‌‌ ಸೌದಿ ಅರೇಬಿಯಾದಲ್ಲಿ ಸುಮಾರು ೨.೨ ದಶಲಕ್ಷ ಭಾರತೀಯರಿದ್ದಾರೆ ಮತ್ತು ಅವರಲ್ಲಿ ಕನ್ನಡಿಗರ ಸಂಖ್ಯೆ ೪ ಲಕ್ಷದಷ್ಟು. ಆಂಧ್ರ, ಜಾರ್ಖಂಡ್, ತಮಿಳ್ನಾಡು, ಪ. ಬಂಗಾಲ, ಮಹಾರಾಷ್ಟ್ರ, ತೆಲಂಗಾಣ , ಅಲ್ಲದೆ ಬಿಹಾರ, ಉತ್ತರ ಪ್ರದೇಶ, ಗುಜರಾತ ಕಡೆಯವರೂ ಇದ್ದಾರೆ. ವಿದೇಶದವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಸೌದಿ ರಾಷ್ಟ್ರಿಕರಣ ಅಭಿಯಾನದಿಂದಾಗಿ ಕೆಲಸ ಕಳೆದುಕೊಳ್ಳುವ ಭಾರತೀಯರ ಆತಂಕವೂ ಇದ್ದೇಇದೆ. ಕರ್ನಾಟಕ ಕಲ್ಚರಲ್ ಫೌಂಡೇಶನ್, ಎನ್. ಆರ್. ಐ. ಫೋರಮ್ ಗಳು ಈ ವಿಷಯವನ್ನು ಗಮನಿಸಿ ಕ್ರಮ ಕೈಕೊಳ್ಳುತ್ತವೆ. ಸೌದಿ ಮಾರಾಟ ಮಳಿಗೆಗಳಲ್ಲೆಲ್ಲ ಶೇ. ೭೦ ರಷ್ಟು ಸ್ಥಳೀಯ ಸೌದಿಗಳಿಗೆ ಅವಕಾಶ ಇರಬೇಕೆಂಬುದು ಆ ನಿಯಮ.
ಸೌದಿ ಅರೇಬಿಯಾ – ಭಾರತದ ವ್ಯಾಪಾರಿ ಸಂಬಂಧ ಶತಶತಮಾನಗಳಷ್ಟು ಹಳೆಯದು. ರಾಜಕೀಯ ಮತ್ತು ಆಡಳಿತ ಸಂಬಂಧ ೧೯೪೭ ರ ನಂತರದಲ್ಲಿ ಬೆಳೆದುಕೊಂಡಿದ್ದು. ಅದಕ್ಕೂ ಮೊದಲು ೧೯೩೮ ರಲ್ಲಿ ಸೌದಿ ಯಲ್ಲಿ ತೈಲ ಬಾವಿ ಶೋಧವಾದ ನಂತರ ಭಾರತ ಪಾಕ್ ಮೊದಲಾದೆಡೆಗಳಿಂದ ಬರುವ ಕೆಲಸಗಾರರ ಸಂಖ್ಯೆ ಹೆಚ್ಚಾಯಿತು. ೨೦೧೪ ರಲ್ಲಿ ಮನೆಕೆಲಸಗಾರರ ನೇಮಕಾತಿ ಒಪ್ಪಂದವೊಂದು ಉಭಯ ರಾಷ್ಟ್ರಗಳ ನಡುವೆ ಆಗಿದ್ದುಂಟು. ಆ ನಂತರ ೨೦೧೬ ರ ವೇಳೆಗೆ ಐದು ಲಕ್ಷದಷ್ಟು ಭಾರತೀಯರು ಸೌದಿಗೆ ಬಂದರೆನ್ನಲಾಗಿದೆ. ಭಾರತ ಸೌದಿ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಆದ ನಂತರ ಪರಸ್ಪರ ರಫ್ತಿನ ಪ್ರಮಾಣದಲ್ಲಿ ಸಾಕಷ್ಟು ಏರಿಕೆಯಾಗಿದೆ. ಭಾರತದ ನಾಲ್ವರು ಪ್ರಧಾನಿಗಳು ಸೌದಿಗೆ ಭೆಟ್ಟಿ ನೀಡಿದ್ದಾರೆ.( ನೆಹ್ರು, ಇಂದಿರಾ, ಸಿಂಗ್ ಮತ್ತು ಮೋದಿ). ಸೌದಿಯಿಂದ ಪೆಟ್ರೋಲ ಮತ್ತು ಅನಿಲ ಪೂರೈಕೆಯ ಏಳು ಅಗ್ರ ರಾಷ್ಟ್ರಗಳಲ್ಲಿ ಭಾರತ ಐದನೆಯ ಸ್ಥಾನದಲ್ಲಿದೆ.
ಸೌದಿಯಲ್ಲಿ ಹಲವು ಭಾರತೀಯ ಶಾಲೆಗಳೂ ಇವೆ. ಇಂಟರ್ನ್ಯಾಷನಲ್ ಇಂಡಿಯನ್ ಸ್ಕೂಲ್ ಎಂದು ಕರೆಯಲ್ಪಡುವ ಶಿಕ್ಷಣ ಸಂಸ್ಥೆಗಳಲ್ಲಿ ದಮ್ಮಾಮನಲ್ಲಿರುವ ಸಂಸ್ಥೆ ಬಹಳ ದೊಡ್ಡದು. ಅದು ಮೊದಲು ರಾಯಭಾರಿ ಶಾಲೆಯೆನಿಸಿಕೊಂಡಿತ್ತು. ಇದರಡಿಯಲ್ಲಿ ಹತ್ತು ಶಾಲೆಗಳು ಬರುತ್ತಿದ್ದು ರಿಯಾದ, ಜೆಡ್ಡಾ, ಜುಬೇಲ್, ಬುರೈದಾ ಮೊದಲಾದೆಡೆ ಹೆಚ್ಚಾಗಿ ಭಾರತೀಯರ ಮಕ್ಕಳು ಈ ಶಾಲೆಗಳಿಗೆ ಹೋಗುತ್ತವೆ. ಒಟ್ಟು ಸುಮಾರು ೧೪ ಸಾವಿರ ಮಕ್ಕಳಿಂದ ಕೂಡಿದ್ದು ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಎಲ್.ಕೆ.ಜಿ.ಯಿಂದ ೧೨ ನೇ ವರ್ಗದತನಕ ನೀಡಲಾಗುತ್ತದೆ.
ಜುಬೇಲ್ ನಲ್ಲಿರುವ ಇಂ. ಇಂಡಿಯನ್ ಸ್ಕೂಲಿನಲ್ಲೇ ನನ್ನ ಇಬ್ಬರು ಮೊಮ್ಮಕ್ಕಳು ಕಲಿಯುತ್ತಿರುವುದರಿಂದ ನಾನೂ ಈಚೆಗೆ ಅದನ್ನು ನೋಡಲು ಹೋಗಿದ್ದೆ. ತುಂಬ ಶಿಸ್ತಿನ ಮತ್ತು ಸುಸಜ್ಜಿತವಾದ ಶಾಲೆ. ನನ್ನ ಮೊಮ್ಮಗ ಅದ್ವೈತನ ಪಠ್ಯಗಳಲ್ಲಿ‌ ಕನ್ನಡವೂ ಸೇರಿದೆ. ಅದರ ಹೆಸರು “ಕನ್ನಡ ಪರಿಮಳ.”. ಇದು ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದದ್ದು. ಶ್ರೀರವಿ ಎಂಬವರು ಅದರ ಸಂಪಾದಕರು. ಗದ್ಯಪಾಠಗಳು ೧೪ , ಪದ್ಯಗಳು ಎಂಟು ಇವೆ. ಅಂತಹ ಉನ್ನತ ಗುಣ ಮಟ್ಟದ್ದೆಂದೇನೂ ನನಗೆ ಅನಿಸಲಿಲ್ಲ. ಕನ್ನಡ ಭಾಷೆ ನೆನಪಿನಲ್ಲಿ ಉಳಿಯುವಂತಾಗಲು ಕಲಿಸಬಹುದು. ನಮ್ಮ ಮಕ್ಕಳು ಕನ್ನಡವನ್ನು ಪೂರ್ತಿ ಮರೆಯದಂತಾಗಲು ಇದು ಆವಶ್ಯಕ.
ನನಗೆ ಇಲ್ಲಿ ನೆನಪಾಗುವುದು ಮಹಾರಾಷ್ಟ್ರದ ಕನ್ನಡ ಪಠ್ಯಪುಸ್ತಕಗಳನ್ನು ಕರ್ನಾಟಕದ ಕನ್ನಡ ಪಠ್ಯಪುಸ್ತಕಗಳಿಗಿಂತ ಚೆನ್ನಾಗಿ ಸಿದ್ಧಪಡಿಸುತ್ತಿದ್ದವರು ಉತ್ತರ ಕನ್ನಡದವರಾದ ಶ್ರೀ ಕೃ. ಶಿ. ಹೆಗಡೆ ಎಂಬವರು. ಅವರ ಬಗ್ಗೆ ನಾನು ಒಂದು ಜೀವನ ಚರಿತ್ರೆ ಬರೆದದ್ದು ಪ್ರಕಟಗೊಂಡಿದೆ. ಕರ್ನಾಟಕದ ಪಠ್ಯಪುಸ್ತಕ ಸಮಿತಿಯಲ್ಲಿ ವಶೀಲಿ, ಸಿಫಾರಸುಗಳಿಂದ ಬರುವವರೇ ಜಾಸ್ತಿ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.