ಹೌದು, ನೀರು, ಮಣ್ಣು ಯಾವುದೂ ಇಲ್ಲದ ನೆಲದಲ್ಲವರು ನಾಡು ಕಟ್ಟಿದರು. ಸಾಮ್ರಾಜ್ಯವನ್ನು ನಿರ್ಮಿಸಿದರು. ಅರಬ್ ಜನರ ಸಾಹಸ, ಪ್ರಯತ್ನಶೀಲತೆಯನ್ನು ಮೆಚ್ಚದೇ ಇರಲಾದೀತೇ? ಪ್ರದೇಶ ವಿಸ್ತಾರವಿದ್ದರೂ ಇಡೀ ಅರಬ್ ನಾಡಿನಲ್ಲೊಂದು ನೈಸರ್ಗಿಕ ನದಿಯಿಲ್ಲ, ಹೊಳೆಯಿಲ್ಲ, ದೊಡ್ಡ ಸರೋವರಗಳಿಲ್ಲ. ಕುಡಿಯುವ ನೀರಿಗೆ ಸಮುದ್ರದ ಉಪ್ಪು ನೀರೇ ಗತಿ. ಅದನ್ನೇ ನಿರ್ಲವಣೀಕರಣ ಮಾಡಿ ಶುದ್ಧಗೊಳಿಸಿ‌ ಕುಡಿಯಬೇಕು.
ಇನ್ನು ಮಣ್ಣೆಂದರೆ ಅದೇ ಉಸುಕು/ ರೇವೆ/ ಮರಳು. ಒಳ್ಳೆಯ ಮಣ್ಣು ಬೇಕೆಂದರೆ ಅದನ್ನೂ ಬೇರೆ ದೇಶದಿಂದ ಆಮದು ಮಾಡಿಕೊಳ್ಳಬೇಕು. ‌ಬಹುಭಾಗ ಮರಳುಗಾಡು. ಅಪರೂಪಕ್ಕೆಲ್ಲಾದರೂ ಕಾಣ ಸಿಗುವ ಸಣ್ಣ ಓಯಾಸಿಸ್ ಗಳು, ನೀರಿನ ಬುಗ್ಗೆಗಳು.
ಹವೆಯೋ, ಅದೂ ಪ್ರತಿಕೂಲವೆ. ಚಳಿಗಾಲದಲ್ಲಿ ಒಂದಿಷ್ಟು ಮಳೆ ಬಂದೀತು. ದಕ್ಷಿಣ ಭಾಗ ಬಿಟ್ಟು ಉಳಿದೆಡೆ ಸರಾಸರಿ 1೦೦ ಮಿ.ಮೀ. ಬಿದ್ದೀತು. ಬಿಸಿಬಿಸಿ ಗಾಳಿ. ಚಳಿಗಾಲದಲ್ಲಿ ಸ್ವಲ್ಪ ಪರವಾಗಿಲ್ಲ ಅನ್ನುವ ವಾತಾವರಣ.
ಒಟ್ಟಾರೆ ಎಲ್ಲವೂ ಪ್ರತಿಕೂಲವೇ ಹೊರತು ಅನುಕೂಲಕರ ಎನ್ನುವುದು ಕಡಿಮೆ.
ಆದರೂ ಬದುಕಬೇಕಲ್ಲ. ಸಾವಿರಾರು ವರ್ಷಗಳಿಂದ ಇಲ್ಲಿ ಬದುಕು ಕಟ್ಟಿಕೊಂಡು ಬಂದ ಜನರ ಶ್ರಮ , ಸಾಹಸದ ಫಲವಾಗಿ ಇಂದು ಅರಬ್ ದೇಶಗಳು ಜಗತ್ತಿನ ಅತ್ಯಾಧುನಿಕ ಮುಂದುವರಿದ ದೇಶಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಪರಿವರ್ತನೆ ತಂದಿದ್ದಾರೆ.
ಕುಡಿಯುವ ನೀರು
***************
ಬದುಕಬೇಕೆಂದರೆ ನೀರು ಬೇಕು. ಇದ್ದದ್ದು ಸಮುದ್ರ ಮಾತ್ರ. ಸಮುದ್ರದಲ್ಲಿದ್ದುದು ಉಪ್ಪು ನೀರು ಮಾತ್ರ. Water water everywhere, but no drop to drink ಅಂದ ಹಾಗೆ. ಆದರೆ ಈ ಜನ ಎದೆಗುಂದಲಿಲ್ಲ. ಸಮುದ್ರದ ನೀರನ್ನೇ ಶುದ್ಧೀಕರಿಸಿ , ನಿರ್ಲವಣೀಕರಣ ಮಾಡಿ ಸಂಗ್ರಹಿಸಿ ಕುಡಿಯುವ ನೀರು ಪ್ರಜೆಗಳಿಗೆ ಪೂರೈಸುವ ಬೃಹತ್ ಯೋಜನೆಗಳನ್ನು ರೂಪಿಸಲಾಯಿತು. ಇಲ್ಲಿ ಮೂರು ಬಗೆಯ ನೀರಿನ ಮೂಲಗಳನ್ನು ಕಂಡುಕೊಂಡರು. ಒಂದು- ನಿರ್ಲವಣೀಕರಣ(5೦%). ಎರಡು- ತ್ಯಾಜ್ಯ ನೀರಿನ ಸಂಸ್ಕರಣೆ( 4೦%). ಮೂರು- ಅಂತರ್ಜಲ ಹೊರ ತೆಗೆಯುವಿಕೆ.(10%) . ನೈಋತ್ಯ ಪರ್ವತ ಭಾಗದ ನೀರಿನ ಹರಿವನ್ನು ಸಣ್ಣ ಸಣ್ಣ ಆಣೆಕಟ್ಟು ಕಟ್ಟಿ ಸಂಗ್ರಹಿಸಲಾಗುತ್ತದೆ.
ಇಲ್ಲಿಯ ನೀರು ಸರಬರಾಜು ವ್ಯವಸ್ಥೆ ಬಹಳ ಅದ್ಭುತವಾದದ್ದು. ನ್ಯಾಷನಲ್ ವಾಟರ್ ಕಂಪನಿ ಸರಕಾರದ ಸಚಿವಾಲಯದಡಿ ಕೆಲಸ ಮಾಡುತ್ತದೆ. ಖಾಸಗಿ ವಲಯಕ್ಕೂ ಅವಕಾಶವಿದೆ. ಸರಕಾರ ಅವರಿಂದ ನೀರು ಖರೀದಿಸಿ ಜನರಿಗೆ ಉಚಿತವಾಗಿ ಹಂಚುತ್ತದೆ. ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೃಷಿಗೆ ಒದಗಿಸಲಾಗುತ್ತದೆ. ವರ್ಷಕ್ಕೆ 748 ಮಿ.ಕ್ಯುಬಿಕ್ ಮೀಟರ್ ಸಾಮರ್ಥ್ಯದ 3೦ ಕ್ಕೂ ಹೆಚ್ಚು ಸಂಸ್ಕರಣಾ ಘಟಕಗಳಿದ್ದು ಮತ್ತೆ 15 ನಿರ್ಮಾಣವಾಗುತ್ತಿದೆ. ನೀರು ಮತ್ತು ವಿದ್ಯುತ್ ಸಚಿವಾಲಯ ರಾಷ್ಟೀಯ ನೀರು ನೈರ್ಮಲ್ಯೀಕರಣ ಯೋಜನೆ ರೂಪಿಸಿ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕೆಲಸ ಮಾಡುತ್ತದೆ. ಹಿಂದೆ ರಿಯಾಧ್ ಜನರಿಗೆ ಎರಡೂವರೆ ದಿನಕ್ಕೊಮ್ಮೆ ಮತ್ತು ಜೆಡ್ಡಾಗೆ ಒಂಬತ್ತು ದಿನಕ್ಕೊಮ್ಮೆ ನೀರು ಒದಗಿಸುವ ಪರಿಸ್ಥಿತಿ ಇತ್ತು.ಈಗ ಶೇ. 97 % ಜನರಿಗೆ ಸುಧಾರಿತ ನೀರು ನಿತ್ಯ ದೊರಕಿಸಲಾಗುತ್ತಿದೆ. ಸಂಚಾರದಲ್ಲಿ ನಮಗೆ ಅಂತಹ ಸಂಸ್ಕರಿಸಿದ ಬೃಹದಾಕಾರದ ನೀರು ಸಂಗ್ರಹಾಗಾರಗಳು ಕಣ್ಣಿಗೆಬೀಳುತ್ತವೆ. ನೀಗ ನಾವಿರುವ ಅಲ್ ಜುಬೇಲ್ ನಲ್ಲಿ ಅತಿ ದೊಡ್ಡ ಪರಿಷ್ಕರಣಾಗಾರ ನಿರ್ಮಿಸಿದರು. ಇಲ್ಲವೆಂದಲ್ಲ . ಇದ್ದೇಇದೆ‌ . ವಿಶನ್-2೦3೦ ಯೋಜನೆಗಳಲ್ಲಿ ಈ ಕೊರತೆ ನೀಗುವ ಗುರಿ ಇರಿಸಿಕೊಳ್ಳಲಾಗಿದೆ.
ಕೃಷಿ ಕ್ಷೇತ್ರದ ಪ್ರಗತಿ
****************
ಮಳೆಯಿಲ್ಲ, ಫಲವತ್ತಾದ ಮಣ್ಣಿಲ್ಲ. ಆದರೂ ಸೌದಿ ಅರೇಬಿಯಾದಂತಹ ದೇಶ ಕೃಷಿ ಕ್ಷೇತ್ರದಲ್ಲಿ ಇಂದು ಬಹಳ ಮಟ್ಟಿಗೆ ಸ್ವಾವಲಂಬಿಯಾಗುವತ್ತ ಸಾಗುತ್ತಿರುವುದು ನಂಬಲಾಗದ ಅಚ್ಚರಿಯ ಸಂಗತಿ. ಆ ಕುರಿತು ತಿಳಿದುಕೊಳ್ಳಬೇಕಾದ ಹಲವು ಸಂಗತಿಗಳಿವೆ.
( ಮುಂದುವರಿಯುತ್ತದೆ)

☑️ ಎಲ್. ಎಸ್ .ಶಾಸ್ತ್ರಿ , ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ.