ಈ ಕತೆಗಳದೇ ಒಂದು
ಸ್ವಾರಸ್ಯಕರ ಕತೆ ( ಭಾಗ-೧)
ಬಾಲ್ಯದಲ್ಲಿ ನಮಗೆ ಕತೆಗಳ ಹುಚ್ಚು . ಅದಕ್ಕೆ ತಕ್ಕಂತೆ ಹಲವು ಬಗೆಯ ಕತೆ ಪುಸ್ತಕಗಳು ಸಿಗುತ್ತಿದ್ದವು. ಪಂಚತಂತ್ರ ಕತೆಗಳು, ಅಕಬರ- ಬೀರಬಲ್ಲರ ಕತೆಗಳು, ಇಸೋಪನ ನೀತಿಕತೆಗಳು, ಜಾತಕ ಕತೆಗಳು, ಅರೇಬಿಯನ್ ನೈಟ್ಸ್…ಸಿಂದಬಾದ್ ನ ನಾವಿಕ, ಅಲಿಬಾಬಾ ಚಾಲೀಸ್ ಚೋರ್, ಅಲ್ಲಾಉದ್ದೀನ್ ನ ದೀಪ….
ಇದೀಗ ನಾನು ಆ ಅರೇಬಿಯನ್ ಕತೆಗಳ ನಾಡಿನಲ್ಲೇ ಇದ್ದೇನಲ್ಲ…ಅದಕ್ಕೇ ಅದರ ಕುರಿತು ಇನ್ನಷ್ಟು ತಿಳಿಯುವ ಕುತೂಹಲ ಉಂಟಾಯಿತು. ವಾಸ್ತವದಲ್ಲಿ ಈ ಅರೇಬಿಯನ್ ನೈಟ್ಸ್ ಅಥವಾ ಸಾವಿರದೊಂದು ಕತೆಗಳಿಗೆ ಮೂಲವಾದದ್ದು ಭಾರತ ಮತ್ತು ಪರ್ಷಿಯನ್ ಕತೆಗಳೇ. ಸಾಮಾನ್ಯವಾಗಿ ಅರೇಬಿಯನ್ ನೈಟ್ಸ್ ಕತೆಗಳನ್ನೋದದವರು ಕಡಿಮೆ. ಅದರ ಅರೇಬಿಕ್ ಹೆಸರು “ಅಲ್ಫ್ ಲಾಯಲಾಹ್,ವಾ- ಲಾಯಲಾಹ್” ( ಅಂದರೆ ಸಾವಿರ ಮತ್ತು ಒಂದು ಕತೆಗಳು)
ಆಂಗ್ಲ ಭಾಷೆಗೆ ಬಂದಾಗ “ಅರೇಬಿಯನ್ ನೈಟ್ಸ್” ಅನಿಸಿಕೊಂಡಿತು. ಮೂಲ ಕತೆ ಕತೆಗಳನ್ನೋದುವ ಹವ್ಯಾಸವುಳ್ಳವರಿಗೆಲ್ಲ ಪರಿಚಿತ.
ಮೂಲತಃ ಇದು ಜಾನಪದ ಕಥೆಗಳ ಸಂಕಲನ. ಈ ಕತೆಗಳು ಹುಟ್ಟಿಕೊಂಡ ಬಗೆಯೇ ಸ್ವಾರಸ್ಯಕರ. ಶಹರ್ಯಾರ್ ಎಂಬಾತ ಸಾಸಾನಿಯನ್ ದೊರೆ. ಅವನಿಗೊಬ್ಬಳು ಸುಂದರ ರಾಣಿ. ಅವನ ಸಹೋದರ ಷಾ ಝೆಮನ್. ಒಮ್ಮೆ ರಾಣಿ ಒಬ್ಬ ನಿಗ್ರೋ ಸೇವಕನೊಡನೆ ಅನೈತಿಕ ಸಂಬಂಧ ಹೊಂದಿದ್ದನ್ನು ರಾಜ ನೋಡುತ್ತಾನೆ. ಅದಕ್ಕಿಂತ ಮೊದಲು ರಾಜನ ಕಿರಿಯ ಸಹೋದರನ ಪತ್ನಿ ಸಹ ಅದೇ ರೀತಿ ಅನೈತಿಕ ಸಂಬಂಧ ಹೊಂದಿದ್ದಳು ಮತ್ತು ಅವರಿಬ್ಬರನ್ನೂ ಆತ ಕೊಂದು ದೊರೆಯಿದ್ದಲ್ಲಿಗೆ ಬಂದಿರುತ್ತಾನೆ. ರಾಜ ತನ್ನ ರಾಣಿಯನ್ನು ಕೊಲ್ಲುತ್ತಾನೆ. ಅಷ್ಟೇ ಅಲ್ಲ, ಜಗತ್ತಿನ ಎಲ್ಲ ಹೆಂಗಸರೂ ಹೀಗೇ, ನಂಬಿಕೆಗೆ ಪಾತ್ರರಾದವರಲ್ಲ ಎಂಬ ಭಾವ ಅವನಲ್ಲಿ ದಟ್ಟವಾಗಿ ತುಂಬಿಕೊಂಡುಬಿಡುತ್ತದೆ. ಆತನಿಗೆ ಸ್ತ್ರೀಕುಲದ ಮೇಲೇ ದ್ವೇಷ ಹುಟ್ಟಿಕೊಳ್ಳುತ್ತದೆ ಮತ್ತು ಅವನು ತನ್ನ ವಜೀರನಿಗೆ ಹೇಳಿ ಕನ್ಯೆಯರನ್ನು ತರಿಸಿಕೊಂಡು ಮದುವೆಯಾಗಿ ರಾತ್ರಿ ಅವರನ್ನು ಭೋಗಿಸಿದ ನಂತರ ಕೊಲ್ಲಿಸುತ್ತಹೋಗುತ್ತಾನೆ. ಇದರಿಂದ ಭಯಭೀತರಾದವರು ಕುಟುಂಬಸಹಿತ ಊರು ಬಿಟ್ಟು ಹೋಗುತ್ತಾರೆ. ನಗರದಲ್ಲಿ ಕನ್ಯೆಯರೇ ಸಿಗದಂತಾಗುತ್ತದೆ. ವಜೀರನಿಗೆ ಅದರಿಂದ ಸಮಸ್ಯೆಯುಂಟಾಗುತ್ತದೆ. ರಾಜನಿಗೆ ಏನು ಹೇಳುವುದು ಎಂಬ ಚಿಂತೆಯಲ್ಲಿದ್ದಾಗ ಅವನ ಮಗಳು ಶಹರಾಜದ್( ಶೆಹರಜಾದೆ) ಎಂಬವಳು ತಂದೆಯಿಂದ ವಿಷಯ ತಿಳಿದುಕೊಂಡು ಅದಕ್ಕೊಂದು ಉಪಾಯ ಮಾಡುತ್ತಾಳೆ. ತನ್ನನ್ನೇ ರಾಜನಿಗೆ ಮದುವೆ ಮಾಡಿಕೊಡುವಂತೆ ಹೇಳುತ್ತಾಳೆ. ಮನಸ್ಸಿಲ್ಲದಿದ್ದರೂ ವಜೀರ ಬೇರೆ ದಾರಿಯಿಲ್ಲದೆ ಮಗಳನ್ನೇ ರಾಜನ ಬಳಿ ಕೊಂಡೊಯ್ದು ಒಪ್ಪಿಸುತ್ತಾನೆ. ಅವಳಿಗೊಬ್ಬಳು ತಂಗಿಯಿರುತ್ತಾಳೆ. ಅವಳ ಹೆಸರು ದುನಿಜಾದ್. ಅವಳನ್ನು ತಾನಿದ್ದಲ್ಲಿಗೆ ಕರೆಸಿಕೊಳ್ಳುತ್ತಾಳೆ.
ಶಹರಜಾದೆ ಬಹಳ ಬುದ್ಧಿವಂತಳು ಮತ್ತು ಓದಿಕೊಂಡವಳು. ಅವಳು ರಾತ್ರಿ ಅರಸನಿಗೆ ತಾನೊಂದು ಕತೆ ಹೇಳಲೇ ಎಂದು ಕೇಳುತ್ತಾಳೆ. ರಾಜ ಆಗಲಿ , ಹೇಳು ಎನ್ನುತ್ತಾನೆ. ಶಹರಜಾದೆ ರಾತ್ರಿ ಬಹಳ ಹೊತ್ತು ಕತೆ ಹೇಳುತ್ತಹೋಗುತ್ತಾಳೆ. ಮುಗಿಸುವುದಿಲ್ಲ. ಒಂದು ಕುತೂಹಲಕರ ಘಟ್ಟಕ್ಕೆ ತಂದು ರಾಜನನ್ನು ತುದಿಗಾಲಲ್ಲಿ ನಿಲ್ಲಿಸುತ್ತಾಳೆ. ಕತೆ ಮರುದಿನಕ್ಕೆ ಮುಂದುವರಿಯುತ್ತದೆ. ಹೀಗೇ ದಿನಕ್ಕೊಂದು ಹೊಸ ಕತೆ ಜೋಡಿಸುತ್ತ ಒಂದು ಸಾವಿರದ ಒಂದು ದಿನದತನಕ ಮರಣದಂಡನೆಯಾಗದಂತೆ ನೋಡಿಕೊಳ್ಳುತ್ತಾಳೆ. ಅಷ್ಟರಲ್ಲಿ ಅರಸನಿಗೆ ಪತ್ನಿಯಿಂದ ಮೂವರು ಮಕ್ಕಳು ಹುಟ್ಟಿರುತ್ತಾರೆ. ಅರಸನಿಗೆ ಅವಳನ್ನು ಕೊಲ್ಲುವ ಮನಸ್ಸಾಗುವುದಿಲ್ಲ…ಅವಳನ್ನು ಕ್ಷಮಿಸಿ ಜೀವಂತ ಉಳಿಸುತ್ತಾನೆ.
ಇದು ಒಂದು ಸ್ಥೂಲವಾದ ಕಥಾ ಹಂದರ. ಆದರೆ ಈ ಕೃತಿ ಏಕಕಾಲಕ್ಕೆ ರಚನೆಯಾದದ್ದಲ್ಲ. ಅನೇಕ ಶತಮಾನಗಳ ಅವಧಿಯಲ್ಲಿ ಕತೆಗಳು ಬೇರೆ ಬೇರೆ ದೇಶ, ಬೇರೆ ಬೇರೆ ಭಾಷೆಗಳಿಂದ , ಬೇರೆ ಬೇರೆ ಲೇಖಕರಿಂದ ಕತೆಗಳು ಸೇರಿಕೊಳ್ಳುತ್ತ ಬಂದಿದ್ದೆಂಬ ಅಭಿಪ್ರಾಯವಿದೆ. ಅಲ್ಲದೆ , ಮೊದಲು ಇದರಲ್ಲಿ ಸೇರಿಕೊಂಡ ಕತೆಗಳು ಪರ್ಷಿಯಾ ಮತ್ತು ಭಾರತಗಳದೆಂದು ವಿದ್ವಾಂಸರು ಹೇಳುತ್ತಾರೆ. ಮುಖ್ಯವಾಗಿ ಸಂಸ್ಕೃತದ ಪಂಚತಂತ್ರ – ತಂತ್ರೋಪಾಖ್ಯಾನ, ಜಾತಕ ಕಥೆಗಳಿಂದ ಪಡೆಯಲಾಗಿದ್ದು. ಅರೆಬಿಕ್ ಭಾಷೆಯಲ್ಲಿ ಮೊದಲ ಮುದ್ರಿತ ಆವೃತ್ತಿ ಹೊರಬಂದಿದ್ದು ೧೭೭೫ ರ ಸುಮಾರಿಗೆ. ೯-೧೦ ನೇ ಶತಮಾನದಲ್ಲಿ ಇರಾಕ್ ನಲ್ಲಿ ಅರಬ್ ಕಥೆಗಳನ್ನು ಸೇರಿಸಲಾಯಿತು. ೧೦ ನೇ ಶತಮಾನದ ನಂತರ ಸ್ವತಂತ್ರ ಕಥೆಗಳು ಸೇರಿಕೊಂಡವು. ೧೩ ನೇ ಶತಮಾನದ ನಂತರ ಸಿರಿಯಾ, ಇಜಿಪ್ತ ಕಥೆಗಳು ಸೇರಿಕೊಂಡವು. ಹೀಗೆ ಇದು ಹಿಗ್ಗುತ್ತ ಹೋಯಿತು. ಕ್ರಮೇಣ ಇಂಗ್ಲಿಷ್, ಲಾವೋ, ಥೈಲ್ಯಾಂಡ್, ಜಾವಾ, ತಮಿಳು ಮೊದಲಾದ ಭಾಷೆಗಳಲ್ಲಿ ಬಂದವು. ಅರೇಬಿಕ್ ನಲ್ಲಿ ಅತಿ ಹಳೆಯ ದಾಖಲೆ ಸಿಗುವುದು ೯ ನೇ ಶತಮಾನದಲ್ಲಿ. ೧೮೪೧ ರಲ್ಲಿ ಭಾರತದಲ್ಲಿ ಇದ್ದ ಈಸ್ಟ್ ಇಂಡಿಯಾ ಕಂಪನಿ ಕೊಲ್ಕತ್ತಾದಿಂದ ೧೦೦-೧೦೦ ಕತೆಗಳುಳ್ಳ ಎರಡು ಸಂಪುಟ ಹೊರತಂದಿತು. ಅಲ್ಲಾಉದ್ದೀನನ ದೀಪ, ಅಲಿಬಾಬಾ ಮತ್ತು ೪೦ ಕಳ್ಳರ ಕತೆಗಳೆಲ್ಲ ಸೇರಿಕೊಂಡಿದ್ದು ೧೭೦೪-೧೭ ರ ನಡುವೆ. ೨೦೦೮ ರಲ್ಲಿ ಪೆಂಗ್ವಿನ್ ದವರು ೩ ಸಂಪುಟ ಇಂಗ್ಲಿಷ್ ನಲ್ಲಿ ಹೊರ ತಂದರು. ೨೦೨೧ ರಲ್ಲಿ ಹೊಸ ಇಂಗ್ಲಿಷ್ ಭಾಷಾಂತರವನ್ನು ಯಾಸ್ಮಿನ್ ಸಿಲ್ ಅವರು ಪ್ರಕಟಿಸಿದ್ದಾರೆ.
ಕೃತಿಯ ಜನ್ಮದ ಇತಿಹಾಸ ಏನೇ ಇರಲಿ, ಜಗತ್ತಿನ ಅತ್ಯಂತ ಜನಪ್ರಿಯ ಕಥಾಮಾಲಿಕೆಯಾಗಿ ಈ ಅರೇಬಿಯನ್ ನೈಟ್ಸ್ ಪ್ರಸಿದ್ಧಿ ಪಡೆದಿರುವುದಂತು ನಿಜ. ಮಕ್ಕಳಿಗಷ್ಟೇ ಅಲ್ಲ, ಹಿರಿಯರಿಗೂ ಇದು ಪ್ರಿಯವಾದುದೆ. ಇದಕ್ಕೆ ಕಾರಣ ಆ ಕಥೆಗಳ ವೈವಿಧ್ಯತೆ ಮತ್ತು ಆಕರ್ಷಕ ನಿರೂಪಣೆ.
(ಭಾಗ-೨ ರಲ್ಲಿ ಮುಂದುವರಿಯುತ್ತದೆ)
️ ️ಎಲ್. ಎಸ್. ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ