ಸೌದಿ ಅರಸರು ಕಲೆ ಸಾಹಿತ್ಯಕ್ಕೆ ತುಂಬ ಪ್ರೋತ್ಸಾಹ ಕೊಡುತ್ತ ಬಂದಿದ್ದಾರೆ. ಅವರ ಸಂಸ್ಕೃತಿ ಮತ್ತು ಮಾಹಿತಿ ಸಚಿವಾಲಯ ಕಲೆಯನ್ನು ಪ್ರೋತ್ಸಾಹಿಸಲು ಸಾಕಷ್ಟು ವ್ಯಾಪಕವಾದ ಯೋಜನೆಗಳನ್ನು ಹಾಕಿಕೊಂಡಿದೆ. ತಮ್ಮ ದೇಶದ ಜಾನಪದ ಕಲೆ ಕಾವ್ಯ ಮತ್ತು ಪುರಾತನ ದಾಖಲೆಗಳನ್ನು ರಕ್ಷಿಸಿಡುವ ವಿಚಾರದಲ್ಲಿ ಸಚಿವಾಲಯ ವಿಶೇಷ ಲಕ್ಷ್ಯ ವಹಿಸುತ್ತದೆ. ಕೆಲ ಹಳೆಯ ಅರಮನೆಗಳನ್ನೇ ಮ್ಯೂಸಿಯಂ ಆಗಿ ಮಾಡಲಾಗಿದೆ. ದೇಶದ ವಿವಿಧ ಪ್ರಾಂತಗಳಲ್ಲೂ ಮ್ಯೂಸಿಯಂ ಗಳಿವೆ. ಸರಕಾರದ ಉದ್ದೇಶಕ್ಕೆ ಪೂರಕವಾಗಿ ಕೆಲವು ಸಂಸ್ಥೆಗಳೂ ಈ ಕೆಲಸ ಮಾಡುತ್ತಿವೆ. ಕ್ಯಾಲಿಗ್ರಫಿಯಲ್ಲದೆ , ಪ್ರಾಚೀನ ವಾಸ್ತುಶಿಲ್ಪ, ಪ್ಲಾಸ್ಟಿಕ್ ಕಲೆಗಳ ರಕ್ಷಣೆಗೂ ಮಹತ್ವ ನೀಡಲಾಗಿದೆ. ಅದಕ್ಕೇ ಪ್ರತ್ಯೇಕ ವ್ಯವಸ್ಥೆ ಇದೆ.
ಜನಾದ್ರಿ ಉತ್ಸವ
**************
ಪ್ರತಿ ವರ್ಷ ಫೆಬ್ರುವರಿ ೧೨ ರಿಂದ ೨೬ ರವರೆಗೆ ಈ ಜನಾದ್ರಿ ರಾಷ್ಟ್ರೀಯ ಉತ್ಸವ ಬಹಳ ಅದ್ದೂರಿಯಾಗಿ ನಡೆಸಲಾಗುತ್ತದೆ. ಲಕ್ಷಗಟ್ಟಲೆ ಜನರನ್ನು ಇದು ಆಕರ್ಷಿಸುತ್ತದೆ. ಸಾಂಪ್ರದಾಯಿಕ ಒಂಟೆಗಳ ಓಟದೊಂದಿಗೆ ಪ್ರಾರಂಭವಾಗುವ ಈ ಉತ್ಸವದಲ್ಲಿ ಪ್ರಾಚೀನ ಕಾಲದಿಂದ ಇಂದಿನವರೆಗಿನ ಕರಕುಶಲವಸ್ತುಗಳ ಪ್ರದರ್ಶನ, ಸಾಂಸ್ಕೃತಿಕ ಕಲಾಪ್ರದರ್ಶನಗಳು ನಡೆಯುತ್ತವೆ. ದೇಶದ ಖ್ಯಾತ ಕವಿಕಲಾವಿದರು ಭಾಗವಹಿಸುತ್ತಾರೆ. ಸೌದಿಅರೇಬಿಯಾದ ರಾಷ್ಟ್ರೀಯ ಜನರ ಅಭಿಮಾನದ ಸಂಕೇತವಾಗಿದೆ ಈ ಹಬ್ಬ.
ಪ್ರತಿ ಜುಲೈನಲ್ಲಿ ರಿಯಾದ್ ಉತ್ಸವ ನಡೆಯುತ್ತದೆ. ಅದೇ ರೀತಿ ಎರಡು ವರ್ಷಕ್ಕೊಮ್ಮೆ ಬಹಳ ದೊಡ್ಡ ಪ್ರಮಾಣದ ಆಹಾರ ಉತ್ಸವ ನಡೆಯುತ್ತದೆ.
ಕತ್ತಿ ನೃತ್ಯ
*******
ಅಲ್ ಅರ್ಧಾ ಅಥವಾ ಕತ್ತಿ ನೃತ್ಯ ಇಲ್ಲಿಯ ರಾಷ್ಟ್ರೀಯ ಪಾರಂಪರಿಕ ನೃತ್ಯ. ಹಿಂದಿನ ಬೆಡೋಯಿನ್ ಬುಡಕಟ್ಟು ಜನಾಂಗದಿಂದ ಬಂದಂತಹ ಪರಂಪರಾಗತ ಜಾನಪದ ಮಾದರಿಯ ನೃತ್ಯಪ್ರಕಾರ ಇದು.‌ ಇದು ಪುರುಷರಷ್ಟೇ ಮಾಡುವ ನೃತ್ಯ. ಸಾಂಪ್ರದಾಯಿಕ ಉಡುಪಿನೊಂದಿಗೆ ಕತ್ತಿಗಳನ್ನು ಹಿಡಿದು ನರ್ತಿಸುವಾಗ ಹಾಡುಗಾರರು ಹಾಡುತ್ತಾರೆ ಮತ್ತು ಡ್ರಮ್ ಬಾರಿಸುತ್ತಾರೆ.‌ ವಿದೇಶಿ ಗಣ್ಯ ಅತಿಥಿಗಳು ಬಂದಾಗ ಈ ನೃತ್ಯವನ್ನು ಅವರಿಗಾಗಿ ಪ್ರದರ್ಶಿಸಲಾಗುತ್ತದೆ. ಅಲ್ ಸಿಹ್ಬಾ, ಮಿಜ್ಮಾರ, ಸಮ್ರಿ ಮೊದಲಾದ ಇತರ ಸಂಗೀತ ನೃತ್ಯಪ್ರಕಾರಗಳೂ ಇವೆ.
ಸೌದಿ ಅರೇಬಿಯಾ ಸೊಸೈಟಿ ಫಾರ್ ಕಲ್ಚರ್ & ಆರ್ಟ್ ೧೯೭೨ ರಿಂದ ಕಾರ್ಯ ನಿರ್ವಹಿಸುತ್ತದೆ. ಕಿಂಗ್ ಫೈಸಲ್ ಫೌಂಡೇಶನ್ ರಾಷ್ಟ್ರೀಯ ಅಂತಾರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗಳನ್ನು ನೀಡುತ್ತದೆ. ಆಗಾಗ ಸಾಹಿತ್ಯ ಗೋಷ್ಠಿಗಳನ್ನು ಏರ್ಪಡಿಸಲಾಗುತ್ತದೆ. ಸಾಹಿತ್ಯಾಸಕ್ತಿ ಬೆಳೆಸಲು ಸ್ಪರ್ಧೆಗಳನ್ನು ಏರಪಡಿಸಲಾಗುತ್ತದೆ. ಮಧ್ಯಪ್ರಾಚ್ಯ ಸಂಶೋಧನಾ ಕೇಂದ್ರ ಅಪರೂಪದ ಸಾಹಿತ್ಯ ಹಸ್ತಪ್ರತಿಗಳನ್ನು ಸಂಗ್ರಹಿಸಿ ಕಾದಿಡುವ ಕೆಲಸ ಮಾಡುತ್ತದೆ. ಹಲವು ಸಾಹಿತ್ಯ ಕ್ಲಬ್ ಗಳು, ನಾಟಕ ಕ್ಲಬ್ ಗಳು ನಿರಂತರ ಚಟುವಟಿಕೆಗಳನ್ನು ನಡೆಸುತ್ತವೆ.
ಈಗಿನ ಕ್ರೌನ್ ಪ್ರಿನ್ಸ್ ಪ್ರಧಾನಿಯಾದ ನಂತರ ಕೈಕೊಂಡ ವ್ಯಾಪಕ ಸುಧಾರಣಾ ಕಾರ್ಯಗಳಲ್ಲಿ ವಿಷನ್ -೨೦೩೦ ರಂತೆ ಸಾಂಸ್ಕೃತಿಕ ಕ್ಷೇತ್ರದ ಬೆಳವಣಿಗೆಗೂ ಅಪಾರ ಬೆಳವಣಿಗೆಗೆ ಅವಕಾಶದ ಬಾಗಿಲುಗಳನ್ನು ತೆರೆದಿಡಲಾಗಿದೆ. ಕಿಂಗ್ ಸೌದ್ ವಿಶ್ವದ್ಯಾಲಯದಲ್ಲಿ ಪುರಾತತ್ವ ಶಾಸ್ತ್ರ ವಿಭಾಗವೂ ಇದೆ. ಲೋಹದ ಕೆಲಸ, ಸೆರಾಮಿಕ್ಸ್, ಗಾಜಿನ ಕೆತ್ತನೆ, ಚಿತ್ರಕಲೆ, ಶಿಲ್ಪ ಕಲೆ, ಕ್ಯಾಲಿಗ್ರಫಿ ತರಬೇತಿ ನೀಡಲಾಗುತ್ತದೆ. ಹೊಸ ತಲೆಮಾರಿನ ಯುವ ಜನರನ್ನು ಉತ್ತೇಜಿಸಲು ಅನೇಕ ಕಾರ್ಯಕ್ರಮಗಳಿವೆ. ಜೆಡ್ಡಾ, ರಿಯಾಧ, ದಮ್ಮಮ್ ಮೊದಲಾದೆಡೆ ಇರುವ ಮ್ಯೂಸಿಯಂ ಗಳು ರಾಷ್ಟ್ರೀಯ ಪರಂಪರೆಯನ್ನು ಹೊಸ ಜನಾಂಗಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿವೆ. ಒಟ್ಟಾರೆ ಸೌದಿ ರಾಜ ಮನೆತನ / ಅವರ ಸರಕಾರ ದೇಶದ ಸೈತಿಹಾಸಿಕ, ಸಾಂಸ್ಕೃತಿಕ ಮಹತ್ವವನ್ನು ಅರಿತು ಅದನ್ನು ರಕ್ಷಿಸಲು, ಬೆಳೆಸಿ ಉಳಿಸಲು ಸಾಕಷ್ಟು ಯೋಜನಾಬದ್ಧವಾಗಿ ಕೆಲಸ ಮಾಡುತ್ತಿದೆಯೆನ್ನುವುದು ಪ್ರಶಂಸನೀಯ.