ಬೇಕಾದಷ್ಟು ಭೂಮಿ ಇದೆ, ಬೇಕಾದಷ್ಟು ಹಣವೂ ಇದೆ. ಅಂದಾಗ ಹೊಸ ಹೊಸ ಪ್ರಯೋಗಕ್ಕೆ ಕೈಹಾಕುವುದು ವಿಶೇಷವೇನಲ್ಲ. ಆದರೆ ಅಂತಹ ಪ್ರಯೋಗಶೀಲತೆಯ ಮನಸ್ಸೂ ಬೇಕು. ಸಾಹಸ ಪ್ರವೃತ್ತಿಯೂ ಬೇಕು. ಸೌದಿ ಅರೇಬಿಯದ ಈಗಿನ ಕ್ರೌನ್ ಪ್ರಿನ್ಸ್ ಮೊಹಮ್ಮದ ಬಿನ್ ಸಲ್ಮಾನ್ ಅವರಲ್ಲಿ ಈ ಎಲ್ಲವೂ ಮೇಳೈಸಿದೆ. ಅವರೀಗ ವಿಶ್ವದಲ್ಲೇ ಮೊದಲ ನೂತನ ಪ್ರಯೋಗವೊಂದಕ್ಕೆ ಕೈಹಾಕಿದ್ದಾರೆ. ಅದೇ- ದಿ ಲೈನ್ ಸಿಟಿ- ರೇಖಾ ನಗರ.
ಇದು ವಿಷನ್ ೨೦೩೦ ರನ್ವಯ ರೂಪಿಸಿದ ವಿಶಿಷ್ಟ ಸ್ಮಾರ್ಟ್ ಸಿಟಿ ಯೋಜನೆ. ಇದು ಉಳಿದ ನಾವು ನೋಡುವ ನಗರಗಳಂತಿರುವುದಿಲ್ಲ. ೧೭೦ ಕಿ. ಮೀ. ಉದ್ದದ ಒಂದು ರೇಖೆಯಂತಿರುವ ನಗರ. ತಬೂಕ್ ಪ್ರಾಂತದಲ್ಲಿ ನಿಯೋಮ್ ಮೂಲಕ ನಿರ್ಮಾಣವಾಗುತ್ತಿರುವ ಈ ನಗರ ಪೂರ್ತಿಗೊಂಡಾಗ ಇಲ್ಲಿ ೯ ದಶಲಕ್ಷ ನಾಗರಿಕರು ವಾಸವಾಗುವರೆಂಬ ನಿರೀಕ್ಷೆ ಸೌದಿ ಸರಕಾರದ್ದು ಮತ್ತು ೪ ಲಕ್ಷ ೬೦ ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ. ಈ ನಗರದ ವೈಶಿಷ್ಟ್ಯವೆಂದರೆ ಇದು ಕಾರು, ಬೀದಿ , ಕಾರ್ಬನ್ ಹೊರಸೂಸುವಿಕೆ ಯಾವುದೂ ಇಲ್ಲದ ನಗರವಾಗಿರುತ್ತದೆ. ನಿಯೋಮ್ ನ ೯ ಘೋಷಿತ ಪ್ರದೇಶಗಳಲ್ಲಿ ಇದೂ ಒಂದು. ಇದರ ಉದ್ದ ೧೭೦ ಕಿ.ಮೀ. ಗಳಷ್ಟಾದರೆ ಅಗಲ ೦-೨ ಕಿ. ಮಿ. ಎತ್ತರ ೫೦೦ ಮೀ. ( ೧೬೦೦ ಅಡಿ). ತಬೂಕ್ ನಗರದಿಂದ ಕೆಂಪು ಸಮುದ್ರದ ವರೆಗೆ ಇದು ಒಂದೇ ರೇಖೆಯಂತೆ ಸಾಗುತ್ತದೆ. ಈಗಾಗಲೇ ಇದರ ನಿರ್ಮಾಣ ಕಾರ್ಯ ಆರಂಭವಾಗಿದೆ. (೨೦೨೨)
ಇದು ಅಗಲಗಲವಾಗಿ, ಅಸ್ತವ್ಯಸ್ತವಾಗಿ ಹರಡಿಕೊಳ್ಳುವ ನಗರವಲ್ಲ. ೦.೨ ಕಿ. ಮಿ. ಅಗಲದ ಜಾಗದಲ್ಲಿ ಎದುರು ಬದುರಾಗಿ ಎರಡು ಕಟ್ಟಡಗಳ ಸಾಲು ಇರುತ್ತದೆ. ನಡುವೆ ಹೊರಾಂಗಣ ಸ್ಥಳ. ಇದು ಮೂರು ಪದರುಗಳಲ್ಲಿರುತ್ತದೆ. ಮೊದಲನೆಯದು ಪಾದಚಾರಿಗಳದು. ಕೆಳಗೆ ಎರಡನೆಯದು ಮೂಲಸೌಕರ್ಯಗಳಿಗಾಗಿ. ಮೂರನೆಯದು ಸಾರಿಗೆಗಾಗಿ. ಇದರ ಅಂದಾಜು ವೆಚ್ಚ ೧೦೦-೨೦೦ ಶತಕೋಟಿ ಡಾಲರು ಅಥವಾ ೪೦೦-೭೦೦ ಸೌದಿ ರಿಯಾಲ್. ೯೫% ಪರಿಸರ ರಕ್ಷಣೆ ಮಾಡಲಾಗುತ್ತದೆ ಮತ್ತು ಸಂಪೂರ್ಣ ನವೀಕರಿಸಬಹುದಾದ ಶಕ್ತಿಯಿಂದ ಚಾಲಿತವಾಗಿರುತ್ತದೆ. ಕೃತಕ ಬುದ್ಧಿಮತ್ತೆಯಿಂದ ವ್ಯವಸ್ಥೆಯ ಮೇಲ್ವಿಚಾರಣೆ ನಡೆಯುತ್ತದೆ.
ಈ ರೇಖೀನಗರದ ನಿರ್ಮಾಣಕ್ಕಿರುವ ಅಡ್ಡಿಗಳನ್ನೆಲ್ಲ ನಿವಾರಿಸಲಾಗಿದೆ. ಇಲ್ಲಿ ಒಂದು ಕಡೆ ಹುವೈಲಾಟ್ ಎಂಬ ಸ್ಥಳೀಯ ಮೂಲ ಬುಡಕಟ್ಟು ಜನಾಂಗದವರ ವಾಸವಿತ್ತು. ಅದನ್ನು ತೆರವು ಮಾಡಲು ಆ ಜನಾಂಗದ ಮುಖ್ಯಸ್ಥರು ಒಪ್ಪಿರಲಿಲ್ಲ. ಕೊನೆಗೆ ಭದ್ರತಾ ಪಡೆಯವರು ಅವರನ್ನೇ ಮುಗಿಸಿದರೆಂದು ಹೇಳಲಾಗುತ್ತಿದೆ. ಅಲ್ಲಿಗೆ ಸಮಸ್ಯೆಯೂ ಮುಗಿಯಿತಲ್ಲ.
ಹಾಗಿದ್ದರೆ ಇಂತಹ ಒಂದು ನಗರ ನಿರ್ಮಾಣದ ಕಲ್ಪನೆ ಹಿಂದೆ ಯಾರೂ ಮಾಡಿರಲೇಇಲ್ಲವೇ? ಹಾಗೇನಿಲ್ಲ. ೧೮೮೨ ರಲ್ಲಿ ಸ್ಪೇನಿಷ್ ನಗರ ಯೋಜಕ ಅರ್ಟುರೊ ಸೋರಿಯಾ ಅವರು ಈ ಬಗೆಯ ವಿಚಾರ ಮಾಡಿದ್ದರೂ ಅವರ ಆ ವಿಚಾರಕ್ಕೆ ಉತ್ತೇಜನ ದೊರಕಲಿಲ್ಲ. ನಂತರ ೧೯೫೦ ರಲ್ಲಿ ಫ್ರೆಂಚ್ ವಾಸ್ತುಶಿಲ್ಪಿ ಯೋನಾ ಫ್ರೀಡಮನ್ ಎಂಬವರು ಇಂತಹ ಯೋಜನೆ ರೂಪಿಸಿದ್ದರಂತೆ. ಆಗಲೂ ಅದನ್ನು ಕಾರ್ಯರೂಪಕ್ಕೆ ತರಲು ಯಾರೂ ಧೈರ್ಯ ಮಾಡಲಿಲ್ಲ. ೬೦ ರ ದಶಕದಲ್ಲಿ ಇಟಾಲಿಯನ್ ತಜ್ಞರ ತಂಡವೊಂದು ವಿಫಲ ಪ್ರಯತ್ನ ಮಾಡಿತ್ತು. ಈಗ ಸೌದಿ ಕ್ರೌನ್ ಪ್ರಿನ್ಸ್ ಕಾರ್ಯರೂಪಕ್ಕಿಳಿಸಲು ಮುಂದಾಗಿದ್ದಾರೆ. ಸೌದಿ ಅರೇಬಿಯಾ ಏಷ್ಯಾದಲ್ಲೇ ಅತಿದೊಡ್ಡ ೫ ನೇ ಭೂಪ್ರದೇಶ ಹೊಂದಿದೆ. (೮೩೦೦೦೦ ಚದುರು ಮೈಲು). ಖಾಲಿಯಿರುವ ಜಾಗವೇ ಹೆಚ್ಚು.
NEOM ಈ ಯೋಜನೆಯನ್ನು ಜಾರಿಗೆ ತರುತ್ತಿದೆ. ನಿಯೋ ಎಂದರೆ ಹೊಸದು ಎನ್ನುವ ಅರ್ಥ. ಅದು ಗ್ರೀಕ್ ಶಬ್ದ. M ಎಂದರೆ ಫ್ಯೂಚರ್ / ಭವಿಷ್ಯ ಎಂಬರ್ಥ. ರಾಜಕುಮಾರನ ಹೆಸರಿನ ಮೊದಲ ಅಕ್ಷರವೂ ಹೌದು. ದೇಶದ ಹೊಸ ಭವಿಷ್ಯವನ್ನು ರೂಪಿಸುವುದು ಇದರ ಉದ್ದೇಶ. ಸೌದಿ ಸರಕಾರದ ವಿಷನ್ ೨೦೩೦ ಆ ಉದ್ದೇಶದತ್ತ ಸಾಗಿದೆ.
( ಈ ಚಿತ್ರದಲ್ಲಿ ರೇಖಾ ನಗರದ ಮಾದರಿ ಸ್ವರೂಪವನ್ನು ಕಾಣಬಹುದು. ಬಲಗಡೆ ಇರುವಂತೆ ಒಂದೇ ರೇಖೆಯಲ್ಲಿ ೧೭೦ ಕಿ. ಮೀ. ಉದ್ದಕ್ಕೆ ಸಾಗುತ್ತದೆ. )
✒️ಎಲ್. ಎಸ್. ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ.