(ಬೆಳಗಾವಿಯ 80 ರ ಹರೆಯದ ಹಿರಿಯ ಪತ್ರಕರ್ತ, ಸಾಹಿತಿ, ಕಲಾವಿದರು, ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಸಕ್ರಿಯವಾಗಿ ಕನ್ನಡ ಓದುಗರಿಗೆ ಚಿರಪರಿಚಿತರಾಗಿರುವ ಎಲ್.ಎಸ್. ಶಾಸ್ತ್ರಿ ಅವರು ತಮ್ಮ ಸುಪುತ್ರಿಯ ಕರೆಯ ಮೇರೆಗೆ ಸೌದಿ ಅರೇಬಿಯಾಕ್ಕೆ ಡಿ.24 ರಿಂದ ಮಾರ್ಚ್ 2 ರ ವರೆಗೆ ಪ್ರವಾಸ ನಿಮಿತ್ತ ತೆರಳಿದ್ದಾರೆ. ಅಲ್ಲಿ ಅವರು ಕಂಡ ಆ ದೇಶದ ಸಂಸ್ಕೃತಿ, ಸೌಂದರ್ಯವನ್ನು ತಮ್ಮದೇ ಆದ ವಿಶಿಷ್ಟ ಬರಹಗಳ ಮೂಲಕ ಉದಯ ಪ್ರಭ ಓದುಗರ ಮುಂದೆ ತೆರೆದಿಡಲಿದ್ದಾರೆ. ಅವರ ಈ ಪ್ರವಾಸ ಕಥನ ಸೌದಿ ಅರೇಬಿಯಾದ ವಿಶೇಷ ಅನುಭವಗಳನ್ನು ತೆರೆದಿಡುತ್ತಿದೆ. ಅವರ ಸುಂದರ ಬರಹ ಎಂಥವರನ್ನು ಸೆಳೆಯುವಂತಿವೆ. ಅಲ್ಲಿನ ಅನುಭವವನ್ನು ದಿನವೂ ಉದಯಪ್ರಭ ಪ್ರಕಟಿಸಲಿದೆ)
ಡಿಸೆಂಬರ್ 24 ರಂದು ಬೆಂಗಳೂರಿಂದ ಹೊರಟು ದಮ್ಮಾಮ ವಿಮಾನ ನಿಲ್ದಾಣದಿಂದ ಜುಬೇಲ್ ಗೆ ಬಂದು ಒಂದು ದಿನ ವಿಶ್ರಾಂತಿ ಪಡೆದು , ಡಿಸೆಂಬರ್ 26 ರ ಬೆಳಿಗ್ಗೆ 8.41 ಕ್ಕೆ ಸೌದಿ ಅರೇಬಿಯಾದ ರಾಜಧಾನಿ ರಿಯಾಧ್ ಗೆ ಹೊರಟಿದ್ದಾಯಿತು. ಸುಮಾರು ಐದು ತಾಸಿನ ದೀರ್ಘ ಪಯಣ. ( ಸುಮಾರು 5೦೦ ಕಿ. ಮೀ. ಬೆಳಗಾವಿಯಿಂದ ಬೆಂಗಳೂರಿಗೆ ಹೋದಷ್ಟು).
ದಾರಿಯುದ್ದಕ್ಕೂ ಹಳದಿ- ಬಿಳಿ ಮರಳಿನ ರಾಶಿ. ರಸ್ತೆಗೆ ಗಾಳಿಯ ಮೂಲಕ ಉಸುಕು ಬರುವುದನ್ನು ತಡೆಗಟ್ಟಲು ಯಂತ್ರಗಳನ್ನು ಬಳಸಿ ಬದಿಗೆ ಸರಿಸುತ್ತಿರುತ್ತಾರೆ. ಅಚ್ಚ ಹಳದಿ ಬಣ್ಣದ ಸ್ವಚ್ಛ ಮರಳಿನ ದಿಬ್ಬಗಳು ಕಣ್ಣು ಸೆಳೆಯುತ್ತವೆ.
ಅಲ್ಲಲ್ಲಿ ಕುರುಚಲು ಕಳ್ಳಿ ಗಿಡಗಳು. ಅಪರೂಪಕ್ಕೆ ಕೆಲ ಮರುಭೂಮಿಯ ಸಸ್ಯಗಳು, ಖರ್ಜೂರದ ತೋಟಗಳು ಕಣ್ಣಿಗೆ ಕಾಣುವುದುಂಟು. ಹಾಗೆಯೇ ಸಸಿಗಳನ್ನು ಬೆಳೆಸುವ ಪ್ಲಾಂಟಗಳು, ತರಕಾರಿ ಬೆಳೆಯುವ ಗೂಡುಗಳೂ ಕಂಡುಬರುತ್ತವೆ.
ಅಲ್ ಜುಬೇಲನಿಂದ ಮತ್ತೆ ಕಾರಿನಲ್ಲಿ ದಮಾಮ್ ವಿಮಾನ ನಿಲ್ದಾಣದ ದಾರಿಯಲ್ಲೇ ರಿಯಾಧ್ ಕಡೆಗೆ ಹೋಗಬೇಕು. ಮಕ್ಕಾಗೆ 12೦೦ ಕಿ.ಮಿ. ಎಂಬ ಫಲಕ ನೋಡಿದೆವು. ಅಲ್ಲಲ್ಲಿ ಹೊಸ ಸಮೂಹ ಗೃಹಗಳ ನಿರ್ಮಾಣ ನಡೆಯುತ್ತಿದ್ದರೂ ಖಾಲಿ ಸ್ಥಳಗಳೇ ಜಾಸ್ತಿ. ಪ್ರದೇಶ ವಿಸ್ತಾರಕ್ಕೆ ತಕ್ಕ ಜನವಸತಿ ಇಲ್ಲ. ಬಹುಶಃ ಈ ದೇಶದ ಅರ್ಧ ಭಾಗ ಮರಳಿನಿಂದಲೇ ತುಂಬಿದೆ.
ವೇಗಕ್ಕೆ ಮಿತಿ
ಕೆಲವೆಡೆ ಕಾರಿನ ವೇಗ 9೦-93 ಕಿಮೀ. ಗಿಂತ ಹೆಚ್ಚಾದರೆ 3೦೦ ರಿಯಾಲ್ ಅಂದರೆ 6೦ ಸಾವಿರ ರೂ. ದಂಡ ವಿಧಿಸಲಾಗುತ್ತದೆ. ದಾರಿಯಲ್ಲಿ ಅಳವಡಿಸಲಾಗಿರುವ ಕ್ಯಾಮರಾಗಳಲ್ಲಿ ವೇಗ ದಾಖಲಾಗಿರುತ್ತದೆ. ದಂಡದ ಮೊತ್ತ ತನ್ನಿಂದ ತಾನೇ ಕಟ್ ಆಗಿರುತ್ತದೆ.
ಅವರೇನೂ ನಮ್ಮನ್ನು ಕೇಳುವುದಿಲ್ಲ.
ಒಂದು ರಿಯಾಲ್ ಗೆ 6 ರೊಟ್ಟಿ/ ಅಫಘಾನ್ ರೊಟ್ಟಿ
ಇಲ್ಲಿಯ ಒಂದು ರಿಯಾಲ್ ಅಂದರೆ ಭಾರತದ 22 ರೂ. ಅರಸನ ಜನಪರ ಕಾಳಜಿಯಿಂದಾಗಿ ಕೆಲವು ಸ್ಥಳಗಳಲ್ಲಿ ಮಾರುವ ರೊಟ್ಟಿ ಪ್ಯಾಕೆಟ್ಟಿಗೆ ಒಂದು ರಿಯಾಲಗಿಂತ ಹೆಚ್ಚು ಪಡೆಯುವಂತಿಲ್ಲ. ಒಂದು ಪ್ಯಾಕೆಟ್ಟಿನಲ್ಲಿ ಆರು ರೊಟ್ಟಿಗಳಿರುತ್ತವೆ. ಅಂದರೆ ನಮ್ಮ 22 ರೂ. ಜನಸಾಮಾನ್ಯರಿಗೆ ಬಹಳ ಅನುಕೂಲ.
ಇನ್ನೊಂದು ಸ್ವಾರಸ್ಯವೆಂದರೆ ಇಲ್ಲಿ ಸಿಗುವ ” ಅಫಘಾನ್ ರೊಟ್ಟಿ”. ಇದನ್ನು ನೋಡಿದರೇ ಗಾಬರಿಯಾಗುತ್ತದೆ. ನಮ್ಮಲ್ಲಿಯ ಹೊಟೆಲುಗಳಲ್ಲಿ ” ತಂದೂರಿ ರೊಟ್ಟಿ” ಕೊಡುತ್ತಾರಲ್ಲ. ಅಂತಹ ಸುಮಾರು ನಾಲ್ಕು ರೊಟ್ಟಿಗಳನ್ನು ಸೇರಿಸಿದರೆ ಈ ಒಂದು ರೊಟ್ಟಿಯಾಗುತ್ತದೆ. ಇದಕ್ಕೂ ಒಂದೇ ರಿಯಾಲ್. . ಒಂದು ಅಫಘಾನ್ ರೊಟ್ಟಿ ತಂದರೆ ಮನೆ ಜನಕ್ಕೆ ಎಲ್ಲ ಸಾಕಾಗುತ್ತದೆ. ಭಾಜಿ ಮಾಡಿಕೊಂಡರೆ ಸಾಕು.