ಸೌದಿ ಅರೇಬಿಯಾದ ಜನಸಂಖ್ಯೆ ಸುಮಾರು ೩೬ ದಶಲಕ್ಷದಷ್ಟು. ಇವರಲ್ಲಿ 14 ದಶಲಕ್ಷದಷ್ಟು ವಿದೇಶೀಯರು.( ೨.೨ ದಶಲಕ್ಷದಷ್ಟು ಭಾರತೀಯರಿದ್ದಾರೆ.) ಬೇರೆ ಯಾವ ದೇಶದವರಿದ್ದರೂ ಅವರೆಲ್ಲ ಇಲ್ಲಿ ಉದ್ಯೋಗಿಗಳು. ಸ್ಥಾನಿಕ ಪ್ರಜೆಗಳಿಗಿಂತ ಇವರಿಗೆ ವೇತನ ಜಾಸ್ತಿ. ಆದರೆ ಸ್ಥಾನಿಕರಿಗೆ ಇಲ್ಲಿ ವಲಸಿಗರಿಗಿಂತ ಹೆಚ್ಚಿನ ಸೌಲಭ್ಯ ಸವಲತ್ತುಗಳಿವೆ. ಶಿಕ್ಷಣ ಪೂರ್ತಿ ಉಚಿತ. ನಿವೃತ್ತಿ ಕಾಲಕ್ಕೆ ಇವರಿಗೆ ದೊಡ್ಡ ಮೊತ್ತದ ಹಣ ಮರಳಿ ಸಿಗುತ್ತದೆ. ಕೆಲಸ ಮಾಡುವಾಗ ಪ್ರತಿ ತಿಂಗಳು ಸರಕಾರ ಅವರ ವೇತನ ನೀಡುವುದರೊಂದಿಗೆ ವೇತನದ ಮುಕ್ಕಾಲು ಭಾಗದಷ್ಟು ಹಣ ಅವರ ಖಾತೆಗೆ ಹಾಕುತ್ತಿರುತ್ತದೆ. ಶೇ. ೭೦ ರಷ್ಟು ಉದ್ಯೋಗಿಗಳು ಸ್ಥಳೀಯರೇ. ವಲಸಿಗರ ಪ್ರಮಾಣವನ್ನು ಕಡಿಮೆ ಮಾಡಬೇಕೆಂಬ ಪ್ರಯತ್ನ ಸರಕಾರದ್ದು. ಆದರೆ ಅದು ಅಷ್ಟು ಸುಲಭವಾಗಿಲ್ಲ. ಏಕೆಂದರೆ ಸ್ಥಳೀಯರಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧ ಪಟ್ಟಂತೆ ವಿಷಯ ಪರಿಣಿತರ ಕೊರತೆ ಇದೆ. ಉನ್ನತ ಶಿಕ್ಷಣದ ಗುಣ ಮಟ್ಟ ಹೆಚ್ಚಿಸಬೇಕಾದ ಅಗತ್ಯವಿದೆ. ಆದ್ದರಿಂದ ವಲಸಿಗರನ್ನು ಅವಲಂಬಿಸಬೇಕಾದ ಅನಿವಾರ್ಯತೆಯೂ ಇದೆ. ಸರಕಾರಿ ನೌಕರರು‌ ಇಲ್ಲಿ ದಿನಕ್ಕೆ ಒಂದು ತಾಸಿಗಿಂತ ಹೆಚ್ಚು ಕೆಲಸ ಮಾಡುವುದಿಲ್ಲವೆಂಬ ದೂರು ಸಹ ಕೇಳಿ ಬರುತ್ತದೆ.

ಸೌದಿ ಅರೇಬಿಯಾದಲ್ಲಿ ಮಧ್ಯಮ ವರ್ಗದವರು ಸರಾಸರಿ ಆರರಿಂದ ಎಂಟು ಸಾವಿರ ರಿಯಾಲ್ ಮಾಸಿಕ ವೇತನದಲ್ಲಿ ಆರಾಮಾಗಿ ಜೀವನ ನಡೆಸಬಹುದು. ೧೦ ರಿಂದ ೧೫ ಸಾವಿರ ರಿಯಾಲ್ ಸಂಬಳ ಪಡೆಯುವವರು ಐಷಾರಾಮಿ ಜೀವನ ನಡೆಸಬಲ್ಲರು. ವೇತನ ಕರರಹಿತವಾಗಿರುವುದರಿಂದ ಉಳಿತಾಯ ಮಾಡುವುದು ಸಾಧ್ಯವಾಗುತ್ತದೆ. ಆದ್ದರಿಂದಲೇ ಇತರ ದೇಶದವರು‌ ಇಲ್ಲಿ ಕೆಲಸಕ್ಕೆ ಬರಲು ಹಾತೊರೆಯುತ್ತಾರೆ. ತಾಂತ್ರಿಕ ಪರಿಣಿತರಿಗೆ ಸಾಕಷ್ಟು ದೊಡ್ಡ ಮೊತ್ತದ ಸಂಬಳ ದೊರಕುತ್ತದೆ. ಸ್ವಂತ ಕಾರು ಇಲ್ಲದವರೇ ಇಲ್ಲಿ ಕಡಿಮೆ. ಪೆಟ್ರೋಲ್ ಡೀಸೆಲ್ ದರವೂ ಕಡಿಮೆ. ಇಲ್ಲಿಯೇ ಉತ್ಪಾದನೆಯಾಗುವುದು ತಾನೆ. ಬಡತನ ಇಲ್ಲವೇ ಇಲ್ಲ ಎಂದೇನಲ್ಲ. ಪ್ರಮಾಣ ತೀರಾ ಕಡಿಮೆ.

ದೇಶೀಯರೇ ಇರಲಿ, ವಿದೇಶೀಯರೇ ಇರಲಿ, ತಮ್ಮಷ್ಟಕ್ಕೆ ತಾವು‌ ಕೆಲಸ ಮಾಡಿಕೊಂಡು ಹೋಗುವವರಿಗೆ ಇಲ್ಲಿ ಯಾವ ತೊಂದರೆಯೂ ಇಲ್ಲ. ಆರಾಮಾಗಿ ಜೀವನ ನಡೆಸಬಹುದು. ಊರ ಉಸಾಬರಿ ಮಾಡುವವರಿಗಲ್ಲ ಈ ದೇಶ. ( ಅವೆಲ್ಲ ಭಾರತದಲ್ಲಿ ನಡೆಯುತ್ತದೆ). ಸಂಪೂರ್ಣ ರಾಜಪ್ರಭುತ್ವವಾದ್ದರಿಂದ ಮತ್ತು ಕಾನೂನು ನಿಯಮಗಳು ಕಠಿಣವಾಗಿರುವುದರಿಂದ ಪ್ರಜೆಗಳು ಮನಸ್ಸಿಗೆ ಬಂದಂತೆ ನಡೆದುಕೊಳ್ಳುವುದು ಸಾಧ್ಯವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಎನ್ನುವ ಪ್ರಶ್ನೆಯೇ ಇಲ್ಲ. ಆದರೆ ಆಡಳಿತದಿಂದ ತಾನಾಗಿ ತೊಂದರೆ ಉದ್ಭವಿಸಲಾರದು. ತೊಂದರೆ ತಂದುಕೊಳ್ಳುವುದು ಬಿಡುವುದು ಪ್ರಜೆಗಳ ಕೈಯಲ್ಲೇ ಇದೆ. ನಮ್ಮಲ್ಲಿಯ ಹಾಗೆ ರಾಜಕೀಯ ಪಕ್ಷಗಳ ಹಾರಾಟ, ರಾಜಕಾರಣಿಗಳ ಮೇಲಾಟ , ಪರಸ್ಪರ ದೂಷಣೆ, ಚುನಾವಣೆಯ ಅಬ್ಬರ, ಅಭ್ಯರ್ಥಿಗಳ ಉಬ್ಬರ ಯಾವುದೂ ಇಲ್ಲ. ಸರಕಾರ ಪೂರ್ತಿಯಾಗಿ ದೇಶದ ಅಭಿವೃದ್ಧಿಯ ಕಡೆಗೆ ಗಮನವಿಟ್ಟಿದೆ. ವಿಷನ್ -೨೦೩೦ ಯೋಜನೆಗಳ ಮೂಲಕ ಬಹಳ ದೊಡ್ಡ ಪ್ರಮಾಣದ ಬದಲಾವಣೆಯನ್ನು ನಿರೀಕ್ಷಿಸಲಾಗುತ್ತಿದೆ. ತೀವ್ರಗತಿಯಲ್ಲಿ ಯೋಜನೆಗಳ ಅನುಷ್ಠಾನ ಕಾರ್ಯ ನಡೆದಿದೆ. ಪ್ರಗತಿ ಕಾರ್ಯಗಳಿಗೆ ಅಡ್ಡಗಾಲು ಹಾಕುವ ಪ್ರಯತ್ನ ಇಲ್ಲಿ ನಡೆಯುವುದಿಲ್ಲ. ಇದರಿಂದಾಗಿ ಸೌದಿ ಅರೇಬಿಯಾ ಬಹಳ ವೇಗವಾಗಿ ಮುನ್ನಡೆಯುತ್ತಿದೆ.

ಮೊದಲೇ ಹೇಳಿದಂತೆ ಸೌದಿಗಳದು ಕುಟುಂಬ ಪ್ರಧಾನ ಜೀವನ ವ್ಯವಸ್ಥೆ. ಧಾರ್ಮಿಕ ಶ್ರದ್ಧೆಗೆ ಮಹತ್ವ. ಆದರೂ ದೊಡ್ಡ ದೊಡ್ಡ ಕುಟುಂಬಗಳಿಂದ ಕೂಡಿರುತ್ತಿದ್ದ ಹಿಂದಿನ ವ್ಯವಸ್ಥೆ ಈಗ ಸಡಿಲಾಗುತ್ತಿದೆ. ನಾವಿಬ್ಬರು, ನಮಗಿಬ್ಬರು ಎನ್ನುವ ಸಣ್ಣ ಕುಟುಂಬದತ್ತ ಒಲವು ಹೆಚ್ಚುತ್ತಿದೆ. ಈ ಮೊದಲು ಮಹಿಳೆಯರಿಗಿದ್ದ ಬಹಳಷ್ಟು ನಿರ್ಬಂಧಗಳನ್ನು ತೆಗೆದು ಹಾಕಿರುವುದರಿಂದ ಇಸ್ಲಾಂ ಧಾರ್ಮಿಕ ಕಟ್ಟುಪಾಡುಗಳಿಂದ ಹೊರಬಂದು ಆಧುನಿಕ ಜಗತ್ತಿನ ಬದಲಾವಣೆಗಳಿಗೆ ಹೊಂದಿಕೊಳ್ಳುವ ಮನಸ್ಥಿತಿ ರೂಪುಗೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಮುಕ್ತವಾಗಿ ಮನೋರಂಜನೆಗೆ ಅವಕಾಶ ದೊರಕಿರುವುದರಿಂದ ಆ ಸುಖವನ್ನು ಅನುಭವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಾನೂನಿನ ಭಯವಿರುವುದರಿಂದ ಅಪರಾಧ ಕೃತ್ಯಗಳು ಮಿತವಾಗಿವೆ. ಸ್ತ್ರೀಯರಿಗೆ ಇಲ್ಲಿ ಸುರಕ್ಷಿತತೆ ಇದೆ. ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಕಾಲಿಡುವ ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿರುವುದರಿಂದ ಕೆಲವೊಂದು ಕ್ಷೇತ್ರಗಳಲ್ಲಿ ಸರಕಾರದ ಆದಾಯವೂ ಹೆಚ್ಚಿದೆ. ಮೊದಲು ಬೇರೆ ದೇಶಗಳಿಂದ ಬರುವ ಮಹಿಳೆಯರು ಸಹ ಕಡ್ಡಾಯವಾಗಿ ಬುರ್ಖಾ ಧರಿಸಬೇಕಿತ್ತು.‌ಈಗ ಆ ನಿರ್ಬಂಧ ಇಲ್ಲದ್ದರಿಂದ ಪ್ರವಾಸಕ್ಕೆ ಬರುವ ಹೊರದೇಶದ ಮಹಿಳೆಯರ ಪ್ರಮಾಣವೂ ಹೆಚ್ಚಿದೆ. ಒಟ್ಟಾರೆ ಸೌದಿ ಅರೇಬಿಯಾದ ಬಾಹ್ಯ ಸ್ವರೂಪದಲ್ಲಿ ಗಮನಾರ್ಹವಾದ ಬದಲಾವಣೆ ಕಾಣುತ್ತಿದೆ.

️ಎಲ್. ಎಸ್. ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ