ಅರಬ್ ದೇಶಗಳ ಆರ್ಥಿಕ ವ್ಯವಸ್ಥೆ ನಿಂತಿರುವುದೇ ಪೆಟ್ರೋಲು, ಡೀಸೆಲ್ಲು, ನೈಸರ್ಗಿಕ ಅನಿಲಗಳ ನಿಕ್ಷೇಪಗಳ ಮೇಲೆ. ಸೌದಿ ಅರೇಬಿಯಾ ಸಹ ಅಂತಹ ದೇಶಗಳಲ್ಲೊಂದು , ಮಾತ್ರವಲ್ಲ, ಪ್ರಮುಖ ದೇಶವೂ ಹೌದು. ಈ ದೇಶದ ರಫ್ತಿನ ಶೇಕಡಾ ೯೦ ಪಾಲು ಪೆಟ್ರೋಲಿಯಂ ವಸ್ತುಗಳೇ ಮತ್ತು ದೇಶದ ಆದಾಯದ ಶೇ. ೭೦ ರಷ್ಟು ಈ ಮೂಲಕವೇ ಬರುವಂತಹದು. ಈ ಬೃಹತ್ ಪ್ರಮಾಣದ ವ್ಯವಹಾರವನ್ನೆಲ್ಲ ನಿರ್ವಹಿಸುವ ಸಂಸ್ಥೆಯೇ “ಅರಾಮ್ಕೊ”.
ಪೆಟ್ರೋಲ್, ಡೀಸೆಲ್ ಮತ್ತು ನೈಸರ್ಗಿಕ ಅನಿಲ ಉತ್ಪಾದನೆ ಮತ್ತು ವಿತರಣೆಯ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳುತ್ತಿರುವ ಅರಾಮ್ಕೋ ವಿಶ್ವದ ಎರಡನೆ ಅತಿದೊಡ್ಡ ಆದಾಯದ ಕಂಪನಿ. ಸೌದಿ ಅರೇಬಿಯಾದ ಅಧಿಕೃತ ರಾಷ್ಟ್ರೀಯ ಸಂಸ್ಥೆ. ಸೌದಿ ಪೆಟ್ರೋಲಿಯಂ ಮತ್ತು ಖನಿಜ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ಈ ಕಂಪನಿ ಅಸ್ತಿತ್ವಕ್ಕೆ ಬಂದು ಈಗ ೯೦ ವರ್ಷಗಳು. ಇದರ ಪ್ರಧಾನ ಕಚೇರಿ ಧಹ್ರಾನ್ ಎಂಬಲ್ಲಿದೆ.
ಮೊದಲು ಅಮೆರಿಕೆಯ ಜತೆ ಪಾಲುದಾರನಾಗಿದ್ದ ಈ ಕಂಪನಿ ೧೯೮೮ ರ ನಂತರ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ೨೦೨೨ ರಲ್ಲಿ ಈ ಕಂಪನಿಯ ಒಟ್ಟು ಆದಾಯ 535.188 ಶತಕೋಟಿ ಡಾಲರುಗಳು. ಈ ಕಂಪನಿಯಲ್ಲಿ ಸುಮಾರು 70,496 ಜನ ಕೆಲಸ ಮಾಡುತ್ತಾರೆ. ತೈಲ ಸಂಶೋಧನೆಗೆ, ಕಚ್ಚಾತೈಲ ಸಂಸ್ಕರಣೆ, ಸಂಗ್ರಹಣೆ, ಜಾಗತಿಕ ವಿತರಣೆ ಎಲ್ಲವನ್ನೂ ಈ ಕಂಪನಿ ನಿರ್ವಹಿಸುತ್ತಿದೆ. ಒಂದು ದಿನಕ್ಕೆ ಇದರ ತೈಲ ಸಂಸ್ಕರಣಾ ಸಾಮರ್ಥ್ಯ 5.4 ಮಿಲಿಯನ್ ಬ್ಯಾರೆಲ್. ಇಲ್ಲಿಯ ಘವಾರ್ ವಿಶ್ವದ ಅತಿದೊಡ್ಡ ತೈಲಕ್ಷೇತ್ರವಾಗಿದೆ. ಮೂರು ಪ್ರಮುಖ ಬಂದರುಗಳ ಮೂಲಕ ದಿನಕ್ಕೆ 6 ಮಿಲಿಯನ್ ಬ್ಯಾರೆಲ್ ತೈಲವನ್ನು ಜಗತ್ತಿನ ವಿವಿಧ ದೇಶಗಳಿಗೆ ಕಳಿಸಲಾಗುತ್ತದೆ.
ಅರೇಬಿಯನ್- ಅಮೇರಿಕನ್ ಶಬ್ದಗಳ ಮೊದಲ ಭಾಗ ಸೇರಿ ಅರಾಂ + ಕಂಪನಿ = ಅರಾಮ್ಕೊ. ಈಗ ಇದು ಸೌದಿ ಅರೆಬಿಯಾದ ಸ್ವತಂತ್ರ ತೈಲ ಮತ್ತು ಅನಿಲ ಉತ್ಪಾದನಾ ಸಂಸ್ಥೆ. ಇದರ ಕಾರ್ಯವ್ಯಾಪ್ತಿ ಜಗತ್ತಿನಾದ್ಯಂತ ಹರಡಿಕೊಂಡಿದೆ. ಇದು 6.8 ಟ್ರಿಲಿಯನ್ ಕ್ಯೂಬಿಕ್ ಮೀಟರು ನೈಸರ್ಗಿಕ ಅನಿಲ ಉತ್ಪಾದಿಸುತ್ತಿದ್ದು ನೈಸರ್ಗಿಕ ಅನಿಲದ ನಾಲ್ಕನೆಯ ಅತಿ ದೊಡ್ಡ ನಿಕ್ಷೆಪವನ್ನು ಹೊಂದಿದೆ. ಹಾಗೆಯೇ ವಿದ್ಯುತ್ ಉತ್ಪಾದನೆಯನ್ನೂ ಮಾಡುವ ಈ ಕಂಪನಿ 2030 ರ ವೇಳೆಗೆ 120 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ. ತೈಲದಿಂದ 40%, ನೈಸರ್ಗಿಕ ಅನಿಲದಿಂದ 52% ಹಾಗೂ ಉಗಿಯಿಂದ 8% ವಿದ್ಯುತ್ತನ್ನು ಉತ್ಪಾದಿಸಲಾಗುತ್ತಿದೆ.ಸೌದಿಯಲ್ಲಿ ಅಣುಶಕ್ತಿ ಮತ್ತು ಸೌರ ವಿದ್ಯುತ್ ಉತ್ಪಾದನೆಗಳನ್ನು ಮಾಡಲಾಗುತ್ತಿದೆ.
✒️ ಎಲ್ .ಎಸ್ .ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ.