ಸುಮಾರು ಏಳು ಲಕ್ಷ ಜನಸಂಖ್ಯೆ ಹೊಂದಿರುವ ಅಲ್ ಜುಬೇಲ್ ವ್ಯವಸ್ಥಿತ ಸ್ವರೂಪದಲ್ಲಿ ಬೆಳೆದ ಸ್ವಚ್ಛ ಸುಂದರ ನಗರ. ಇದು ವಿಶ್ವದ ಅತಿದೊಡ್ಡ ಔದ್ಯಮಿಕ ನಗರ, ಸಂಗಡ ಬಂದರುಗಳ ನಗರ- Port City /. ಎರಡು ಬಂದರುಗಳಿವೆ. ಒಂದು- Commercial port , ಇನ್ನೊಂದು- Industrial port. (ಮತ್ತೊಂದು ಮೀನುಗಾರಿಕಾ ಬಂದರವೂ ಇದೆ. )

ಮತ್ತೊಂದು ಪ್ರವಾಸ ಈ ಇಂಡಸ್ಟ್ರಿಯಲ್ ಸಿಟಿ ಮತ್ತು ಬೀಚುಗಳತ್ತ. ಕರ್ನಾಟಕದಲ್ಲಿ ಸಮುದ್ರ ಬೀಚುಗಳು ಸಾಕಷ್ಟಿವೆ. ಹೆಸರಿಗಷ್ಟೆ. ಯಾವುದೇ ಸೌಕರ್ಯ ಸೌಲಭ್ಯಗಳಿಲ್ಲದ ಬೀಚುಗಳವು. ಸಂಗಡ ಪ್ರವಾಸಿಗರೂ ಅದರ ಅಸ್ವಚ್ಛತೆಗೆ ಸಾಕಷ್ಟು ದೊಡ್ಡ ಕೊಡುಗೆ ನೀಡುತ್ತಾರೆ. ಆದರೆ ಕೇವಲ ಏಳು ಬೀಚುಗಳನ್ನು ಹೊಂದಿರುವ ಜುಬೇಲ್ ಆ ಬೀಚುಗಳನ್ನು ಎಷ್ಟು ಆಕರ್ಷಕವಾಗಿ ಮತ್ತು ಸ್ವಚ್ಛ- ಸುಸಜ್ಜಿತವಾಗಿ ಇಟ್ಟುಕೊಂಡಿದ್ದಾರೆಂದು ನೋಡಿದರೆ ಖುಷಿಯೂ ಆಗುತ್ತದೆ, ಇಲ್ಲಿಯ ಆಡಳಿತ ಮತ್ತು ಜನರ ಬಗ್ಗೆ ಮೆಚ್ಚುಗೆಯೂ ಆಗುತ್ತದೆ. ನಾವು ನೋಡಿದ್ದು ಎರಡು ಬೀಚುಗಳು. ಒಂದು – ಅಲ್- ನಖೀಲ್ ಬೀಚು. ಇನ್ನೊಂದು- ಫನತೀರ್ ಬೀಚು. ಇವೆರಡೂ ಬಹಳ ತೃಪ್ತಿ ಕೊಟ್ಟವು. ಇಂದು ರಜೆ ಬೇರೆ. ಸಾವಿರಾರು ಕಾರುಗಳು. ಆದರೆ ಅಚ್ಚುಕಟ್ಟಾದ ವ್ಯವಸ್ಥೆ ಮತ್ತು ಜನರ ಶಿಸ್ತಿನ ವರ್ತನೆಗಳಿಂದಾಗಿ ಎಲ್ಲೂ ಯಾವ ಸಮಸ್ಯೆಯೂ ಉಂಟಾಗುವುದಿಲ್ಲ. ಅಲ್ನಖೀಲ್ ಬೀಚು ೧. ೫ ಕಿ. ಮೀ. ಉದ್ದವಿದೆ. ಮಕ್ಕಳಿಂದ ಮುದುಕರತನಕ ಎಲ್ಲರಿಗೂ ಖುಷಿ ಕೊಡುವ ವಾತಾವರಣ. ಜಾಗಿಂಗ್ , ಬೋಟಿಂಗ್, ಫಿಶಿಂಗ್ , ಸ್ವಿಮ್ಮಿಂಗ್ , ಮಕ್ಕಳ ಆಟಗಳು ಎಲ್ಲವೂ ಇವೆ. ಮರುಭೂಮಿಯೆಂದೇ ಅನಿಸದಂತೆ ಹಸಿರು ಬೆಳೆಸಿದ್ದಾರೆ. ಅಲ್ಲಲ್ಲಿ ಕಾರಂಜಿಗಳು, ಹೂಗಳು, ಕಾಫಿ ಕೆಫೆಗಳು ಏನೆಲ್ಲವೂ ಇವೆ.

ಜುಬೇಲ್ ನಗರದ ಒಳಗೇ ಐದು ಬೀಚುಗಳಿದ್ದು ಎರಡು ಸ್ವಲ್ಲ ಹೊರಗೆ ಇವೆ. ಅಲ್ ನುಝಾ ಎಂಬ ಬೀಚು ಅತ್ಯಂತ ವಿಶಾಲವಾಗಿದ್ದು ೩೦೦ ವರ್ಷ ಹಳೆಯ ಅಲ್ ದಾಫಿ ಅರಣ್ಯ ಹುಲ್ಲುಗಾವಲಿನಿಂದ ಕೂಡಿದೆ. ಇವಲ್ಲದೇ ಅನೇಕ ವಿಶಾಲವಾದ, ಸುಂದರವಾದ ಪಾರ್ಕುಗಳಿವೆ.

ಜುಬೇಲ್ ಒಂದು ಔದ್ಯಮಿಕ ಮತ್ತು ಬಂದರು ನಗರವಾಗಿದ್ದು ಸಾಕಷ್ಟು ಬೆಳೆದಿದ್ದರೂ ಅಲ್ಲಿ ಜನದಟ್ಟಣೆ ಅಥವಾ ಯಾವ ಅಸ್ತವ್ಯಸ್ತ ಬೆಳವಣಿಗೆ ಕಂಡುಬರುವುದಿಲ್ಲ. ಅದು ಮೆಚ್ಚಬೇಕಾದ ವಿಷಯ. ವಿಶಾಲವಾದ, ಸ್ವಚ್ಛವಾದ ರಸ್ತೆಗಳು ಜುಬೇಲ್ ನಗರದ ವೈಶಿಷ್ಟ್ಯ.

ಸೌದಿಯಲ್ಲಿ ಕಾರುಗಳ ಸಂಖ್ಯೆ ವಿಪರೀತ. ಮೋಟರ್ ಬೈಕುಗಳು , ಅವೂ ಬಹಳ ದುಬಾರಿ ಬೆಲೆಯವು , ಬಹಳ ಅಪರೂಪವಾಗಿ ಕಣ್ಣಿಗೆ ಬೀಳುತ್ತವೆ. ಸ್ಕೂಟರು, ಆಟೊರಿಕ್ಷಾಗಳಂತೂ ಇಲ್ಲವೇಇಲ್ಲ. ಎಲ್ಲ ವಾಹನಗಳು ಡೀಜೆಲ್ ಚಾಲಿತ. ಬಾಡಿಗೆ ಟ್ಯಾಕ್ಸಿಗಳಿವೆ. ಸರಕಾರಿ ಬಸ್ಸುಗಳು ಆಗಾಗ ಕಾಣಸಿಗುತ್ತವೆ. ಥೈಲ್ಯಾಂಡ್ ಹಾಗೆ ಬಸ್ ಗಳು ವರ್ಣರಂಜಿತವೇನಲ್ಲ. ಬಿಳಿ ಅಥವಾ ಡೀಸೆಂಟ್ ಕಲರ್- ಲ್ಲಿರುತ್ತವೆ.

ವಾಹನ ಚಾಲನೆ ಸೌದಿಯಲ್ಲಿ ಸುಲಭವೂ ಹೌದು, ಕಷ್ಟವೂ ಹೌದು. ಕಾರುಗಳು ಸಲೀಸಾಗಿ ೧೨೦-೧೪೦ ಕಿ.ಮಿ. ವೇಗದಲ್ಲಿ ಹೋಗಬಲ್ಲವು. ನಮ್ಮ ದೇಶದ ಹಾಗೆ ಕಿವಿ ಕಿವುಡಾಗಿಸುವ ಹಾರ್ನ್ ಶಬ್ದ ಈತನಕ ನಾನು ಎಲ್ಲಿಯೂ ಒಮ್ಮೆಯೂ ಕೇಳಿಲ್ಲ. ಪದೇಪದೇ ಬ್ರೆಕ್ ಹಾಕುವ ಅಗತ್ಯವೂ ಇಲ್ಲ. ಇದಕ್ಕೆಲ್ಲ ಮುಖ್ಯ ಕಾರಣ ನನಗನಿಸುವ ಹಾಗೆ ಇಲ್ಲಿಯ ಬಿಗಿ ಕಾನೂನು ನಿಯಮಗಳು. ಹಾಗಂತ ಇಲ್ಲಿ ಎಲ್ಲೂ ಒಬ್ಬ ಪೋಲೀಸನೂ ಕಾಣಿಸುವುದಿಲ್ಲ. ಸೀಟಿ ಊದುವುದಿಲ್ಲ. ರಸ್ತೆಯಲ್ಲಿ ವಾಹನ ನಿಲ್ಲಿಸಿ ತಪಾಸಣೆ ನಾಟಕ ಮಾಡಿ ದುಡ್ಡಿಗೆ ಕೈಚಾಚುವುದಿಲ್ಲ. ಲಾಠಿ ತೋರಿಸುವುದಿಲ್ಲ. ಬೆದರಿಸುವುದಿಲ್ಲ. ದಂಡದ ರಿಸೀಟ್ ತೆಗೆಯುವುದಿಲ್ಲ. ಸುಳ್ಳು ಕೇಸು ಹಾಕುವುದಿಲ್ಲ.

ಎಲ್ಲವೂ ರಸ್ತೆ ಸಂಕೇತಗಳ ಮೂಲಕ ಆಟೊಮೆಟಿಕ್ ಆಗಿ ನಡೆಯುತ್ತವೆ. ಸ್ವಲ್ಪ ನಿಯಮ ಉಲ್ಲಂಘಿಸಿದರೂ ದೊಡ್ಡ ದಂಡ ಬೀಳುತ್ತದೆ. ನಾವು ದಂಡ ಕೊಡಬೇಕಾದ್ದೇನಿಲ್ಲ. ತನ್ನಿಂದ ತಾನೇ ನಮ್ಮ ಅಕೌಂಟ್ ನಿಂದ ಕಟ್ ಆಗಿರುತ್ತದೆ. ಸುಮಾರು ೩೦೦೦ ರಿಯಾಲ್ ಅಂದರೆ ೬೦ ಸಾವಿರ ರು. ತನಕವೂ ದಂಡ ತೆರಬೇಕಾಗುತ್ತದೆ. ಅದಕ್ಕೇ ಜನ ನಿಯಮ ಉಲ್ಲಂಘಿಸಲು ಹೆದರುತ್ತಾರೆ. ಅದು ತನ್ನಿಂದ ತಾನೇ ಶಿಸ್ತನ್ನು ತಂದುಕೊಡುತ್ತದೆ.

ಎಲ್ಲದಕ್ಕೂ ಭಾರತವನ್ನು ಹೋಲಿಸಿ ಟೀಕಿಸುವುದು ಇಷ್ಟವಿಲ್ಲದ ಸಂಗತಿ. ಆದರೇನು ಮಾಡುವುದು? ಟೀಕಿಸದೇ ಇರುವುದೂ ಕಷ್ಟ. ನಮ್ಮ ಜನ ಶಿಸ್ತು ಕಲಿಯುವುದು , ನಮ್ಮ ಸರಕಾರಿ ಆಡೞಿತ ಸುಧಾರಿಸುವುದು ಎರಡೂ ಗಣಪತಿಗೆ ಮದುವೆ ಆದಾಗಲೇ.

️ ️ಎಲ್. ಎಸ್. ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ