ದೇಶಕ್ಕೆ ಹೋಗಲಿ, ಅಲ್ಲಲ್ಲಿಯ ಆಹಾರ ಪದ್ಧತಿ ಬೇರೆ ಬೇರೆಯದೇ ಆಗಿರುತ್ತದೆ. ಅಲ್ಲಲ್ಲಿಯ ಸ್ಥಾನಿಕ ವೈಶಿಷ್ಟ್ಯ, ಪಾರಂಪರಿಕವಾದ ಸ್ವರೂಪದ ಪ್ರಭಾವ ಆಹಾರ ಪದ್ಧತಿಯ ಮೇಲೂ ಬಿದ್ದೇಬೀಳುತ್ತದೆ. ಸೌದಿ ಅರೇಬಿಯಾವೇನೂ ಅದಕ್ಕೆ ಹೊರತಲ್ಲ. ಶತಶತಮಾನಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸೌದಿ ಬೆಡೋಯಿನ್ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಆಹಾರ ಪದ್ಧತಿಯೊಡನೆ ಇಂದಿನ ಆಧುನಿಕ ಬದಲಾವಣೆಗಳನ್ನೂ ಅಳವಡಿಸಿಕೊಂಡು ಮುನ್ನಡೆದಿದೆ. ಇಲ್ಲಿ ಮಾಂಸ ಮತ್ತು ಅಕ್ಕಿಗಳು ಆಹಾರದ ಮುಖ್ಯ ಅಂಶಗಳಾಗಿದ್ದು ಅಕ್ಕಿಯ ಬಳಕೆಯಲ್ಲಿ ಭಾರತೀಯ ಪ್ರಭಾವವೂ ಎದ್ದುಕಾಣುತ್ತಿರುವುದಕ್ಕೆ ಕಾರಣ ಭಾರತ ಅರೇಬಿಯಾಗಳ ಹಳೆಯ ಸಂಬಂಧ. ಅದು ಒಂಟೆ ಕಾರವಾನ್ ಗಳ ವ್ಯಾಪಾರಿ ಸಂಬಂಧ. ಮತ್ಸ್ಯಾಹಾರ ಕಡಿಮೆಯಾದರೂ ಕರಾವಳಿ ಭಾಗದಲ್ಲಿ ಅದರ ಬಳಕೆ ಇದ್ದೇಇದೆ.
ಇಲ್ಲಿ ಆಹಾರ ಎನ್ನುವುದು ಆತಿಥ್ಯದ ಸಂಕೇತ. ಹಿಂದೆಲ್ಲ ಒಣಗಿದ ಖರ್ಜೂರ ಮತ್ತು ಒಂಟೆಹಾಲು ಬಳಕೆ ಇತ್ತು. ಕ್ರಮೇಣ ಅರೇಬಿಯನ್ನರು ಕಾಫಿಪ್ರಿಯರಾದರು. ಸುಗಂಧಭರಿತ ಬಿಸಿಬಿಸಿ ಹಬೆಯಾಡುವ ಕಾಫಿ ಮತ್ತು ಹಸಿ ಖರ್ಜೂರದ ಸಿಹಿ ಭಕ್ಷ್ಯಗಳು ಅರೇಬಿಯನ್ನರ ಆತಿಥ್ಯದ ಮುಖ್ಯ ಲಕ್ಷಣಗಳಾದವು. ದೊಡ್ಡದೊಂದು ಪಾತ್ರೆಯನ್ನು ಮಧ್ಯದಲ್ಲಿಟ್ಟು ಎಲ್ಲರೂ ಸುತ್ತ ಕುಳಿತು ಊಟ ಮಾಡುವ ಕುಟುಂಬಶೈಲಿ ಪಾರಂಪರಿಕವಾದದ್ದು. ಈಚೆಗೆ ಕೆಲವೊಂದು ಪದ್ಧತಿಗಳು ಬದಲಾಗಿರುವುದು ಸಹಜ. ಆಧುನಿಕ ಜಗತ್ತಿನ ಬದಲಾವಣೆಗಳ ಪರಿಣಾಮ ಆಹಾರ ಪದ್ಧತಿಯ ಮೇಲೂ ಆಗಿದೆ.
ಅಕ್ಕಿ, ಗೋದಿ, ಕುರಿ ಅಥವಾ ಕೋಳಿ ಮಾಂಸ, ಖರ್ಜೂರ, ಮೊಸರು, ಬಟಾಟೆ, ಸುಗಂಧಿತ ಮಸಾಲೆ ಪದಾರ್ಥಗಳು ಅರೇಬಿಯನ್ನರ ಆಹಾರದಲ್ಲಿ ಸರ್ವೇಸಾಮಾನ್ಯ.
ಕಬ್ಸಾ
******
ಇಲ್ಲಿಯ ರಾಷ್ಟ್ರೀಯ ಆಹಾರಕ್ಕೆ ಕಬ್ಸಾ ಎಂದು ಹೆಸರು. ಇದು ಮಾಂಸ, ತರಕಾರಿ, ಬಟಾಟೆ ಮಿಶ್ರಿತ ಅಕ್ಕಿಯ ಆರೋಗ್ಯಕರ ಸಂಯೋಜನೆಯಿಂದ ಕೂಡಿದ್ದು. ಕರಿಮೆಣಸು, ಲವಂಗ, ಏಲಕ್ಕಿ, ಕೇಸರಿ, ಕಪ್ಪುಸುಣ್ಣ, ಜಾಯಿಕಾಯಿ, ಬೇ ಎಲೆ ಮೊದಲಾದವುಗಳಿಂದೊಡಗೂಡಿದ ಸುಗಂಧಯುಕ್ತ ರಾಷ್ಟ್ರೀಯ ಖಾದ್ಯ.
ಮುತಬ್ಬಕ್
*********
ಇದಕ್ಕೆ ಮಡಿಸಿದ ಎಂಬ ಅರ್ಥ. ಬೀದಿ ಬದಿಯ ಜನಪ್ರಿಯ ಆಹಾರಗಳಲ್ಲಿದು ಒಂದು. ಕೊಚ್ಚಿದ ಮಾಂಸ, ಮೊಟ್ಟೆ, ಟೊಮ್ಯಾಟೊ, , ಈರುಳ್ಳಿಗಳ ಲಘು ಮಿಶ್ರಣ ತುಂಬಿ ಮಡಿಚಿದ , ಹುರಿದ ಪ್ಯಾನ್ ಕೇಕ್. ತುಪ್ಪುಳದಂತಿರುವ ಆಮ್ಲೆಟ್ ಮಡಚಿ ಚೌಕಾಕಾರವಾಗಿ ಕತ್ತರಿಸಿದಂತಿರುವ ತಿಂಡಿ.
ಸಂಬುಸಕ್/ ಸಂಬೂಸಾ
*********************
ನಮ್ಮ ಸಮೋಸಾದಂತಿರುವ ಜನಪ್ರಿಯ ತಿಂಡಿ. ಡೀಒ್ ಫ್ರೈಡ್ ಸ್ನ್ಯಾಕ್ಸ್. ತರಕಾರಿ ಸಹಿತ ಮಾಂಸ- ಚೀಸ್ ಮಿಶ್ರಿತ.
ಫಲಾಫೆಲ್
*******
ಡೀಪ್ ಫ್ರೈಡ್ ರಂಡ್ ಸ್ನ್ಯಾಕ್ಸ್. ಬೀನ್ಸ್, ನೆಲಗಡಲೆ, ಉಪ್ಪಿನಕಾಯಿ, ತರಕಾರಿ ಸಹಿತವಾದ ಸಂಜೆಯ ತಿಂಡಿ.
ಸಲೀಗ್
******
ಸಾರು ಮತ್ತು ಹಾಲಿನೊಂದಿಗೆ ಬೇಯಿಸಿದ ಸಣ್ಣ ಬಿಳಿ ಅಕ್ಕಿ ಆಧಾರಿತ ಚಳಿಗಾಲದ ತಿಂಡಿ. ಉಪ್ಪಿನಕಾಯಿ, ನಿಂಬೆಹಣ್ಣು, ಚಿಲ್ಲಿ ಟೊಮೆಟೊ ಸಾಸ್ ಸಹಿತ ರುಚಿಕರ ಖಾದ್ಯ.
ಹೈನಿನಿ
******
ಪ್ರಸಿದ್ಧ ಅರೇಬಿಯನ್ ಖರ್ಜೂರದಿಂದ ಮಾಡುವ ರುಚಿಕರ ಸಿಹಿ ತಿಂಡಿ. ಹಿಟ್ಟು ಬೆಣ್ಣೆ ಖರ್ಜೂರ, ಕೇಸರಿ ಏಲಕ್ಕಿ ಮಿಶ್ರಿತ ಸುಗಂಧಿತ ಮಸಾಲೆಯುಕ್ತವಾದದ್ದು. ಬಿಸಿಕಾಫಿಯೊಂದಿಗೆ ಸೇವಿಸುತ್ತಾರೆ.
ಇವಲ್ಲದೆ ಜರೀಸ್/ ಹರೀಸ್, ಜರ್ಬ್, ಮಂಡಿ, ಶಕ್ಷೌಕ್ ಮೊದಲಾದ ತಿಂಡಿಗಳೂ ಜನಪ್ರಿಯವಾಗಿವೆ. ಮದ್ಯವಿಲ್ಲದಿದ್ದರೂ ಹಲವು ಬಗೆಯ ಹಣ್ಣುಗಳ ರಸದಿಂದ ಕೂಡಿದ ಕಾಕ್ಟೇಲ್ ಪಾನೀಯಗಳು , ಸೌದಿ ಶಾಂಪೇನ್, ಕಹ್ವಾ, ಚಹಾ ಕಾಫಿ , ಜಂಕ್ ಫುಡ್, ಫಾಸ್ಟ್ ಫುಡ್ ಎಲ್ಲ ಕಡೆ ಇದ್ದೇಇದೆ. ತಂದೂರಿ ಬೇಯಿಸುವಿಕೆ ಪದ್ಧತಿ ಸಾಮಾನ್ಯ.
ಬಹುತೇಕ ಅರಬ್ಬರದು ವಿಲಾಸೀ ಜೀವನ. ಬಹಳ ಮಟ್ಟಿಗೆ ಆಲಸಿಗಳೂ ಹೌದು. ಈಚೆಗೆ ಆಧುನಿಕ ಜೀವನ ಶೈಲಿಯನ್ನೂ ಅಳವಡಿಸಿಕೊಳ್ಳುತ್ತಿದ್ದಾರೆ. ಹಿಂದಿನ ಹಲವು ನಿರ್ಬಂಧಗಳು ಸಡಿಲಾಗಿರುವುದರಿಂದ ಸಕುಟುಂಬ ಮನೋರಂಜನೆ ಪಡೆಯುವವರ ಪ್ರಮಾಣ ಹೆಚ್ಚಿದೆ. ಭಾರತೀಯರು ಸಹ ಇಲ್ಲಿಯ ಜೀವನ ಪದ್ಧತಿಗೆ ಒಗ್ಗಿಕೊಂಡಿದ್ದಾರೆ.
ಎಲ್.ಎಸ್. ಶಾಸ್ತ್ರಿ, ಹಿರಿಯ ಪತ್ರಕರ್ತರು, ಲೇಖಕರು, ಸಾಹಿತಿಗಳು, ಬೆಳಗಾವಿ