ಬೌಲ್ ವರ್ಲ್ಡ್ ಸಿಟಿ ಎಂಬ ಅದ್ಭುತ ಮಾಯಾಲೋಕ. ಒಂದೇ ಎರಡೇ, ಯಾವುದನ್ನು ನೋಡೋದು, ಯಾವುದನ್ನು ಬಿಡೋದು ಎಂದೇ ಗೊತ್ತಾಗದ ಗೊಂದಲದಲ್ಲಿ ಸಿಲುಕಿಬಿಡುತ್ತೇವೆ. ವಂಡರ್ ಗಾರ್ಡನ್ ಎಂಬ ಮತ್ತೊಂದು ಅದ್ಭುತ ಲೋಕ ಇದೆ ಅದು ಸಹಾ ಜನರನ್ನು ಮೋಡಿಗೊಳಪಡಿಸುತ್ತದೆ. ನೂರಾರು ಎಕರೆ ಜಾಗದಲ್ಲಿ ಹರಡಿಕೊಂಡ ಈ ಮಾಂತ್ರಿಕ ಮನೋರಂಜನಾ ಉದ್ಯಾನವನದಲ್ಲಿ ಮೂರು ವಲಯಗಳಿವೆ. ದಿನಾಲು ಐದು ಸಾವಿರಕ್ಕೂ ಹೆಚ್ಚು ಜನ ಬರುತ್ತಾರೆ.
ಸೌದಿ ಅರೇಬಿಯಾಕ್ಕೆ ಬರುವವರು ನೋಡಲೇಬೇಕಾದ ಒಂದು ಅದ್ಭುತ ಆಕರ್ಷಣೆ ಈ ಬೌಲವರ್ಡ್ ಸಿಟಿ. ಅದ್ಭುತ ಎಂಬ ಶಬ್ದಕ್ಕೆ ಅರ್ಥ ಕೊಡುವಂತಹದು.
ರಾಜಧಾನಿ ರಿಯಾಧ ಮಹಾನಗರದ ಮಧ್ಯೆ ಇರುವ ಈ ಮಾಯಾಲೋಕ ಸುಮಾರು 22೦ ಎಕರೆ ( 89 ಹೆಕ್ಟೇರ್) ಸ್ಥಳದಲ್ಲಿ ವ್ಯಾಪಿಸಿಕೊಂಡಿದೆ. ಮನೋರಂಜನೆಯ ಪರಾಕಾಷ್ಠೆಯನ್ನಿಲ್ಲಿ ಕಾಣಬಹುದು. ವಿಶ್ವದ ಹತ್ತು ದೇಶಗಳ ಸಂಸ್ಕೃತಿ, ಜನಜೀವನಗಳ ಪ್ರತಿಬಿಂಬ ಇಲ್ಲಿ ಕಾಣಸಿಗುತ್ತದೆ. ನ್ಯೂಯಾರ್ಕ್ ನ ಸುಪ್ರಸಿದ್ಧ ಟೈಮ್ಸ್ ಸ್ಕ್ವೇರ್ ಮಾದರಿಯ ಸಹಿತ ಯುಎಸ್.ಎ, ಫ್ರಾನ್ಸ್, ಭಾರತ, ಚೀನಾ,ಜಪಾನ್, ಸ್ಪೇನ್ , ಮೆಕ್ಸಿಕಿ,ಮೊರಾಕ್ಕೊ, ಇಟಲಿ, ಗ್ರೀಸ್ ಉಪವಲಯಗಳನ್ನೊಳಗೊಂಡಿದ್ದು. ಒಮ್ಮೆ ಇಲ್ಲಿ ಒಳಹೊಕ್ಕರೆ ಇಡೀ ಜಗತ್ತನ್ನೇ ನೋಡಿದಂತೆ. ರೆಸ್ಟೋರೆಂಟ್ ಗಲು, ಹೊರಾಂಗಣ ಚಿತ್ರಮಂದಿರಗಳು, ಕ್ರೀಡೆ, ಸಂಗೀತ, ಕೆಫೆಗಳು, ಹುಕ್ಕಾಲಾಂಜ್, ಕಣ್ಣು ಕೋರೈಸುವ ಡಿಸ್ಪ್ಲೇಗಳು, ಸಂಗೀತಕಾರಂಜಿಗಳು, ನೃತ್ಯ ಕಾರಂಜಿಗಳು, ಡಿಸ್ನಿಲ್ಯಾಂಡ್ , ಸ್ಟುಡಿಯೋಗಳು, ಒಂದೇ ಎರಡೇ, ಯಾವುದನ್ನು ನೋಡೋದು, ಯಾವುದನ್ನು ಬಿಡೋದು ಎಂದೇ ಗೊತ್ತಾಗದ ಗೊಂದಲದಲ್ಲಿ ಸಿಲುಕಿಬಿಡುತ್ತೇವೆ.
ಒಂದು ವಿಶೇಷವೆಂದೇ ಇಲ್ಲಿ ಒಳಗೆ ಹೋಗಲು ಯಾವುದೇ ಪ್ರವೇಶಧನ( ಟಿಕೆಟ್ )ಇಲ್ಲ. ಉಚಿತ. ಒಳಗೆ ಹೋದ ನಂತರ ನಿಮಗೆ ಬೇಕಾದದ್ದರ ಬಗ್ಗೆ ಖರ್ಚು ಮಾಡುವುದು ನಿಮಗೆ ಬಿಟ್ಟಿದ್ದು. ಇದನ್ನು 2022 ರಲ್ಲಿ ಆರಂಭಿಸಲಾಗಿದ್ದು, ” ಜನರಲ್ ಎಂಟರ್ಟೈನ್ಮೆಂಟ್ ಆಥಾರಿಟಿ” ಮೂಲಕ ನ್ಯಾಶನಲ್ ಈವೆಂಟ್ಸ್ ಸೆಂಟರ್ ನಡೆಸುತ್ತದೆ. ಇಲ್ಲಿರುವ ಸಾವಿರಾರು ಅಂಗಡಿಗಳ ಬಾಡಿಗೆಯ ಹಣದ ಮೇಲೇ ಖರ್ಚುವೆಚ್ಚ ನಿರ್ವಹಿಸಲಾಗುತ್ತದೆ. ಸಮಸ್ಯೆ ಏನೆಂದರೆ ಇದನ್ನು ಪೂರ್ತಿಯಲ್ಲ, ಅರ್ಧ ನೋಡಲೂ ನಮಗೆ ಸಮಯ ಸಾಕಾಗುವುದಿಲ್ಲ. ಸುತ್ತ ತಿರುಗಾಡಿ ನೋಡಲು ಚಿಕ್ಕ ಬಾಡಿಗೆ ವಾಹನಗಳಿವೆ.
ಇಲ್ಲಿಯ ದೃಶ್ಯ ವೈಭವವನ್ನು ನೋಡಿಯೇ ಅರಿಯಬೇಕು. ” ಪಲವುಂ ನಾಲಿಗೆಯುಳ್ಳವಂ ಬಣ್ಣಿಸಲ್ಕಾರನೀ ನೆಲನಂ , ಮತ್ತಿನ ಮಾನಿಸರ್ ಪೊಗಳಲೇನಂ ಬಲ್ಲರ್…” ಎಂಬ ನಮ್ಮ ಕನ್ನಡ ಕವಿವಾಣಿ ನೆನಪಾಗದಿರಲಿಲ್ಲ. ಅದಕ್ಕೇ ವಿಡಿಯೋದ ಮೂಲಕ ಕೆಲವು ದೃಶ್ಯ ನೋಡಬಹುದು. ಆಕಾಶಗಾಮಿ ಟ್ರಾಲಿಗಳಲ್ಲಿ ಕುಳಿತೂ ನೋಡಬಹುದು.
ಮುಖ್ಯವಾಗಿ ಬೌಲ್ ವರ್ಲ್ಡ್ ಸಿಟಿ ನಿರ್ಮಾಣದಿಂದ ರಿಯಾಧ ಗೆ ಬರುವ ಪ್ರವಾಸಿಗರ ಪ್ರಮಾಣ ಬಹೞ ಹೆಚ್ಚಿದೆ. ಸಂಗಡ ಆದಾಯವೂ ಹೆಚ್ಚಿದೆ. ದಿನಾಲು ಹತ್ತಾರು ಸಾವಿರ ಜನ ಬರುತ್ತಾರೆ. ಆದರೂ ಶಿಸ್ತು, ಸ್ವಚ್ಛತೆ ಎಲ್ಲ ಇದೆ. ಆರಾಮಾಗಿ ನೋಡಬಹುದು. ಗದ್ದಲ ಗೊಂದಲ ಇಲ್ಲ. ಎಲ್ಲ ಸೌಕರ್ಯಗಳಿವೆ. ಪ್ರವಾಸೋದ್ಯಮವನ್ನು ಬೆಳೆಸುವಲ್ಲಿ ಇದು ಬಹಳ ಮಹತ್ವದ ಪಾತ್ರ ನಿರ್ವಹಿಸುತ್ತಿದೆ.
ಸೌದಿ ಪ್ರವಾಸಾನುಭವ-4
ಮತ್ತೊಂದು ಮಾಯಾಲೋಕದಲ್ಲಿ ವಿಹಾರ
ರಿಯಾಧ್ ನಲ್ಲಿ ನಮ್ಮ ಮೊದಲ ದಿನ ಬೌಲ್ ವರ್ಲ್ಡ್ ಮಾಯಾಲೋಕದಲ್ಲಿ ಕಳೆಯಿತಾದರೆ ಎರಡನೆಯ ದಿನ ವಂಡರ್ ಗಾರ್ಡನ್ ಎಂಬ ಅದ್ಭುತ ಪ್ರಪಂಚ ನಮ್ಮನ್ನು ಮೈಮರೆಯುವಂತೆ ಮಾಡಿತು. ಇಲ್ಲಿಯ ಕೆಲವೊಂದು ಆಟದ ಸಾಮಗ್ರಿಗಳು ಭಾರತದಲ್ಲೂ ಕಂಡುಬರಬಹುದು. ಆದರೆ ಹಲವು ಹೊಸ ಸಂಗತಿಗಳೂ ಇಲ್ಲಿವೆ.
ನೂರಾರು ಎಕರೆ ಜಾಗದಲ್ಲಿ ಹರಡಿಕೊಂಡ ಈ ಮಾಂತ್ರಿಕ ಮನೋರಂಜನಾ ಉದ್ಯಾನವನದಲ್ಲಿ ಮೂರು ವಲಯಗಳಿವೆ. ದಿನಾಲು ಐದು ಸಾವಿರಕ್ಕೂ ಹೆಚ್ಚು ಜನ ಬರುತ್ತಾರೆ.
ಮುಖ್ಯವಾಗಿ ಫ್ಲೆಮಿಂಗೋ ಕೊಕ್ಕರೆಗಳ ಕೊಳ, ಚಿಟ್ಟೆವನ , ವೈವಿಧ್ಯಮಯ ಸಸ್ಯಾಕೃತಿಗಳು, 7೦ ಕ್ಕೂ ಹೆಚ್ಚು ಸವಾರಿಗಳು, ದೆವ್ವದಮನೆಗಳು, ಮತ್ತಿತರ ರಂಜನೀಯ ಸಂಗತಿಗಳು ಗಮನ ಸೆಳೆಯುತ್ತವೆ.
ಇಲ್ಲಿ ಪ್ರವೇಶಕ್ಕೆ ಟಿಕೆಟ್ ಇದೆ. ಒಬ್ಬರಿಗೆ ವಾರಾಂತ್ಯದಲ್ಲಿ 5೦ ರಿಯಾಲ್, ಉಳಿದ ದಿನ 3೦ ರಿಯಾಲ್ ಪಡೆಯಲಾಗುತ್ತದೆ. ( ಬೌಲವರ್ಲ್ಡ್ ನಲ್ಲಿ ಪ್ರವೇಶಧನವಿರಲಿಲ್ಲ. ).
ಸೌದಿಯಲ್ಲೀಗ ಮಹಿಳೆಯರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿರುವುದರಿಂದ ಇಲ್ಲಿ ಬರುವವರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರೇ.