ಇಂದಿನ ಸೌದಿ ಅರೇಬಿಯಾ ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಿಗೆ ಎಷ್ಟೊಂದು ಮಹತ್ವ ಕೊಡುತ್ತದೆನ್ನುವುದಕ್ಕೆ ಈ ” ಇತ್ರಾ” ಎಂಬ ಅದ್ಬುತ ಮ್ಯೂಸಿಯಂ ಸಾಕ್ಷಿಯಾಗಿದೆ. ಇತ್ರಾ ಎಂಬ ಅರೇಬಿಯನ್ ಶಬ್ದಕ್ಕೆ ಪುಷ್ಟಿವಂತಿಕೆ, ಬಲಗೊಳಿಸುವಿಕೆ ಎನ್ನುವ ಅರ್ಥಗಳಿವೆ. ಇವು ಸೌದಿ ಯುವಜನಾಂಗದಲ್ಕಿ ವೈಜ್ಞಾನಿಕ ಮನೋಭಾವ ಬೆಳೆಸಲು ಮತ್ತು ದೇಶದ ಸಾಂಸ್ಕೃತಿಕ ಕ್ಷೇತ್ರದ ಕುರಿತು ಆಸಕ್ತಿ ಬೆಳೆಸಲು ರೂಪುಗೊಂಡ ಒಂದು ಮ್ಯೂಸಿಯಂ.
ದೂರದಿಂದ ಮೂರು ಬೃಹತ್ ಕಲ್ಲಿನ ಬಂಡೆಗಳನ್ನು ಒಂದೆಡೆ ಇಟ್ಟಂತೆ ಕಂಡುಬರುವ ಈ ವಿಶಿಷ್ಟ ನಿರ್ಮಾಣ ಹತ್ತಿರ ಹೋದಾಗಲೇ ಅದೊಂದು ಐದಂತಸ್ತುಗಳ ಕಟ್ಟಡವೆಂಬ ಅರಿವಾಗುವುದು. ಇದರ ಹೆಸರು ಕಿಂಗ್ ಅಬ್ದುಲ್ಜೀಜ್ ಸೆಂಟರ್ ಫಾರ್ ವರ್ಲ್ಡ್ ಕಲ್ಚರ್. ನಾರ್ವೇಜಿಯನ್ ವಾಸ್ತು ಶಿಲ್ಪದ ಈ ಅಪೂರ್ವ ಮಾದರಿ ವಿನ್ಯಾಸ ಎಲ್ಲರನ್ನೂ ಆಕರ್ಷಿಸುವಂತಹದು. ೨೦೧೮ ರಲ್ಲಿ ಇದನ್ನು ನಿರ್ಮಿಸಲಾಗಿದ್ದು , ಈ ಮೂರು ‌ಭಾಗಗಳು ಭೂತ, ವರ್ತಮಾನ ಮತ್ತು ಭವಿಷ್ಯದ ಸಂಕೇತಗಳಾಗಿವೆ. ಕಲೆ, ಸಾಹಿತ್ಯ, ವಿಜ್ಞಾನಗಳ ಸಂಗಮ ಇದು. ಇಂದಿನ ಯುವ ಪೀಳಿಗೆಗೆ ಅರೇಬಿಯನ್ ಪಾರಂಪರಿಕ ಸಂಸ್ಕೃತಿಯ ಜತೆಗೆ ಇಂದಿನ ವೈಜ್ಞಾನಿಕ ಬೆಳವಣಿಗೆಗಳತನಕ ಪರಿಚಯಿಸಿ ಅವರಲ್ಲಿ ಈ ಕುರಿತು ಆಸಕ್ತಿ ಬೆಳೆಸುವ ಉದ್ದೇಶದಿಂದ ಈ ಮ್ಯೂಸಿಯಂ ನಿರ್ಮಿಸಲಾಗಿದೆ. ಇದು ಖಂಡಿತವಾಗಿಯೂ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ.
ಮಧ್ಯಪ್ರಾಚ್ಯ ಕಲೆ, ಸಂಸ್ಕೃತಿ, ಇಸ್ಲಾಮಿಕ್ ಕಲೆ, ಅರೇಬಿಯನ್ ಪೆನಿನ್ಸುಲಾದ ನೈಸರ್ಗಿಕ ಇತಿಹಾಸ, ಪ್ರಾಚೀನ ವಸ್ತು ಸಂಗ್ರಹಾಲಯ ಎಲ್ಲವನ್ನೂ ಒಳಗೊಂಡ ಈ ಕಟ್ಟಡದಲ್ಲೊಂದು ದೊಡ್ಡ ಲೈಬ್ರೆರಿಯೂ ಇದೆ. ಅದು ಅರೇಬಿಕ್ ಸಾಹಿತ್ಯದ ಅಧ್ಯಯನಕ್ಕೆ ಪೂರಕವಾದದ್ದು.
ಬೇರೆ ಬೇರೆ ಅಂತಸ್ತುಗಳಲ್ಲಿ ಬೇರೆ ಬೇರೆ ವಿಷಯಗಳ ಮಾಹಿತಿ ದೊರಕುವಂತೆ ಮಾಡಲಾಗಿದೆ.
ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆಯುವಂತಹದು ( ಆಸಕ್ತರಿಗೆ) ಎನರ್ಜಿ ಮ್ಯೂಸಿಯಂ. ಇಲ್ಲಿ ನೈಸರ್ಗಿಕ ಅನಿಲ, ಪೆಟ್ರೋಲ್ ಮೊದಲಾದ ಇಂಧನಗಳನ್ನು ನೆಲದಿಂದ ಮತ್ತು ಸಮುದ್ರದಾಳದಿಂದ ಹುಡುಕಿ ತೆಗೆದು, ಅವನ್ನು ಪರಿಷ್ಕರಿಸುವ ವಿಧಾನಗಳ ಪ್ರಾತ್ಯಕ್ಷಿಕೆಗಳನ್ನೆಲ್ಲ ತೋರಿಸುವ ಲ್ಯಾಬೋರೇಟರಿ. ಇದೊಂದು ಅದ್ಭುತ ಲೋಕವನ್ನೇ ನಮ್ಮೆದುರಿಗೆ ತೆರೆದಿಡುತ್ತದೆ. ಸೌದಿ ಅರೇಬಿಯಾ ವಿಶ್ವದಲ್ಲೇ ಅತಿ ದೊಡ್ಡ ಪೆಟ್ರೋಲಿಯಂ ಉತ್ಪಾದನೆಯ ದೇಶ. ಮೊದಲ ಅಂತಹ ತೈಲ ಬಾವಿ ಕಂಡುಬಂದ ಪ್ರದೇಶದಲ್ಲೇ ಈ ಮ್ಯೂಸಿಯಂ ಸ್ಥಾಪಿಸಲಾಗಿದೆ. ಇದು ದಮಾಮ ಮತ್ತು ಖೋಬರ್ ನಡುವಿನ ಭಾಗದಲ್ಲಿದೆ. ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಬಯಸುವವರಿಗೆ ಅತ್ಯಂತ ಉಪಯುಕ್ತವಾದ ಸ್ಥಳ . ಇಲ್ಲಿ ರಂಗಮಂದಿರ, ಸಿನಿಮಾ ಥಿಯೇಟರ್, ಗ್ರಂಥಾಲಯ, ಚಿತ್ರಕಲಾ ವಿಭಾಗ, ಐಡಿಯಾ ಲ್ಯಾಬ್, ಐತಿಹಾಸಿಕ ಬೆಳವಣಿಗೆ ಮಾಹಿತಿ ವಿಭಾಗ, ಮಕ್ಕಳ ಮ್ಯೂಸಿಯಂ ,ನೈಸರ್ಗಿಕ ಇತಿಹಾಸ, ಅರ್ಬನ್ ವಿಷನ್, ಮೊದಲಾದ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ವಿಭಾಗಗಳಿವೆ.
ಸೌದಿ ಅರೇಬಿಯಾ ಪ್ರವಾಸ ಮಾಡುವವರು ತಪ್ಪದೇ ನೋಡಲೇಬೇಕಾದ ತಾಣ ಈ ಇತ್ರಾ ಮ್ಯೂಸಿಯಂ. ( ಇದರ ಕೆಲ ವಿಡಿಯೋ ದೃಶ್ಯಗಳನ್ನು ಪ್ರತ್ಯೇಕವಾಗಿ ಹಾಕಲಾಗಿದೆ.)