ಸೌದಿ ಅರೇಬಿಯಾದಲ್ಲಿ ರಾಜಕೀಯ ಪಕ್ಷಗಳೇ ಇಲ್ಲ. ಆದ್ದರಿಂದ ರಾಜಕಾರಣಿಗಳೂ ಇಲ್ಲ. ಶಾಸಕಾಂಗ ಇದೆ. ಆದರೆ ಆಯ್ಕೆಗೊಂಡ ಜನಪ್ರತಿನಿಧಿಗಳಿಲ್ಲ. ಇಲ್ಲಿರುವುದು ರಾಜಪ್ರಭುತ್ವ. ರಾಜನೇ ದೇಶದ ಪ್ರಧಾನಮಂತ್ರಿ ಕೂಡ. ಆಡಳಿತ ಪೂರ್ತಿಯಾಗಿ ಅರಸು ಪರಿವಾರದ ಕೈಯಲ್ಲೇ ಇರುವುದು. ೨೩ ಸಚಿವರುಗಳಿದ್ದಾರೆ, ಸಚಿವಾಲಯಗಳೂ ಇವೆ. ಆದರೆ ಅವರು ಜನರಿಂದ ಆಯ್ಕೆಯಾದವರಲ್ಲ. ಅರಸನಿಂದ ನೇಮಕಗೊಂಡವರು. ಸರಕಾರಕ್ಕೆ ಸಲಹೆ ನೀಡಲು ೧೫೦ ಸದಸ್ಯರ ಒಂದು ಸಲಹಾ ಮಂಡಳಿ ಇದೆ‌. ಅದಕ್ಕೆ ಶಾಸಕಾಂಗ ಅಧಿಕಾರ ಇಲ್ಲ. ಪರಮಾಧಿಕಾರ ಮತ್ತು ಅಂತಿಮ ನಿರ್ಧಾರ ಅರಸನದೇ. ಪ್ರಮುಖ ಸ್ಥಾನಗಳಿಗೆ ನೇಮಕಾತಿಗೆ ಅಲಿಜಿಯನ್ಸ್ ಕೌನ್ಸಿಲ್ ಇದೆ. ಆದರೆ ಎಲ್ಲ ಪ್ರಮುಖ ಸ್ಥಾನಗಳಲ್ಲಿರುವವರು ಅರಸು ಪರಿವಾರದವರೇ. ಆ ಪರಿವಾರವೋ ಸಾವಿರ ಸಾವಿರ ಸಂಖ್ಯೆಯಲ್ಲಿರುವಂತಹದು. ಮಜ್ಲಿಸ್ ಮೂಲಕ ಅರಸನ ನೇರ ಭೆಟ್ಟಿಗೆ ಅವಕಾಶವಿದೆ.

ಇದು ಸೌದಿ ರಾಜಕೀಯ ಆಡಳಿತದ ಒಂದು ಸಂಕ್ಷಿಪ್ತ ನೋಟ. ರಾಜಕೀಯದಲ್ಲಿ ಅಧಿಕೃತ ವಿರೋಧ ಪಕ್ಷವೆನ್ನುವುದು ಇಲ್ಲ. ಆಡಳಿತವನ್ನು ವಿರೋಧಿಸುವ ಕೆಲ ಗೌಪ್ಯ ಭೂಗತ ರಾಜಕೀಯ ಗುಂಪುಗಳಿವೆಯೆನ್ನಲಾಗುತ್ತಿದೆ. ಆದರೆ ಬಹಿರಂಗವಾಗಿ ಪ್ರತಿಭಟನೆ ನಡೆಸುವುದು ಅವರಿಗೆ ಅಸಾಧ್ಯ. ಅದರ ಪರಿಣಾಮ ಏನೆಂಬುದೂ ಅವರಿಗೆ ಗೊತ್ತಿದೆ. ೨೦೧೧ ರಲ್ಲಿ ಒಂದು ಬಹಿರಂಗ ಪ್ರತಿಭಟನೆ ನಡೆದಿತ್ತು. ಸರಕಾರ ಅದನ್ನು ಕಠಿಣವಾಗಿ ಹತ್ತಿಕ್ಕಿತು. ೧೧ ಜನ ಗುಂಡಿಗೆ ಸತ್ತರು. ಸುಮಾರು ೪೦-೫೦ ಜನರ ಬಂಧನವಾಯಿತು.
ಅದೇ ವರ್ಷ ” ಭ್ರಷ್ಟಾಚಾರ ತಡೆ ಸಮಿತಿ” ನಡೆಸಿದ ತನಿಖೆಯಲ್ಲಿ ಸಿಕ್ಕುಬಿದ್ದ ೨೦೦-೩೦೦ ಜನರಲ್ಲಿ ೧೧ ಜನ ರಾಜಕುಮಾರರಿದ್ದರು. ಡಜನ್ ಗಟ್ಟಲೆ ಮಾಜಿಮಂತ್ರಿಗಳಿದ್ದರು. ೨೦೦ ಕ್ಕೂ ಹೆಚ್ಚು ಉನ್ನತ ಅಧಿಕಾರಿಗಳು , ನೌಕರರು ಇದ್ದರು. ೨೦೨೧ ರಲ್ಲಿ ಮತ್ತೆ ೨೪೦ ಕ್ಕೂ ಹೆಚ್ಚು ಸರಕಾರಿ ನೌಕರರ ಬಂಧನವಾಯಿತು.

ಅರಸು ಸರಕಾರಕ್ಕೆ ವಿರೋಧ ಇಲ್ಲವೆಂದಲ್ಲ. ಅಂತಹ ನಾಲ್ಕು ಬಗೆಯ ವಿರೋಧಗಳನ್ನು ಗುರುತಿಸಲಾಗಿದೆ. ಸಾಂಪ್ರದಾಯಿಕ ಮೂಲಭೂತವಾದಿ ಇಸ್ಲಾಂ ನಿಷ್ಠರು ಆಧುನಿಕ ಪಾಶ್ಚಾತ್ಯ ಸುಧಾರಣೆಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಶಿಯಾ ಅಲ್ಪಸಂಖ್ಯಾತರೂ ವಿರೋಧಿ ಗುಂಪಿನಲ್ಲಿದ್ದಾರೆ. ವೈಚಾರಿಕ ವಲಯದಲ್ಲೂ ಅರಸನ ಆಡಳಿತದ ಸ್ವರೂಪ ಇಷ್ಟಪಡದವರಿದ್ದಾರೆ. ಮಾಧ್ಯಮ ಬಹಿರಂಗವಾಗಿ ವಿರೋಧಿಸುವ ಸ್ಥಿತಿಯಲ್ಲಿಲ್ಲ.

೧೯೫೩ ರಿಂದ ೧೯೬೪ ರವರೆಗೆ ಕಿಂಗ್ ಸೌದ್ ಆಡಳಿತ ಇತ್ತು. ಆದರೆ ಆತ ಅಸಮರ್ಥ ಮತ್ತು ಅದಕ್ಷನಾದುದರಿಂದ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟು ತಲೆದೋರಿದಾಗ ಬಲವಂತವಾಗಿ ಕೆಳಗಿಳಿಸಲಾಯಿತು. ೬೪ ರಿಂದ ೭೫ ರವರೆಗೆ ಕಿಂಗ್ ಫೈಸಲ್ ಆಡಳಿತದಲ್ಲಿ ಮತ್ತೆ ದೇಶ ಪ್ರಗತಿ ಕಂಡಿತು. ಆತ ಆಧುನಿಕತಾವಾದಿಯಾಗಿದ್ದ. ಅದಕ್ಕೆ ಸಮಪ್ರದಾಯಿಗಳ ವಿರೋಧವಿತ್ತು. ೭೫ ರಿಂದ ೮೨ ರವರೆಗೆ ಕಿಂಗ್ ಖಾಲಿದ್ ಆಡಳಿತದ ನಂತರ ಪ್ರಿನ್ಸಗ ಫಹದ್ ಅಧಿಕಾರಕ್ಕೆ ಬಂದಾಗ ಕೈಗಾರಿಕಾಕರಣಕ್ಕೆ ಆದ್ಯತೆ ನೀಡಲಾಯಿತು. ಆದರೆ ಅನಾರೋಗ್ಯದಿಂದಾಗಿ ಕಿಂಗ್ ಅಬ್ದುಲ್ಲಾ ಗೆ ಅಧಿಕಾರ ಬಿಟ್ಟುಕೊಡಬೇಕಾಯಿತು. ಈತನ ಅವಧಿಯಲ್ಲಿ ಸಾಕಷ್ಟು ಸುಧಾರಣಾ ಕಾರ್ಯಗಳು ನಡೆದವು. ಈಗಿನ ಕ್ರೌನ್ ಪ್ರಿನ್ಸ್ ಆಡಳಿತದಲ್ಲಿ ಸೌದಿ ಅರೇಬಿಯಾ ಹಿಂದಿನ ಹಲವು ಇಸ್ಲಾಮಿಕ್ ಧಾರ್ಮಿಕ ನಿಯಮಗಳಿಂದ ಹೊರಬಂದು ಸ್ವಾತಂತ್ರ್ಯದ ಗಾಳಿ ಬೀಸತೊಡಗಿತು. ಮಹಿಳೆಯರು ಅನೇಕ ನಿರ್ಬಂಧಗಳಿಂದ ಮುಕ್ತರಾದರು. ಮನೋರಂಜನೆಗೆ ಅವಕಾಶದ ಬಾಗಿಲು ತೆರೆಯಲಾಯಿತು. ವಿಷನ್ -೨೦೩೦ ರ ಮೂಲಕ ದೇಶವನ್ನು ಹೊಸ ಮಜಲಿಗೆ ಕೊಂಡೊಯ್ಯುವ ಪ್ರಯತ್ನ ಆರಂಭವಾಯಿತು. ಯೋಜನೆಗಳು ಒಂದೊಂದಾಗಿ ಕಾರ್ಯರೂಪಕ್ಕೆ ಬರತೊಡಗಿವೆ.

ಯುವಜನಾಂಗದ ಭವಿಷ್ಯ :
ವಾಸ್ತವವಾಗಿ ಸೌದಿ ಅರೇಬಿಯಾದ ಯುವಜನಾಂಗ ಒಂದು ಬಗೆಯ ಅನಿಶ್ಚಿತತೆ, ಹೊಯ್ದಾಟದಲ್ಲಿದ್ದಂತೆನಿಸುತ್ತದೆ. ಒಬ್ಬ ಪತ್ರಕರ್ತನಾಗಿ ಪರಿಸ್ಥಿತಿಯನ್ನು ವಿಶ್ಲೇಷಿಸಿ ನೋಡಿದಾಗ ನನಗೆ ಹಾಗೆನಿಸುತ್ತದೆ. ಏಕೆಂದರೆ ಇಲ್ಲಿರುವುದು ರಾಜಪ್ರಭುತ್ವ. ರಾಜಕೀಯ ಪಕ್ಷಗಳಿಲ್ಲ. ಶಾಸಕಾಂಗವಿಲ್ಲ. ಜನಪ್ರತಿನಿಧಿಗಳಿಲ್ಲ. ಎಲ್ಲವೂ ಅರಸುಪರಿವಾರದ ಕೈಯಲ್ಲಿದೆ. ಅಂದಾಗ ಯುವಜನಾಂಗಕ್ಕೆ ಅಧಿಕಾರದಲ್ಲಿ ಅವಕಾಶ ಸಿಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲವಷ್ಟೆ. ಹಾಗಿದ್ದರೆ ಯುವಜನರ ವಿಚಾರಗಳು ಏನೇ ಇದ್ದರೂ ಅವು ಅವರಲ್ಲೇ ಉಳಿದುಕೊಳ್ಳುವಂತಾಗುವುದು ಸಹಜ. ವಿಚಾರಗಳನ್ನು ಕಾರ್ಯರೂಪಕ್ಕೆ ತರುವುದಕ್ಕೆ ಯಾವ ದಾರಿಯೂ ಇಲ್ಲ. ರಾಜನ ಆಡಳಿತದ ವಿರುದ್ಧ ದನಿಯೆತ್ತುವ ಸಾಧ್ಯತೆಗಳಿಲ್ಲ. ಮಾಧ್ಯಮವೂ ಸ್ವತಂತ್ರವಲ್ಲ.

ಹಾಗಿದ್ದರೆ ದೇಶದ ಒಟ್ಟು ಜನಸಂಖ್ಯೆಯ ಶೇ. ೬೦ ರಷ್ಟಿರುವ ಯುವಜನಾಂಗದ ಭವಿಷ್ಯವೇನು ಎನ್ನುವ ಪ್ರಶ್ನೆ ಸಹಜ. ಸೌದಿ ಅರೇಬಿಯಾದಲ್ಲಿ ಶಿಕ್ಷಣದ ಗುಣಮಟ್ಟ ತೃಪ್ತಿಕರವೇನಲ್ಲ. ಅಲ್ಲದೆ ಯುವಜನರಲ್ಲಿ ಧೂಮಪಾನ ಮತ್ತು ಬೊಜ್ಜಿನ ಸಮಸ್ಯೆ ಬಹಳ ದೊಡ್ಡದಾಗಿದೆ. ಜೀವನ ವೆಚ್ಚದ ಪ್ರಮಾಣಕ್ಕೆ ತಕ್ಕ ವೇತನ ಇಲ್ಲ. ವೃತ್ತಿನೈಪುಣ್ಯವಿಲ್ಲದ್ದರಿಂದ ಉದ್ಯೋಗಾವಕಾಶಗಳು ವಿದೇಶೀ ಪರಿಣತರ ಪಾಲಾಗುತ್ತಿರುವ ಆತಂಕ ಯುವಜನರಲ್ಲಿದೆ. ಹಾಗೆಂದು ಯುವಜನರನ್ನು ಸರಕಾರ ಪೂರ್ತಿ ಅಲಕ್ಷಿಸುತ್ತಿದೆ ಎಂದೇನಲ್ಲ. ವಿಷನ್ ೨೦೩೦ ರಲ್ಲಿ ಯುವಜನಾಂಗದ ಸಾಮಾಜಿಕ ಬೆಳವಣಿಗೆಯ ದೃಷ್ಟಿಯಿಂದ ಕೆಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ವಿದೇಶೀಯರ ಅವಲಂಬನೆಯನ್ನು ಕಡಿಮೆ ಮಾಡುವ ವಿಚಾರವೂ ಇದೆ. ಆದರೆ ಅದು ಅಷ್ಟು ಸುಲಭವೂ ಅಲ್ಲ. ಅಂದರೆ ಯುವಜನಾಂಗಕ್ಕೆ ಇಲ್ಲಿ ಅವಕಾಶಗಳು ಸೀಮಿತವಾಗಿವೆಯೆನ್ನುವುದೇನೂ
ಸುಳ್ಳಲ್ಲ. ಭಾರತದಂತಹ ಇತರ ದೇಶಗಳಿಗೆ ಸೌದಿಯನ್ನು ಹೋಲಿಸುವಂತಿಲ್ಲ. ಸೌದಿಯ ಆಡಳಿತ ವ್ಯವಸ್ಥೆಗೆ ಒಂದು ಸೀಮಿತವಾದ ಚೌಕಟ್ಟಿದೆ. ಈಚಿನ ದಶಕಗಳಲ್ಲಿ ಆಧುನಿಕ ಜಗತ್ತಿನ ಬದಲಾವಣೆಗಳಿಗೆ ಮೈಯೊಡ್ಡುತ್ತಿರುವುದರಿಂದ ಮುಂದಿನ ಕೆಲ ದಶಕಗಳಲ್ಲಾದರೂ ಪರಿಸ್ಥಿತಿ ಇಲ್ಲಿಯ ಯುವಜನಾಂಗದ ಪಾಲಿಗೆ ಆಶಾದಾಯಕವಾಗಬಹುದೇ ? ಕಾದು ನೋಡಬೇಕು.

– ಎಲ್. ಎಸ್. ಶಾಸ್ತ್ರಿ