ಪೆಟ್ರೋಲ್, ಡೀಸೆಲ್ ಕೊರತೆಯಂತೂ ಇಲ್ಲ. ಆದರೆ ಸೌದಿ ಅರೇಬಿಯಾದಲ್ಲಿ ಆಟೋರಿಕ್ಷಾಗಳಿಲ್ಲ, ಸ್ಕೂಟರುಗಳು, ಮೋಟರ್ ಬೈಕ್ ಗಳು, ಬೈಸಿಕಲ್ಲುಗಳು ಸಹ ಅಪರೂಪವೆ. ಬಾಡಿಗೆ ಟ್ಯಾಕ್ಸಿಗಳಿವೆ. ಅವೇ ಸ್ವಲ್ಪ ಕಡಿಮೆ ದರದ ಸಾರಿಗೆ. ಟೆಂಪೋಗಳೂ ಅಷ್ಟೇ. ಸರಕಾರಿ ಬಸ್ಸುಗಳು ಇವೆಯಾದರೂ ನಮ್ಮಲ್ಲಿಯಷ್ಟು ದೊಡ್ಡ ಸಂಖ್ಯೆಯಲ್ಲಿಲ್ಲ.
ಸ್ಕೂಟರ್, ಬೈಕ್ ಗಳಿಲ್ಲದ್ದಕ್ಕೆ ಮುಖ್ಯ ಕಾರಣ ಇಲ್ಲಿಯ ವಿಪರೀತ ಉಷ್ಣತೆ. ಹೆಚ್ಚೆಂದರೆ ಚಳಿಗಾಲದ ಮೂರು ನಾಲ್ಕು ತಿಂಗಳು ನಡೆದೀತು. ಉರಿಬಿಸಿಲು ದೊಡ್ಡ ಅಡ್ಡಿ.
ರಾಜಧಾನಿ ರಿಯಾಧ್ ಗೆ ಹೋದಾಗ ನನಗೆ ನಾಗತಿಹಳ್ಳಿಯವರ ಸಿನಿಮಾದ ಕಾರ್ ಕಾರ್ ಕಾರ್ ಎಂಬ ಹಾಡು ನೆನಪಾಗದೇ ಇರಲಿಲ್ಲ. ರಸ್ತೆ ತುಂಬ ಅಷ್ಟೊಂದು ಕಾರುಗಳು. ಇಲ್ಲಿ ಕಾರಿಲ್ಲದವರೇ ಅಪರೂಪ. ಅದೇ ಸಾರಿಗೆಯ ಜೀವನಾಡಿ. ಇಲ್ಲಿಗೆ ಮೊದಲ ಕಾರು ಬಂದಿದ್ದು ೧೯೨೧ ರಲ್ಲಿ ರಾಜನಿಂದಲೇ. ೭೦ ರ ದಶಕದ ನಂತರ ಕಾರುಗಳ ಸಂಖ್ಯೆ ಹೆಚ್ಚಾಯಿತು. ಸಾಮಾನ್ಯವಾಗಿ ಎಲ್ಲಾ ರಸ್ತೆಗಳು ಅಗಲಗಲವಾಗಿ, ಮತ್ತು ವ್ಯವಸ್ಥಿತವಾಗಿ ಇರುವುದರಿಂದ ಕಾರು ಇಲ್ಲಿ ಬಹಳ ಅನುಕೂಲವೂ ಹೌದು.
ಹಾಗಂತ ಸರಕಾರದ Soudi Public Transport Company- SAPTCO- ಬಸ್ಸುಗಳು ಇದ್ದೇಇವೆ. ೧೯೭೯ ರಲ್ಲಿ ಈ ಸಂಸ್ಥೆ ಆರಂಭವಾಯಿತು. ಇದು ೪೫೦೦ ಉಪ ಘಟಕಗಳನ್ನು ಹೊಂದಿದೆ. ತಿಂಗಳಿಗೆ ೮ ದಶಲಕ್ಷಕ್ಕೂ ಹೆಚ್ಚು ಜನ ಈ ಬಸ್ಸುಗಳಲ್ಲಿಪ್ರಯಾಣ ಮಾಡುತ್ತಾರೆ. ಒಟ್ಟು 6, 27,000 ಕಿ. ಮೀ. ರಸ್ತೆ ಸಂಚಾರಕ್ಕಿದೆ. ಸಾರಿಗೆ ಸಚಿವಾಲಯದಡಿ ಇದು ಕಾರ್ಯ ನಿರ್ವಹಿಸುತ್ತಿದ್ದು ಹತ್ತು ಪ್ರಮುಖ ಅಂತಾರಾಜ್ಯ ಮಾರ್ಗಗಳಿವೆ. ಪವಿತ್ರ ಮದೀನಾಕ್ಕೆ ಅತ್ಯಾಧುನಿಕ ಸಾರಿಗೆ ವ್ಯವಸ್ಥೆ ಇದೆ. ‘ ಆದರೂ ಈ ವಿಶಾಲವಾದ ದೇಶದಲ್ಲಿ ಬಸ್ಸುಗಳು ಆಗಾಗ ಅಲ್ಲಲ್ಲಿ ಅಪರೂಪವಾಗಿ ಕಾಣಸಿಗುತ್ತವೆ.
ಇನ್ನೂ ರೈಲ್ವೆ ಜಾಲ ಬಹಳ ವ್ಯಾಪಕವಾಗಿ ಹರಡಿಕೊಂಡಿಲ್ಲ. ಹಲವು ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ. ೧೯೦೮ ರಲ್ಲಿ ಮೊದಲ ರೈಲು ಮಾರ್ಗ ನಿರ್ಮಾಣವಾಯಿತಾದರೂ ಮೊದಲ ವಿಶ್ವ ಮಹಾ ಯುದ್ಧದ ಕಾಲಕ್ಕೆ ಹಲವೆಡೆ ರೈಲು‌ಮಾರ್ಗ ನಾಶವಾಯಿತು. ಬಂದರುಗಳಿಗೆ ಸಂಪರ್ಕ ಕಲ್ಪಿಸುವ ಹಲವು ರೈಲು ಮಾರ್ಗಗಳೂ ಇವೆ. ರಿಯಾಧ್ ನಲ್ಲಿ ಮೆಟ್ರೋ ಆರಂಭವಾಗುತ್ತಿದೆ. ಹೈಸ್ಪೀಡ್ ರೈಲೊಂದು ಮಕ್ಕಾ ಮದೀನಾಗಳನ್ನು ಸಂಪರ್ಕಿಸುತ್ತದೆ.
ಮೂರು ಪ್ರಮುಖ ವಿಮಾನ ನಿಲ್ದಾಣಗಳಿದ್ದು ಹಲವು ಸಣ್ಣ ಪ್ರಮಾಣದ ದೇಶಿ ನಿಲ್ದಾಣಗಳೂ ಇವೆ. ಈ ದೇಶಕ್ಕೆ ಬಹುದೊಡ್ಡ ಸಮುದ್ರ ಕರಾವಳಿಯಿರುವುದರಿಂದ ಒಂಬತ್ತು ಪ್ರಮುಖ ಬಂದರುಗಳಿದ್ದು ನೌಕಾ ಸಾರಿಗೆಯೂ ಮುಖ್ಯವಾದದ್ದಾಗಿದೆ.
ಉಬರ್ ಕರೀಮ್ ನಂತಹ ಹಲವು ಖಾಸಗಿ ಬಾಡಿಗೆ ಟ್ಯಾಕ್ಸಿಗಳು, ಗುತ್ತಿಗೆ ಸೇವೆಗಳು, ವಿಐಪಿ ಸೇವೆ, ಶಾಲೆ ಕಾಲೇಜು ಸಾರಿಗೆ ಸೇವೆಗಳೆಲ್ಲ ಇವೆ. ಎಲ್ಲವೂ ಡೀಸೆಲ್ ಚಾಲಿತ. ವಿಷನ್-೨೦೩೦ ರ ಯೋಜನೆಗಳ ಅಂಗವಾಗಿ ಸಾರಿಗೆ ವ್ಯವಸ್ಥೆಯನ್ನು ವಿಸ್ತರಿಸುವ ಕಾರ್ಯ ನಡೆದಿದೆ.

ಸೌದಿ ಪ್ರವಾಸಾನುಭವ -19
***********************
ಸುಡುಬಿಸಿಲಿನ ನಾಡಿನಲ್ಲಿ ಖರ್ಜೂರದ ಸಿಹಿ

ಅರಬ್ ನಾಡಿನ ಖರ್ಜೂರ ಇಂದು ವಿಶ್ವವ್ಯಾಪಿ. ಅದರ ಸವಿ ಸವಿಯದವರು ಯಾರಿಲ್ಲ. ಜಗತ್ತಿನಲ್ಲಿ ಅತಿ ಹೆಚ್ಚು ಖರ್ಜೂರ ಬೆಳೆಯುವುದು ಇಜಿಪ್ತ ದೇಶ. ನಂತರ ಇರಾನ್, ಅಲ್ಜೀರಿಯಾ, ಆ ಮೇಲೆ ಸೌದಿ. ಆದರೆ ಸೌದಿ ಖರ್ಜೂರಗಳಿಗೇ ಅತಿ ಹೆಚ್ಚಿನ ಬೇಡಿಕೆ. ಏಕೆಂದರೆ ಅದರ ರುಚಿಯೇ ಅಂತಹದು. ಖರ್ಜೂರದಲ್ಲಿ ೩ ಸಾವಿರದಷ್ಟು ವೈವಿಧ್ಯಮಯ ತಳಿಗಳಿವೆಯೆನ್ನಲಾಗುತ್ತದೆ. ಆದರೆ ಅವುಗಳಲ್ಲಿ ಸೌದಿ ಅರೇಬಿಯಾದಲ್ಲಿ ಬೆಳೆಯುವ ಅಜ್ವಾ ಎಂಬ ಜಾತಿಯ ಖರ್ಜೂರಕ್ಕೆ ಪ್ರಥಮ ಸ್ಥಾನ. ಅದರ ಬೆಲೆಯೂ ಹೆಚ್ಚು. ಹಾಗೆಯೇ ಸುಕ್ಕರಿ, ಬರ್ಹಿ, ಜಾಹಿದಿ, ಮಬ್ರೂನ್, ಸಫಾವಿ, ಅನಬರಾ,ಸಗಾಯಿ , ಮೆಡ್ಜೂಲ್ ಮೊದಲಾದವುಗಳ ಸರದಿ. ಸೌದಿ ಅರೇಬಿಯಾದಲ್ಲೇ ೧೫೦೦ ಕ್ಕೂ ಹೆಚ್ಚು ತರಹದ ಖರ್ಜೂರಗಳನ್ನು ಬೆಳೆಯಲಾಗುತ್ತದೆ. ಇವುಗಳಲ್ಲಿ ಕೆಲವು ಬೇರೆ ಬೇರೆ ಬಗೆಯ ಕಾಯಿಲೆಗಳಿಗೆ ಉಪಯುಕ್ತವೆನಿಸುವಂತಹವೂ ಇವೆ.
ಸೌದಿಯ ನಂತರ ಹೆಚ್ಚು ಖರ್ಜೂರ ಬೆಳೆಯುವ ರಾಷ್ಟ್ರಗಳೆಂದರೆ ಯುಎಇ, ಇರಾಕ್, ಪಾಕಿಸ್ತಾನ, ಸುಡಾನ್, ಒಮನ್ ಮತ್ತು ಟ್ಯುನೀಶಿಯಾ ಮೊದಲಾದವು. ಖರ್ಜೂರಕ್ಕೆ ಇಲ್ಲಿ ಪರಂಪರಾಗತವಾದ ಗೌರವದ ಸ್ಥಾನವಿದೆ. ಸಹಸ್ರಾರು ವರ್ಷಗಳಿಂದಲೂ ಅದು ಅವರ ಜನಜೀವನ ಸಂಸ್ಕೃತಿಗಳ ಅವಿಭಾಜ್ಯ ಅಂಗವಾಗಿ ಉಳಿದುಬಂದಿದೆ. ಸಾಂಪ್ರದಾಯಿಕ ಅರೇಬಿಯನ್ ಕಾಫಿಯೊಂದಿಗೆ ಅತಿಥಿಗಳಿಗೆ ಖರ್ಜೂರವನ್ನು ನೀಡಿ ಸತ್ಕರಿಸುವುದು ಅಲ್ಲಿಯ ಪದ್ಧತಿ. ಸೌದಿಯಲ್ಲಿ ೩೪ ದಶಲಕ್ಷಕ್ಕೂ ಅಧಿಕ ಖರ್ಜೂರದ ಗಿಡಗಳಿವೆ. ವಾರ್ಷಿಕ ೩ ಲಕ್ಷ ೨೧ ಸಾವಿರ ಟನ್ನುಗಳಿಗೂ ಹೆಚ್ಚು ರಫ್ತು ಮಾಡಲಾಗುತ್ತದೆ. ಅದರಿಂದ ವಾರ್ಷಿಕ 1.28 ಬಿಲಿಯನ್ ನಷ್ಟು ಸೌದಿ ರಿಯಾಲ್ ಆದಾಯವಿದೆ. ಅದು ಅರಬ್ ನಾಡಿನ ರಾಷ್ಟ್ರೀಯ ಹೆಗ್ಗುರುತೂ ಹೌದು.
ಖರ್ಜೂರದ ಮರಗಳು ಗೊಂಚಲು ಗೊಂಚಲಾಗಿ ಬಗೆಬಗೆಯ ಬಣ್ಣದ ಹಣ್ಣುಗಳಿಂದ ಕೂಡಿರುವಾಗ ನೋಡಲು ಕಣ್ಣಿಗೆ ಹಬ್ಬವೇ ಸರಿ. ಕಡಿಮೆ ನೀರು ಮತ್ತು ಉಷ್ಣ ವಾತಾವರಣಗಳಲ್ಲಿ ಬೆಳೆಯುವ ಖರ್ಜೂರಗಳ ರುಚಿಯಲ್ಲೂ ವೈವಿಧ್ಯತೆಯಿದೆ. ಮೊರಾಕ್ಕಾ ಮೂಲದ ಬೆಂಡ್ಜೂಲ್ ಎಂಬ ಜಾತಿಯ ಹಣ್ಣನ್ನು ಮಾರುಕಟ್ಟೆಯ ಚಕ್ರವರ್ತಿ ಎನ್ನಲಾಗುತ್ತದೆ. ಅದು ೧೫-೩೫ ಗ್ರಾಂ. ತೂಕದ್ದಾಗಿ ಉದ್ದ ಆಕಾರ ಹೊಂದಿರುತ್ತದೆ. ಅದು ವರ್ಷವಿಡೀ ಬೆಳೆಯುವ ಬೆಳೆ. ಮ್ಯಾಬ್ರೂಮ್ ಎಂಬ ಜಾತಿಯದು ಗಾಢ ಕಂದು ಬಣ್ಣದ್ದಾಗಿ ಮೃದುವಾಗಿ, ಮೈಮೇಲೆ ಸುಕ್ಕುಗಳಿರುತ್ತವೆ. ಬಹಳ ಬೇಡಿಕೆಯಿರುವ ಅಜ್ವಾ ಖರ್ಜೂರ ಕೊಲೆಸ್ಟರಾಲ್ ಹೃದಯಸಂಬಂಧಿ ಕಾಯಿಲೆಯಿರುವವರಿಗೆ ಉತ್ತಮ. ತಿಂಗಳವರೆಗೆ ತಾಜಾ ಆಗಿಡಬಹುದು. ಇದಕ್ಕೆ ಕಿಲೋಗೆ ೫೦ ರಿಂದ ೧೦೦ ರಿಯಾಲ್ ತನಕ ಬೆಲೆ. ಬರ್ಹಿ ಎಂಬುದು ಹಳದಿ ಬಣ್ಣದ್ದಾಗಿರುತ್ತದೆ. ಜಾಹಿದಿ ಚಿನ್ನದ ಬಣ್ಣದ್ದಾಗಿರುತ್ತದೆ. ದಕ್ಷಿಣ ಏಷ್ಯದಲ್ಲಿ ಜನಪ್ರಿಯವಾಗಿರುವ ಸುಕ್ಕರಿ ಸುಕ್ಕುರ್/ ಸಕ್ಕರೆ ಎಂಬ ಶಬ್ದ ಮೂಲದ್ದು. ಹೊಂಬಣ್ಣದ ಈ ಸುಕ್ಕರಿಯನ್ನು ಖರ್ಜೂರದ ರಾಣಿ ಎನ್ನುತ್ತಾರೆ. ಅದು ಕರಗುವಷ್ಟು ಮೃದು ಮತ್ತು ಪೌಷ್ಟಿಕಾಂಶದಿಂದ ಕೂಡಿದ್ದು. ಬೆಲೆಯೂ ಕಡಿಮೆ. ಸಘಾಯ್ ಎಂಬುದು ಕುರುಕುಲು ರುಚಿಯದಾಗಿರುತ್ತದೆ.
ಹೀಗೆ ಶತಶತಮಾನಗಳ ಕಾಲದಿಂದ ಅರೇಬಿಯನ್ನರ ಬದುಕಿನಲ್ಲಿ ಬೆರೆತುಕೊಂಡುಬಂದ ಖರ್ಜೂರ ಭಾರತೀಯರಿಗೂ ಪ್ರಿಯವೆ.

✒️ ಎಲ್.ಎಸ್.ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ.