ನಾವಿರುವ ಜುಬೇಲ್ ನಿಂದ ಸುಮಾರು ೮೦ ಕಿ. ಮೀ. ದೂರದ ದಮ್ಮಾಮ್ ನಗರದ ಅಲ್ ಖೋಬರ್ ಕಾರ್ನಿಚೆ – ಬೀಚ್ ಪ್ರದೇಶದಲ್ಲಿರುವ ಹೆರಿಟೇಜ್ ವಿಲೇಜ್ ನಮಗೆ ಪ್ರಾಚೀನ ಸೌದಿ ಅರೇಬಿಯಾದ ಹಿಂದಿನ ಹಳ್ಳಿಯ ಬದುಕು ಸಂಸ್ಕೃತಿ ಸಂಪ್ರದಾಯಗಳ ಪರಿಚಯ ಮಾಡಿಕೊಡುವಂತಹ ಪ್ರೇಕ್ಷಣೀಯ ತಾಣ. ಮಣ್ಣಿನ ದೊಡ್ಡ ಕೋಟೆಯ ಆಕಾರದಲ್ಲಿ ಸಮುದ್ರದ ದಡದಲ್ಲಿ ನಿರ್ಮಿಸಿರುವ ಈ ಐದಂತಸ್ತುಗಳ ವಿಶಿಷ್ಟ ನಿರ್ಮಾಣದ ಒಳಹೊಕ್ಕಾಗ ನಮಗೆ ಸಮಗ್ರ ಸೌದಿಅರೇಬಿಯನ್ನರ ಹಿಂದಿನ ಬದುಕಿನ ದರ್ಶನವಾಗುತ್ತದೆ. ಶತಮಾನಗಳ ಹಿಂದೆ ಸೌದಿ ಹಳ್ಳಿಗಳು ಹೇಗಿದ್ದವು, ಜನಜೀವನದ ರೀತಿನೀತಿಗಳು , ಆಚರಣೆಗಳು, ಅವರು ಅಂದು ಬಳಸುತ್ತಿದ್ದ ವಸ್ತುಗಳು ಎಲ್ಲವೂ ನಮಗಿಲ್ಲಿ ನೋಡಸಿಗುತ್ತವೆ.
ಮೊದಲ ಅಂತಸ್ತಿನಲ್ಲಿರುವ ಲಾಬಿ ಹೊಟೆಲಿನಲ್ಲಿ ಸೌದಿ ಪಾಕ ಪದ್ಧತಿಯ ರುಚಿ ಸವಿಯಬಹುದು. ಮೂರನೆಯ ಮಹಡಿಯಲ್ಲಿ ವಿಲೇಜ್ ಕೆಫೆ ಇದ್ದು ಅಲ್ಲಿ ಗ್ರಾಮ ಮಾದರಿಯ ಆತಿಥ್ಯ ಪಡೆಯಬಹುದು. ಬೇರೆ ಬೇರೆ ವಿಭಾಗಗಳಲ್ಲಿ ಪ್ರಾಚೀನ ಕಲಾಕೃತಿಗಳು, ಆಗಿನ ಜನ ಬಳಸುತ್ತಿದ್ದ ಬಗೆಬಗೆಯ ಮಣ್ಣಿನ, ತಾಮ್ರದ ಪಾತ್ರೆಗಳು, ಆಯುಧಗಳು, ಬಂದುಕುಗಳು, ನೂರಿನ್ನೂರು ವರ್ಷಗಳ ಹಿಂದಿನ ಬಳಕೆಯ ಎಲ್ಲ ವಸ್ತುಗಳ ಒಂದು ಅದ್ಭುತ ಸಂಗ್ರಹ ಇಲ್ಲಿದೆ. ಸೌದಿ ಅರಸರ ಹಳೆಯ ಬೆಲೆಬಾಳುವ ಕಾರುಗಳ ಸಂಗ್ರಹ, ಬೈಸಿಕಲ್ಲುಗಳು , ರೇಡಿಯೋ ಟ್ರಾನ್ಸಿಸ್ಟರುಗಳು ಹೊಲಿಗೆ ಮೆಶಿನ್ನುಗಳು, ಲಾಂದ್ರಗಳು, ಲಾಟೀನುಗಳು, ಎಲ್ಲವೂ ನಮಗೆ ನಮ್ಮ ಹಿಂದಿನ ಜೀವನವನ್ನು ನೆನಪಿಸಿಕೊಡುತ್ತವೆ. ಸೌದಿಯ ಹಿಂದಿನ ಸಾಮ್ರಾಜ್ಯಗಳ ಕಾಲದ ಬದುಕಿನ ಸ್ವರೂಪವನ್ನು ಅರಿಯಲು ನೆರವಾಗುತ್ತದೆ.
ಈ ಹೆರಿಟೇಜ್ ವಿಲ್ಲೇಜ್ ಕೋಟೆಯ ಹಿಂಬದಿಗೆ ಸುಂದರವಾದ ಸಮುದ್ರದ ಬೀಚು ಸಹ ಇರುವುದರಿಂದ ಪ್ರವಾಸಿಗರ ಮನ ಸೆಳೆಯುವಂತಹ ಸ್ಥಳವಾಗಿದೆ. ಹಲವು ಕಿಲೋಮೀಟರುಗಳತನಕದ ಬೀಚುಗಳನ್ನು ಅತ್ಯಂತ ಸ್ವಚ್ಛವಾಗಿ ಮತ್ತು ಸುವ್ಯವಸ್ಥಿತವಾದ ರೀತಿಯಲ್ಲಿ ಇರಿಸಿಕೊಳ್ಳಲಾಗುತ್ತದೆ. ಕಳೆದ ವಾರ ಇತ್ರಾ ಕಲ್ಚರಲ್ ಮ್ಯೂಸಿಯಂ ನೋಡಿದ್ದ ನಮಗೆ ಈ ವಾರ ಈ ಹೆರಿಟೇಜ್ ವಿಲ್ಲೇಜ್ ಬೇರೆ ಬಗೆಯ ಅಪೂರ್ವ ಅನುಭವ ನೀಡಿತು. ನನಗನಿಸುವಂತೆ ಈ ಹೆರಿಟೇಜ್ ವಿಲ್ಲೇಜ್ ನಲ್ಲಿ ನಾವು ನೋಡುವ ಬಹಳಷ್ಟು ವಸ್ತುಗಳು ಭಾರತದಿಂದ ಬಂದಿದ್ದಿರಬೇಕು. ಭಾರತ ಮತ್ತು ಅರಬ್ ದೇಶಗಳ ನಡುವಿನ ಪರಸ್ಪರ ವ್ಯಾಪಾರ ಸಂಬಂಧ ಶತಶತಮಾನಗಳ ಹಿಂದಿನದು. ಆ ಸಂಬಂಧವನ್ನು ನೆನಪಿಸುವಂತಿದೆ ಈ ಸಂಗ್ರಹಾಲಯ. ಯಾವುದೇ ಒಂದು ದೇಶದ ಇತಿಹಾಸವನ್ನು , ಸಂಸ್ಕೃತಿ ಸಂಪ್ರದಾಯಗಳನ್ನು ಅರಿಯಲು ಇದು ಸಹಾಯಕ.