ಸಹಸ್ರಾರು ವರ್ಷಗಳಿಂದ ಮರಳುಗಾಡಿನ ಜನರ ಜೀವನಾಡಿಯಾಗಿ ಬಂದಿರುವ ಓಯಾಸಿಸ್ ಗಳ ಸಂಖ್ಯೆ ಇಂದು ಹಿಂದಿನಷ್ಟಿಲ್ಲವಾದರೂ ಅವುಗಳ ಮಹತ್ವವೇನೂ ಕಡಿಮೆಯಾಗಿಲ್ಲ. ವ್ಯಾಪಾರ ವ್ಯವಹಾರಗಳಿಗಾಗಿ ಒಂಟೆ ಕಾರವಾನ್ ಗಳ ಮೂಲಕ ಸಾವಿರಾರು ಮೈಲು ಪ್ರಯಾಣ ಮಾಡುತ್ತಿದ್ದವರಿಗೆ ಮರಳುಗಾಡಿನ ನಡುವೆ ಅಪರೂಪಕ್ಕೆ ಕಾಣಿಸಿಕೊಳ್ಳುವ ಈ ಓಯಾಸಿಸ್ ಗಳೇ ಆಧಾರ. ಇಂದು ಅಂತಹ ಓಯಾಸಿಸ್ ಗಳ ಸುತ್ತ ಜನವಸತಿ ಬಂದಿರುವುದರಿಂದ ಬಹಳಷ್ಟು ಮೂಲ ಸ್ವರೂಪವನ್ನು ಕಳೆದುಕೊಂಡಿವೆ. ಬಹಳಷ್ಟು ಮಾಯವಾಗಿವೆಯೆನ್ನಲಾಗುತ್ತದೆ. ಹಿಂದೆ 17೦೦ ಕ್ಕೂ ಹೆಚ್ಚು ನೈಸರ್ಗಿಕ ಓಯಾಸಿಸ್ ಗಳನ್ನು ಗುರುತಿಸಲಾಗಿತ್ತು.
ಸದ್ಯ ಉಳಿದುಕೊಂಡಿರುವ ಒಂದು ಮಹತ್ವದ ಮತ್ತು ಬಹುದೊಡ್ಡ ಓಯಾಸಿಸ್ ಪೂರ್ವಭಾಗದ ಅಲ್ ಅಹ್ಸಾ ಓಯಾಸಿಸ್ . ಇದು ಯುನೆಸ್ಕೊ ವಿಶ್ವ ಪಾರಂಪರಿಕ ತಾಣದ ಮನ್ನಣೆಯನ್ನು ಪಡೆದುಕೊಂಡಿದೆ. ಈ ಪ್ರದೇಶದಲ್ಲಿ ಮಿಲಿಯನ್ ಗಟ್ಟಲೆ ಖರ್ಜೂರ ಮತ್ತು ತಾಳೆಮರಗಳು ಸುತ್ತ ಬೆಳೆದುನಿಂತಿವೆ. ಅಲ್ ಅಹ್ಸಾ ಐತಿಹಾಸಿಕ ಹಿನ್ನೆಲೆಯ ನಗರ. ಪಾರಂಪರಿಕ ಉಡುಗೆಗಳ ಕಸೂತಿ ಕೆಲಸಕ್ಕೆ ಪ್ರಸಿದ್ಧವಾದ ಊರು ಇದು. ಅಕ್ಕಿ , ಹಣ್ಣು ತರಕಾರಿಗಳನ್ನೂ ಬೆಳೆಯಲಾಗುತ್ತದೆ. ಕೆಲವು ನೈಸರ್ಗಿಕ ಬಿಸಿನೀರಿನ ಬುಗ್ಗೆಗಳೂ ಇವೆ. ಸುಮಾರು
2.5 ಮಿಲಿಯನ್ ಖರ್ಜೂರ ಮರಗಳ ಮೂಲಕ ನೂರುಸಾವಿರ ಟನ್ ಖರ್ಜೂರವನ್ನು ಇಲ್ಲಿ ಬೆಳೆಯಲಾಗುತ್ತದೆ.
ಅಲ್ ಅಹ್ಸಾ ಅಲ್ಲದೆ ಅಲ್ಖರ್ಜಾ, ಅಲ್ ಅಬಾ, ಅಲ್ ಉಲಾ, ಅಲ್ ಹಾಯಿಲ್ , ತೇಮಾ ಮೊದಲಾದ ಇತರ ಓಯಸಿಸ್ ಗಳೂ ಇವೆ. ಕೆಲವು ವಿಸ್ತಾರವಾದ ಓಯಾಸಿಸ್ ಗಳಿಗೆ ವರ್ಷಕ್ಕೆರಡು ಸಲ ರಶ್ಯಾ, ಕೆನಡಾ, ಭಾರತ , ಇರಾನ್ ಮೊದಲಾದೆಡೆಗಳಿಂದ ಪಕ್ಷಿಗಳು ವಲಸೆ ಬರುವುದುಂಟು. ಅರಬ್ ನಾಡಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಈ ಓಯಾಸಿಸ್ ಗಳನ್ನೂ ನೋಡಲೇಬೇಕು. ಮನಸ್ಸಿಗೆ ಮುದವನ್ನುಂಟುಮಾಡುವ ಪರಿಸರ ಈ ನೈಸರ್ಗಿಕ ನೀರಿನೊರತೆಗಳದು. ಇವುಗಳ ಬಗ್ಗೆ ಮುಂದೆ ಇನ್ನಷ್ಟು ಮಾಹಿತಿಗಳನ್ನು ಕೊಡಲಿದ್ದೇನೆ.
✒️ ಎಲ್.ಎಸ್.ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ