುಗಳು, ಬೃಹತ್ ಮಾರುಕಟ್ಟೆ, ವಿವಿಧ ಮಾಲುಗಳು ,ವಿಶ್ವವಿದ್ಯಾಲಯ, ತಾಂತ್ರಿಕ , ಕೈಗಾರಿಕಾ ಕಾಲೇಜುಗಳಿವೆ‌. ಮ್ಯಾಂಗ್ರೋವ್ ಪಾರ್ಕ್‌ನಂತಹ ಪ್ರೇಕ್ಷಣೀಯ ಸ್ಥಳಗಳಿವೆ.
ಬೆಂಗಳೂರನ್ನು ಸ್ವಚ್ಛವಾಗಿರಿಸಿಕೊಳ್ಳಲು ಆಗದ ಬಿಬಿಎಂಪಿ ಯಂತಹ ಸಂಸ್ಥೆಗಳು ಇಲ್ಲಿಗೆ ಬಂದು ನಗರವನ್ನು ಸ್ವಚ್ಛವಾಗಿಡುವುದು ಹೇಗೆ ಎಂದು ಕಲಿತುಕೊಂಡು ಹೋಗಬೇಕಾಗಿದೆ.

ಸೌದಿ ಪ್ರವಾಸಾನುಭವ -10
************************
ಸೌದಿ ಅರೇಬಿಯಾ: ಕೆಲ ವಿಶಿಷ್ಟ ಸಂಗತಿಗಳು
*********************
* ಸೌದಿ ಅರೇಬಿಯಾದ ದೊರೆ ತಮ್ಮ ಹೆಸರಿನ ಹಿಂದೆ “ಎರಡು ಮಸೀದೆಗಳ ( ಮಕ್ಕಾ ಮದೀನಾ) ಪಾಲಕ” ಎಂದು ಹಾಕಿಕೊಳ್ಳುತ್ತಾರೆ.
* ಪ್ರತಿವರ್ಷ ಇಲ್ಲಿಯ ಎರಡು ದಶಲಕ್ಷ ಜನ ಹಜ್ ಯಾತ್ರೆ ಮಾಡುತ್ತಾರೆ
* ಸೌದಿ ಅರೇಬಿಯಾದಲ್ಲಿ ಪೆಟ್ರೋಲ್ ನಿಕ್ಷೇಪ ಮೊದಲು ಪತ್ತೆಯಾದದ್ದು 1938 ರಲ್ಲಿ.
* ಇಲ್ಲಿ ಸಾಮಾನ್ಯವಾಗಿ ಅಲ್ ಎಂಬ ಶಬ್ದ ಜೋಡಿಸಲಾಗುತ್ತದೆ‌. ಅಲ್ ಜುಬೇಲ್, ಅಲ್ ರಿಯಾಧ್ , ಅಲ್ ಸೌದ್ , ಅಲ್ ಅಹ್ಸಾ ಇತ್ಯಾದಿ. ಅಲ್ ಎನ್ನುವುದಕ್ಕೆ ಕುಟುಂಬ / ಮನೆ ಎಂಬ ಅರ್ಥವಿದೆ.
* ಅಲ್ ಮರಾಯಿ ಎಂಬುದು ಈ ದೇಶದ ಬಹುದೊಡ್ಡ ಹಾಲು ಉತ್ಪಾದಕ ಕಂಪನಿ. ನಮ್ಮಲ್ಲಿ ನಂದಿನಿ ಇದ್ದಂತೆ. ಉತ್ತಮ ಗುಣಮಟ್ಟದ ಹಾಲು, ಮಜ್ಜಿಗೆ ಮತ್ತಿತರ ಉತ್ಪನ್ನಗಳನ್ನು ಒದಗಿಸುತ್ತದೆ.
* ಅಲ್ ಜೌಫ್ ಎಂಬ ಪ್ರದೇಶ ಓಲಿವ್ ಮರಗಳಿಗೆ ಪ್ರಸಿದ್ಧ. ಅಲ್ಲಿ ಸುಮಾರು‌ ಇಪ್ಪತ್ತು ದಶಲಕ್ಷ ಮರಗಳಿವೆಯೆನ್ನಲಾಗುತ್ತದೆ.
* ಅಲ್ ಹಸಾ ಎಂಬ ಪ್ರದೇಶ ತಾಳೆ/ ಖರ್ಜೂರ ಬೆಳೆಗೆ ಹೆಸರಾದದ್ದು. ಇಲ್ಲಿ 3೦ ದಶಲಕ್ಷದಷ್ಟು ಮರಗಳಿದ್ದು 1೦೦ ಸಾವಿರ ಟನ್ ಖರ್ಜೂರ ಬೆಳೆಯಲಾಗುತ್ತದಂತೆ.
* ಕಬ್ಸಾ ಎಂಬುದು ಇಲ್ಲಿಯ ಬಹಳ ಪ್ರಸಿದ್ಧ ತಿಂಡಿ. ಇದಕ್ಕೆ ಬಾಸುಮತಿ ಅಕ್ಕಿ, ಮಾಂಸ ಮತ್ತಿತರ ವಸ್ತುಗಳನ್ನು ಬಳಸಲಾಗುತ್ತದೆ.
* ಇಲ್ಲಿ 15 ಲಕ್ಷದಷ್ಟು ಕ್ರಿಶ್ಚಿಯನ್ನರು, 4 ಲಕ್ಷದಷ್ಟು ಹಿಂದುಗಳು ಇದ್ದರೂ ದೇವಾಲಯ, ಚರ್ಚು ಯಾವುದೂ ಇಲ್ಲ. ಇತರ ಧರ್ಮದವರಿಗೆ ಧಾರ್ಮಿಕ ಸ್ವಾತಂತ್ರ್ಯ ಇಲ್ಲ. ( ಮನೆಯೊಳಗೆ ಆಚರಣೆ ಮಾಡಬಹುದು).
* ಜಗತ್ತಿನ ಅತ್ಯಂತ ಆರೋಗ್ಯಕರ ನಗರಗಳಲ್ಲಿ ಜೆಡ್ಡಾ – ಸೌದಿ ಸಿಟಿ ಆಫ್ ಮದೀನಾ- ಪರಿಗಣಿಸಲ್ಪಡುತ್ತದೆ. ( WHO )
* ಅತಿ ಉಷ್ಣತೆಯಿರುವ ನಗರ ಮಕ್ಕಾ
* ಅತ್ಯಂತ ತಂಪಾದ ನಗರ ತುರೈಫ್
* ಶ್ರೀಮಂತ ನಗರಗಳಲ್ಲಿ ರಿಯಾಧ್ , ನಂತರ ಖೋಬರ್, ದಹ್ರಾನ್,ದಮ್ಮಾಮ್ ಗಳು
* ಈಗಿನ ಸಂವಿಧಾನ ಇಲ್ಲಿ ರಚನೆಯಾದದ್ದು 1992 ರಲ್ಲಿ
* ವಿಶ್ವಸಂಸ್ಥೆಯ ಮನ್ನಣೆ ದೊರಕಿದ್ದು 1945 ರಲ್ಲಿ
* ಪ್ರಿನ್ಸೆಸ್ ನೌರಾ ಮಹಿಳಾ ವಿಶ್ವವಿದ್ಯಾಲಯ ಜಗತ್ತಿನ ಅತಿ ದೊಡ್ಡ ಮಹಿಳಾ ವಿ. ವಿದ್ಯಾಲಯವೆನಿಸಿದೆ.
* ಇಲ್ಲಿಯ ತಾಳೆ ಮರಗಳಲ್ಲಿ 26೦೦ ಬಗೆಯ ತಳಿಗಳಿವೆಯೆನ್ನಲಾಗಿದೆ.
* ಜಗತ್ತಿನ ಅತಿದೊಡ್ಡ ಮರುಭೂಮಿಯೆನಿಸಿರುವ ಅರಬ್ ಮರಳುಗಾಡು ಯೆಮೆನ್ ನಿಂದ ಪರ್ಸಿಯನ್ ಕೊಲ್ಲಿತನಕ. ಮತ್ತು ಓಮನ್ ನಿಂದ ಜೋರ್ಡಾನ್ ತನಕ ಹಬ್ಬಿಕೊಂಡಿದೆ.

ಸೌದಿ ಪ್ರವಾಸಾನುಭವ -11
***********************
ಸೌದಿ: ಇತಿಹಾಸದತ್ತ ಇಣುಕು ನೋಟ
********************
ಏಕೀಕೃತ ಸೌದಿ ಅರೇಬಿಯಾ ಅಸ್ತಿತ್ವಕ್ಕೆ ಬಂದಿದ್ದು 1932 ಸೆಪ್ಟೆಂಬರ್ 23 ರಂದು. ಆ ದಿನವನ್ನು ಈಗಲೂ ಸೌದಿ ರಾಷ್ಟ್ರೀಯ ದಿನವನ್ನಾಗಿ ಆಚರಿಸುತ್ತಾರೆ ಮತ್ತು ಅಂದು ರಾಷ್ಟ್ರೀಯ ರಜಾದಿನವಾಗಿರುತ್ತದೆ.
ಅರೇಬಿಯನ್‌ ಮರುಭೂಮಿ ಪ್ರದೇಶಕ್ಕೂ ಒಂದು ಪ್ರಾಚೀನ ಇತಿಹಾಸವಿದೆ. ಭಾರತದಲ್ಲಿ, ಹಾಗೆಯೇ ಕರ್ನಾಟಕದಲ್ಲೂ ಹೇಗೆ ಹಲವು ರಾಜಮನೆತನಗಳ ಆಳ್ವಿಕೆ ಮತ್ತು ಆಕ್ರಮಣ – ಪ್ರತಿ ಆಕ್ರಮಣಗಳು ನಡೆದಿವೆಯೋ ಅರೇಬಿಯಾದಲ್ಲೂ ಸಾಕಷ್ಟು ಸಂಘರ್ಷಗಳು ನಡೆದಿವೆ. ಅರೇಬಿಯನ್ ಪೆನಿನ್ಸುಲಾದ ಮಾನವ ವಾಸದ ಇತಿಹಾಸ 1,25,೦೦೦ ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ. ನವ ಶಿಲಾಯುಗದಲ್ಲಿ ಹೊಸ ಮಾನವ ಸಂಸ್ಕೃತಿ ಕಂಡು ಬಂದಿದೆ. ಸಂಶೋಧನೆ ಮತ್ತು ಉತ್ಖನನಗಳಲ್ಲಿ 8 ಸಾವಿರ ವರ್ಷಗಳ ಹಿಂದಿನ ಕಲ್ಲಿನ ಕೆತ್ತನೆಯ ಬೇಟೆ ದೃಶ್ಯಗಳು ಕಾಣಿಸಿದ್ದು ನಾಯಿ ಕುದುರೆಗಳ ಬೇಟೆಯಾಡುವ ದೃಶ್ಯಗಳಿವೆ. ಕ್ರಿಪೂ. 4 ನೇ ಸಹಸ್ರಮಾನದ ಕೊನೆಯಲ್ಲಿ ಅರೇಬಿಯಾ ಕಂಚಿನ ಯುಗಕ್ಕೆ ಪ್ರವೇಶಿಸಿತ್ತು. 7 ನೆಯ ಶತಮಾನದ ಕೊನೆಯಲ್ಲಿ ಲಿಹ್ಯಾನ್ ಸಾಮ್ರಾಜ್ಯ ಸ್ಥಾಪನೆಯಾಯ್ತು. ಮುಂದೆ ಕೆಲಕಾಲ ರೋಮನ್ನರ ಆಳ್ವಿಕೆಯೂ ಬಂತು.
ಇದು ಮೂಲತಃ ಅಲೆಮಾರಿ ಪಶುಪಾಲಕ ಬುಡಕಟ್ಟು ಜನಾಂಗದಿಂದ ಕೂಡಿದ್ದು. ಪ್ರವಾದಿ ಮಹ್ಮದ್ ಆ ಬುಡಕಟ್ಟು ಜನಾಂಗಗಳನ್ನೆಲ್ಲ ಒಂದುಗೂಡಿಸಿ ಧಾರ್ಮಿಕ ರಾಜಕೀಯ ಸ್ವರೂಪ ಕೊಟ್ಟು ಇಸ್ಲಾಂ ಧರ್ಮದ ಉದಯಕ್ಕೆ ಹಾದಿ ಮಾಡಿಕೊಟ್ಟರು. ಅವರ ಅನುಯಾಯಿಗಳು ನಂತರ ಅದನ್ನು ಅರಬ್ ಗಡಿ ದಾಟಿಸಿ ವೆಗವಾಗಿ ವಿಸ್ತರಿಸಿದರು. ಅರಬ್ ಭೂಭಾಗ ಹಲವು ಜನಾಂಗಗಳ ನಂತರ ಬನಿ ಎಂಬ ಬುಡಕಟ್ಟು ಜನಾಂಗವನ್ನು ಹೊಂದಿತ್ತು. ಸಾಕಷ್ಟು ಯುದ್ಧಗಳು ನಡೆದಿವೆ. ಆಕ್ರಮಣಗಳು ನಡೆದಿವೆ. ಮೊದಲ ಜಾಗತಿಕ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷರ ಹಸ್ತಕ್ಷೇಪವೂ ಕಂಡುಬಂದಿತ್ತು. ಎಲ್ಲವನ್ನೂ ದಾಟಿ 1727 ರಲ್ಲಿ ಈಗಿನ ಸೌದಿ ರಾಜ ಮನೆತನ ಅಧಿಕಾರಕ್ಕೆ ಬಂದಿತು.
ಜಗತ್ತಿನ ಎರಡನೇ ಅತಿದೊಡ್ಡ ಧರ್ಮವೆನಿಸಿದ ಇಸ್ಲಾಂ ಧರ್ಮ ಏಳನೇ ಶತಮಾನದಲ್ಲಿ ಉದಯಿಸಿ ಜಗತ್ತಿನ ಹಲವೆಡೆ ವ್ಯಾಪಿಸಿಕೊಂಡಿತು. ಸೌದಿ ಅರೇಬಿಯಾ ಅದರ ಮೂಲ ಸ್ಥಾನವಾಗಿ, ಮಕ್ಕಾ ಮದೀನಾಗಳೊಂದಿಗೆ ಇಸ್ಲಾಂ ಜನರ ಪವಿತ್ರ ಸ್ಥಳವಾಗಿ ಉಳಿದುಕೊಂಡಿತು. ಇಸ್ವಿ 2೦೦೦ ವರೆಗೆ ಸೌದಿ ಸುನ್ನಿ ಇಸ್ಲಾಂ ನ ಅತಿ ಸಂಪ್ರದಾಯವಾದಿ‌ ವಹಾಬಿ ಧಾರ್ಮಿಕ ಪದ್ಧತಿಯ ಅನುಸರಣೆಯಲ್ಲಿತ್ತು. 2016 ರಿಂದ ಕ್ರಮೇಣ ಆಧುನಿಕ ಪಾಶ್ಚಾತ್ಯೀಕರಣದತ್ತ ಸಾಗತೊಡಗಿದ ಸೌದಿ ಅರೇಬಿಯಾ ಇಂದು ಅನೇಕ ಸಾಮಾಜಿಕ ಪರಿವರ್ತನೆಗಳನ್ನು ಕಂಡಿದೆ‌ . ಇಸ್ಲಾಂ ಧಾರ್ಮಿಕ ನೀತಿಯ ಒಂದೊಂದೇ ಕಠಿಣ ನಿಯಮ ನಿರ್ಬಂಧಗಳಿಂದ ಹೊರಬರುತ್ತಿದೆ. ಮಹಿಳೆಯರ ಶಿಕ್ಷಣಕ್ಕೆ ಮಹತ್ವ ನೀಡಲಾಗುತ್ತಿದೆ. ಐವತ್ತು ವರ್ಷಗಳ ಹಿಂದೆಯೇ ಇಲ್ಲಿ ವಿಶ್ವದ ಅತಿದೊಡ್ಡ ಮಹಿಳಾ ವಿಶ್ವವಿದ್ಯಾಲಯ ತಲೆಯೆತ್ತಿದ್ದು ಗಮನಿಸಬೇಕಾದ ಸಂಗತಿ. ಹಿಂದೆ ಬೇರೆ ದೇಶಗಳಿಂದ ಬರುವ ಮಹಿಳೆಯರಿಗೂ ಇಲ್ಲಿ ಬುರ್ಖಾ ಕಡ್ಡಾಯವಿತ್ತು.ಮನೋರಂಜನೆಗೆ, ವಾಹನ ಚಾಲನೆಗೆ ನಿರ್ಬಂಧವಿತ್ತು. ಉದ್ಯೋಗಗಳಲ್ಲೂ ಅವರಿಗೆ ಅವಕಾಶ ಕಡಿಮೆ ಇತ್ತು. ಇಂದು ಮಹಿಳೆಯರು ಸಾಕಷ್ಟು ಸ್ವಾತಂತ್ರ್ಯದ ಉಸಿರಾಡುತ್ತಿದ್ದಾರೆ. ದೇಶವನ್ನು 2030 ರ ವೇಳೆಗೆ ಇನ್ನೊಂದು ಹೊಸ ಮಜಲಿಗೆ ಕೊಂಡೊಯ್ಯುವ ಬಹು ದೊಡ್ಡ ಯೋಜನೆ ವಿಶನ್ 2030 ಕಾರ್ಯರೂಪಕ್ಕೆ ಬರುತ್ತಿದೆ. ಅದು ಸೌದಿ ಅರೇಬಿಯಾಕ್ಕೆ ಹೊಸ ರೂಪವನ್ನು ತಂದುಕೊಡುವುದರಲ್ಲಿ ಸಂದೇಹವಿಲ್ಲ.

*ಎಲ್.ಎಸ್.ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ